UK Covid Strain: ಇಂಗ್ಲೆಂಡ್​ನಿಂದ ಬೆಂಗಳೂರಿಗೆ ಬಂದಿಳಿದ ವಿಮಾನ; 243 ಪ್ರಯಾಣಿಕರ ಮೇಲೆ ತೀವ್ರ ನಿಗಾ

Mutant Coronavirus | ರೂಪಾಂತರಿ ಕೊರೋನಾ ಭೀತಿಯ ನಡುವೆ ಇಂದು ಮುಂಜಾನೆಯ ವಿಮಾನದಲ್ಲಿ ಇಂಗ್ಲೆಂಡ್​ನಿಂದ 243 ಪ್ರಯಾಣಿಕರು ಬೆಂಗಳೂರಿಗೆ ಬಂದಿದ್ದಾರೆ. ಇಂದು ಬೆಳಗ್ಗೆ 10 ಗಂಟೆಯವರೆಗೂ ಟೆಸ್ಟಿಂಗ್, ಸ್ಕ್ರೀನಿಂಗ್ ನಡೆಯುತ್ತದೆ.

ಬೆಂಗಳೂರು ಏರ್​ಪೋರ್ಟ್​

ಬೆಂಗಳೂರು ಏರ್​ಪೋರ್ಟ್​

  • Share this:
ಬೆಂಗಳೂರು (ಜ. 10): ಇಂಗ್ಲೆಂಡ್​ನಲ್ಲಿ ಮತ್ತೆ ಹೆಚ್ಚಾಗಿರುವ ರೂಪಾಂತರಿ ಕೊರೋನಾ ಈಗಾಗಲೇ ಭಾರತಕ್ಕೂ ಕಾಲಿಟ್ಟಿದೆ. ಇದರ ನಡುವೆ 2 ದಿನಗಳಿಂದ ಭಾರತಕ್ಕೆ ಇಂಗ್ಲೆಂಡ್ ವಿಮಾನಗಳ ಸಂಚಾರವನ್ನು ಪುನರಾರಂಭಿಸಲಾಗಿದೆ. ಬೆಂಗಳೂರಿಗೆ ಕೂಡ ಇಂದಿನಿಂದ ಮತ್ತೆ ಇಂಗ್ಲೆಂಡ್​ನಿಂದ ವಿಮಾನ ಸಂಚಾರವನ್ನು ಆರಂಭಿಸಲಾಗಿದ್ದು, ಇಂದು ಮುಂಜಾನೆ ಒಂದು ವಿಮಾನ ಕೆಂಪೇಗೌಡರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ದೇಶದಲ್ಲಿ ಮಾತ್ರವಲ್ಲದೆ ಕರ್ನಾಟಕದಲ್ಲೂ ರೂಪಾಂತರಿ ಕೊರೋನಾ ಭೀತಿ ಹೆಚ್ಚಾಗಿದೆ. ಈ ಹಿಂದೆ ಇಂಗ್ಲೆಂಡ್​ನಿಂದ ಬಂದಿಳಿದಿದ್ದ ಪ್ರಯಾಣಿಕರಲ್ಲಿ ರೂಪಾಂತರಿ ಕೊರೋನಾ ವೈರಸ್​ ಪತ್ತೆಯಾಗಿತ್ತು. ಇದಾದ ನಂತರ ಇಂಗ್ಲೆಂಡ್ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿತ್ತು. ಆದರೆ, ಕ್ವಾರಂಟೈನ್ ಭೀತಿಯಿಂದ ಇಂಗ್ಲೆಂಡ್​ನಿಂದ ಬಂದಿದ್ದ ಹಲವು ಪ್ರಯಾಣಿಕರು ನಾಪತ್ತೆಯಾಗಿದ್ದರು. ಇದು ಸರ್ಕಾರಕ್ಕೆ ದೊಡ್ಡ ತಲೆನೋವು ತಂದಿಟ್ಟಿತ್ತು.

ಬಳಿಕ, ಇಂಗ್ಲೆಂಡ್​ನಲ್ಲಿ ರೂಪಾಂತರಿ ಕೊರೋನಾ ಕೇಸ್​ಗಳು ವ್ಯಾಪಕವಾಗಿ ಹರಡತೊಡಗಿದ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಡಿ. 23ರಿಂದ ಇಂಗ್ಲೆಂಡ್-ಭಾರತ ನಡುವಿನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಜನವರಿ 8ರಿಂದ ಇಂಗ್ಲೆಂಡ್ ವಿಮಾನಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಇದಾದ ಬಳಿಕ ಇಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇಂಗ್ಲೆಂಡ್​ನಿಂದ ಮೊದಲ ವಿಮಾನ ಬಂದಿಳಿದಿದೆ. ಸುಮಾರು ಒಂದು ತಿಂಗಳ ನಂತರ ಯುಕೆಯಿಂದ ಬೆಂಗಳೂರಿಗೆ ವಿಮಾನ ಆಗಮಿಸಿದ್ದು, ಕೊರೋನಾ ಮಾರ್ಗಸೂಚಿಗಳ ಪ್ರಕಾರ 72 ಗಂಟೆ ಮೊದಲು ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಸರ್ಟಿಫಿಕೇಟ್ ಇದ್ದವರಿಗೆ ಮಾತ್ರ ವಿಮಾನದಲ್ಲಿ ಬರಲು ಅನುಮತಿ ನೀಡಲಾಗಿದೆ.

ಇಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಮತ್ತೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಲಾಗಿದೆ. ಆ ಪರೀಕ್ಷೆಯ ವರದಿ ಬರುವವರೆಗೆ ಯಾರನ್ನೂ ಹೊರಗಡೆ ಬಿಡುವುದಿಲ್ಲ. ವಿಮಾನ ನಿಲ್ದಾಣದ ಬಳಿ ಕೊರೋನಾ ಪಾಸಿಟಿವ್ ಬಂದವರಿಗೆ ಸಾಂಸ್ಥಿಕ ಗೃಹಬಂಧನದಲ್ಲಿರಿಸಲಾಗುತ್ತದೆ. ಕೊರೋನಾ ನೆಗೆಟಿವ್ ಬಂದವರು ಮನೆಯಲ್ಲಿಯೇ 14 ದಿನ ಕ್ವಾರಂಟೈನ್ ಆಗಬೇಕು. ಒಂದುವೇಳೆ ಹೋಂ ಕ್ವಾರಂಟೈನ್ ಆದವರಿಗೆ ಕೊರೋನಾ ಪಾಸಿಟಿವ್ ಬಂದರೆ ವಿಮಾನದಲ್ಲಿ ಸೀಟ್ ಅಕ್ಕ-ಪಕ್ಕ, ಹಿಂದೆ-ಮುಂದೆ ಇರುವ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಸಾಂಸ್ಥಿಕ ಗೃಹಬಂಧನದಲ್ಲಿರಿಸಲು ವ್ಯವಸ್ಥೆ ಮಾಡಲಾಗಿದೆ.

ಇಂದು ಮುಂಜಾನೆಯ ವಿಮಾನದಲ್ಲಿ ಇಂಗ್ಲೆಂಡ್​ನಿಂದ 243 ಪ್ರಯಾಣಿಕರು ಬೆಂಗಳೂರಿಗೆ ಬಂದಿದ್ದಾರೆ. ಇಂದು ಬೆಳಗ್ಗೆ 10 ಗಂಟೆಯವರೆಗೂ ಟೆಸ್ಟಿಂಗ್, ಸ್ಕ್ರೀನಿಂಗ್ ನಡೆಯುತ್ತದೆ. ಇಂಗ್ಲೆಂಡ್​ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದವರಿಗೆ ಕೋವಿಡ್ ಟೆಸ್ಟ್​ ಮಾಡಲು 150 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಟೆಸ್ಟಿಂಗ್​ಗಾಗಿ 15 ಸಿಬ್ಬಂದಿಗಳ ಎರಡು ಪ್ರತ್ಯೇಕ‌ ತಂಡಗಳನ್ನು ರಚನೆ ಮಾಡಲಾಗಿದೆ. ರಿಜಿಸ್ಟರ್ ಮಾಡಿಕೊಳ್ಳಲು ಪ್ರತ್ಯೇಕ ಟೀಂ ರಚನೆ ಮಾಡಲಾಗಿದೆ.

ಈ ಮೊದಲು ಇಂಗ್ಲೆಂಡ್​ನಿಂದ ಬಂದಿದ್ದ ಪ್ರಯಾಣಿಕರು ನಾಪತ್ತೆಯಾಗಿ ಕೊರೋನಾ ಆತಂಕ ಹೆಚ್ಚಿಸಿದ್ದ ಕಾರಣದಿಂದ ಈ ಬಾರಿ ಹೋಂ ಕ್ವಾರಂಟೈನ್ ಆದವರ ಮೇಲೆ ಬಿಬಿಎಂಪಿ ಸಿಬ್ಬಂದಿ ನಿಗಾ ವಹಿಸಲಿದ್ದಾರೆ. ಆರ್​ಟಿಪಿಸಿಆರ್ ಪರೀಕ್ಷೆ ರಿಸಲ್ಟ್ ಬರಲು 5-6 ಗಂಟೆಗಳಾಗುತ್ತವೆ. ಅಲ್ಲಿಯವರೆಗೆ ಇಂಗ್ಲೆಂಡ್​ನಿಂದ ಬಂದ ಎಲ್ಲಾ ಪ್ರಯಾಣಿಕರು ಏರ್​ಪೋರ್ಟ್​ ಒಳಗೇ ಇರಲಿದ್ದಾರೆ. ವರದಿ ಬಂದು ನೆಗೆಟಿವ್ ಬಂದವರು ಮನೆಗೆ, ಪಾಸಿಟಿವ್ ಬಂದು ಅಸಿಂಪ್ಟಮ್ಯಾಟಿಕ್ ಇರುವವರು ಸಾಂಸ್ಥಿಕ ಕ್ವಾರಂಟೈನ್ ಆಗಲಿದ್ದಾರೆ. ಮುಂದೆ ಅವರಿಗೆ ರೋಗಲಕ್ಷಣ ಹೆಚ್ಚಾದರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ.
Published by:Sushma Chakre
First published: