ಕೋವಿಡ್ – 19 ಸಾಂಕ್ರಾಮಿಕದ ನಂತರ ಮಿಲಿಯನ್‌ಗಟ್ಟಲೆ ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಆನ್‌ಲೈನ್ ಕಲಿಕೆಯ ಮೂಲಕ ಇದೀಗ ಮಕ್ಕಳು ಪಾಠ ಪ್ರವಚನ ಪಡೆಯುತ್ತಿದ್ದು ಶಿಕ್ಷಣ ಪದ್ಧತಿಯ ವಿಧಾನವೇ ಬದಲಾಗಿದೆ ಎಂದು ಅಮೆರಿಕದ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ತಿಳಿಸಿದ್ದಾರೆ.
ಈ ಕುರಿತು ಆಂಟೋನಿಯೊ ಟ್ವೀಟ್ ಮಾಡಿದ್ದು ಕೊರೋನಾ ಆತಂಕದ ನಡುವೆ ಶಿಕ್ಷಣ ಬಿಕ್ಕಟ್ಟನ್ನು ನಾವು ತೀವ್ರವಾಗಿ ಅನುಭವಿಸುತ್ತಿದ್ದು 156 ಮಿಲಿಯನ್ ಮಕ್ಕಳು ಶಾಲೆಯ ಮುಚ್ಚುವಿಕೆಯಿಂದ ತೊಂದರೆಗೆ ಒಳಗಾಗಿದ್ದರೆ. 25 ಮಿಲಿಯನ್ ಮಕ್ಕಳು ಶಾಲೆಗೆ ಹಿಂತಿರುಗುವುದು ಅಸಂಭವವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಾಂಕ್ರಾಮಿಕದಿಂದ ಚೇತರಿಕೆ ಹೊಂದಿದ ಒಡನೆಯೇ ಶಿಕ್ಷಕರು, ಡಿಜಿಟಲ್ ಕಲಿಕೆ ಹಾಗೂ ಭವಿಷ್ಯಕ್ಕಾಗಿ ಸರಿಹೊಂದುವಂತಹ ಕಲಿಕಾ ವ್ಯವಸ್ಥೆಯ ಮೇಲೆ ನಾವು ಹೆಚ್ಚಿನ ಗಮನವಹಿಸಬೇಕು ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾವೈರಸ್ ಸಂಪನ್ಮೂಲ ಕೇಂದ್ರದ ಇತ್ತೀಚಿನ ಮಾಹಿತಿಯ ಪ್ರಕಾರ ಒಟ್ಟಾರೆ ಜಾಗತಿಕ ಕೋವಿಡ್ -19 ಪ್ರಕರಣಗಳು 198.1 ಮಿಲಿಯನ್‌ಗಿಂತ ಹೆಚ್ಚಾಗಿದೆ, ಸಾವುಗಳು 4.22 ಮಿಲಿಯನ್‌ಗಿಂತ ಹೆಚ್ಚಾಗಿದೆ ಮತ್ತು ಲಸಿಕೆಗಳು 4.11 ಬಿಲಿಯನ್‌ಗಿಂತ ಹೆಚ್ಚಾಗಿದೆ. ತನ್ನ ಇತ್ತೀಚಿನ ಅಪ್‌ಡೇಟ್‌ನಲ್ಲಿ, ಜಾನ್ಸ್ ಹಾಪ್ಕಿನ್ಸ್ ಪ್ರಸ್ತುತ ಜಾಗತಿಕ ಕೇಸ್‌ಲೋಡ್, ಸಾವಿನ ಸಂಖ್ಯೆ ಮತ್ತು ಲಸಿಕೆಗಳ ಸಂಖ್ಯೆ ಕ್ರಮವಾಗಿ 198,175,138, 4,221,996 ಮತ್ತು 4,110,644,112 ಎಂದು ತಿಳಿಸಿದೆ.
ಕೋವಿಡ್ ಮಕ್ಕಳ ಬೌದ್ಧಿಕ ಮಟ್ಟವನ್ನು ಹಾಳುಗೆಡವುತ್ತಿದ್ದು ಸರಕಾರ ಈಗ ಮಕ್ಕಳನ್ನು ಮುಂದಿನ ತರಗತಿಗಳಿಗೆ ಸಾಮೂಹಿವಾಗಿ ತೇರ್ಗಡೆಗೊಳಿಸುತ್ತಿದೆ. ಆನ್‌ಲೈನ್ ತರಗತಿಗಳಿಂದ ಅವರ ಬೌದ್ಧಿಕ ವಿಕಸನ ಉಂಟಾಗುವುದಿಲ್ಲ. ಅವರ ಸುಪ್ತ ಮನಸ್ಸಿನ ಪ್ರತಿಭೆ ಇದರಿಂದ ಕಮರಿ ಹೋಗುತ್ತದೆ. ಕಲಿಕೆಯಿಂದ ಹಿಂದುಳಿದ ವಿದ್ಯಾರ್ಥಿಗಳಿಗೆ ಬೆಂಬಲ ನೀಡಲು ಸಾಧ್ಯವಾಗುವುದಿಲ್ಲ. ಆನ್‌ಲೈನ್ ಶಿಕ್ಷಣ ಪದ್ಧತಿಯಿಂದ ಮಕ್ಕಳು ಶಾಲಾ ಪರಿಸರದಿಂದ ವಂಚಿತರಾಗುತ್ತಿದ್ದು ಈ ವರ್ಷ ಕೂಡ ಆನ್‌ಲೈನ್ ಪಾಠ ಪ್ರವಚನಗಳನ್ನೇ ನಂಬುವಂತಾಗಿದೆ.
ವಿಶ್ವಾದ್ಯಂತ ಮಕ್ಕಳು ತೀವ್ರವಾಗಿ ಆನ್‌ಲೈನ್ ಪಾಠ ಪ್ರವಚನಗಳಿಂದ ಸಂಕಟಕ್ಕೆ ಒಳಗಾಗಿದ್ದಾರೆ. ಶಿಕ್ಷಕರು ಹೇಳುವುದು ಸರಿಯಾಗಿ ಅರ್ಥವಾಗುತ್ತಿಲ್ಲ ಎಂಬುದು ಮಕ್ಕಳ ಗೋಳಾದರೆ, ನಾವು ಹೇಳುವುದು ಮಕ್ಕಳಿಗೆ ಅರ್ಥವಾಗುತ್ತಿದೆಯೋ ಇಲ್ಲವೋ ಎಂಬುದು ಶಿಕ್ಷಕರ ಗೋಳಾಗಿದೆ.
ಭಾರತದಲ್ಲಿ ಕೂಡ ಶಿಕ್ಷಣ ವ್ಯವಸ್ಥೆ ಹದಗೆಡುತ್ತಿದ್ದು ಆನ್‌ಲೈನ್ ಶಿಕ್ಷಣ ಎಲ್ಲಾ ಮಕ್ಕಳಿಗೆ ದೊರೆಯುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ, ಮೊಬೈಲ್ ಲಭ್ಯತೆ ಇಲ್ಲದಿರುವುದು, ವಿದ್ಯುತ್ ಸಮಸ್ಯೆ ಹೀಗೆ ಒಂದಿಲ್ಲೊಂದು ಸಮಸ್ಯೆಗಳನ್ನು ಮಕ್ಕಳು ಅನುಭವಿಸುತ್ತಿದ್ದಾರೆ. ಇನ್ನು ಶಿಕ್ಷಕರೂ ಇದೇ ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇನ್ನು ಹೆಚ್ಚಿನ ಶಿಕ್ಷಕರು ಸಂಬಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸರಕಾರ ಅರ್ಧ ಸಂಬಳವನ್ನು ಮಾತ್ರವೇ ನೀಡುತ್ತಿದ್ದು ಇದರಿಂದ ಸಂಸಾರ ತೂಗಿಸುವುದು ಕಷ್ಟವಾಗುತ್ತಿದೆ ಎಂಬುದು ಶಿಕ್ಷಕರ ಅಳಲಾಗಿದೆ.
ಆನ್‌ಲೈನ್ ತರಗತಿಗಳು ಆಫ್‌ಲೈನ್ ತರಗತಿಯಂತೆ ಅಷ್ಟೊಂದು ಪರಿಣಾಮಕಾರಿಯಲ್ಲ ಎಂಬುದು ಹೆಚ್ಚಿನ ಶಿಕ್ಷಕರು ಹಾಗೂ ಮಕ್ಕಳ ಅಭಿಪ್ರಾಯವಾಗಿದೆ. ಆನ್‌ಲೈನ್ ಶಿಕ್ಷಣದಲ್ಲಿ ನಾವು ಶಾಲೆಯಲ್ಲಿದ್ದಂತಹ ಅನುಭವವಾಗುತ್ತಿಲ್ಲ ಮುಂದಿನ ಭವಿಷ್ಯದ ಕುರಿತು ಚಿಂತೆಯಾಗುತ್ತಿದೆ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ