ತೆಲಂಗಾಣದ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಉಡುಪಿ ಯುವತಿ

ಭಾಷಾ ಸಮಸ್ಯೆಯಿಂದ ತಮ್ಮ ಸಮಸ್ಯೆ ಹೇಳಿಕೊಳ್ಳಲು ಪರದಾಡುತ್ತಿದ್ದ ತೆಲಂಗಾಣದ ಕಾರ್ಮಿಕರಿಗೆ ತೆಲುಗು ಬಲ್ಲ ಸಾಯಿಶ್ರೀ ಸಹಾಯಹಸ್ತ ನೀಡಿದ್ದಾರೆ

news18-kannada
Updated:May 21, 2020, 12:17 PM IST
ತೆಲಂಗಾಣದ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಉಡುಪಿ ಯುವತಿ
ಸಾಯಿಶ್ರೀ
  • Share this:
ಉಡುಪಿ(ಮೇ.21): ಕೊರೋನಾ ಲಾಕ್‌ಡೌನ್‌ ಅವಧಿಯಲ್ಲಿ ಅತ್ತ ಊರಿಗೂ ತೆರಳಲಾಗದೆ, ಇತ್ತ ದುಡಿಯುವ ಸ್ಥಳದಲ್ಲೂ ನೆಲೆ ಇಲ್ಲದೆ ಸಂಕಷ್ಟ ಪಡುತ್ತಿದ್ದ ವಲಸೆ ಕಾರ್ಮಿಕರನ್ನು ಯುವತಿಯೊಬ್ಬಳು ರಕ್ಷಿಸಿ ತವರಿಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾಳೆ. ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ತಂಗಿದ್ದ ತೆಲಂಗಾಣ ಮೂಲದ ವಲಸೆ ಕಾರ್ಮಿಕರು ಇಂತಹದ್ದೇ ಸಂದಿಗ್ಧ ಸ್ಥಿತಿಯಲ್ಲಿ ಕಳೆದ ಎರಡು ತಿಂಗಳುಗಳನ್ನ ಕಳೆದಿದ್ದರು. ತೆಲಂಗಾಣ ಮೂಲದ 49 ವಲಸೆ ಕಾರ್ಮಿಕರು ಇದೀಗ ಉಡುಪಿ ಜಿಲ್ಲೆಯಿಂದ ತಮ್ಮ ತವರು ರಾಜ್ಯ ತೆಲಂಗಾಣಕ್ಕೆ ತೆರಳಲು ಸಿದ್ಧರಾಗಿದ್ದಾರೆ.

ಅಚ್ಚರಿ ಅಂದ್ರೆ, ಈ ರೀತಿ ತೆರಳುತ್ತಿರುವ ಕಾರ್ಮಿಕರಿಗೆ ಉಡುಪಿ ಜಿಲ್ಲಾಡಳಿತದಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿರಲಿಲ್ಲ. ಬದಲಿಗೆ ಅವರೆಲ್ಲರಿಗೂ ಸ್ಪಂದಿಸಿ ಅವರನ್ನ ಊರಿಗೆ ತಲುಪಿಸುತ್ತೇನೆ ಅಂತಾ ಪಣ ತೊಟ್ಟ ಓರ್ವ ಹೆಣ್ಣು ಮಗಳ ಶ್ರಮ ಮಾತ್ರ ಇಲ್ಲಿ ಕೆಲಸ ಮಾಡಿದೆ. ಆಕೆಗೆ ಮಣಿಪಾಲ ಪೊಲೀಸರು ಸಾಥ್‌ ನೀಡಿದ್ದು, ಕೆಲಸ ಇನ್ನಷ್ಟು ಸುಲಭವಾಗಿಸಿದೆ.

ಆ ಯುವತಿಯ ಹೆಸರು ಸಾಯಿಶ್ರೀ ಅಕೊಂಡಿ. ಮೂಲತಃ ಮುಂಬೈಯವರಾಗಿರುವ ಇವರು 2018 ರಲ್ಲಿ ಎಂಐಟಿಯಲ್ಲಿ ಬಿಟೆಕ್ ಮುಗಿಸಿಕೊಂಡವರು. ಇತ್ತೀಚೆಗೆ ಮತ್ತೆ ಕೆಲಸ ನಿಮಿತ್ತ ಮಣಿಪಾಲಕ್ಕೆ ಆಗಮಿಸಿದ್ದ ಸಾಯಿಶ್ರೀ ಕೂಡಾ ಲಾಕ್‌ಡೌನ್‌ನಿಂದಾಗಿ ಮಣಿಪಾಲದಲ್ಲಿಯೇ ಉಳಿಯುವಂತಾಗಿದೆ. ಕೆಲ ದಿನಗಳ ಹಿಂದೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಸ್ಥಿತಿ ಕಂಡು ಮರುಗಿದ್ದಾರೆ. ಮೊದಲೇ ಭಾಷಾ ಸಮಸ್ಯೆಯಿಂದ ತಮ್ಮ ಸಮಸ್ಯೆ ಹೇಳಿಕೊಳ್ಳಲು ಪರದಾಡುತ್ತಿದ್ದ ತೆಲಂಗಾಣದ ಕಾರ್ಮಿಕರಿಗೆ ತೆಲುಗು ಬಲ್ಲ ಸಾಯಿಶ್ರೀ ಸಹಾಯಹಸ್ತ ನೀಡಿದ್ದಾರೆ. ಸ್ವತಹ ತಾನೇ ಮೇ 12 ರಂದು ʼಸೇವಾ ಸಿಂಧುʼ ವೆಬ್‌ಸೈಟ್‌ ಗೆ ತೆರಳಿ ಕಾರ್ಮಿಕರ ಹೆಸರು ನೋಂದಾಯಿಸಿದ್ದಾರೆ.

ತನ್ನ ಟ್ವಿಟ್ಟರ್‌ ಖಾತೆಯ ಮೂಲಕ ತೆಲಂಗಾಣ ಸಿಎಂ, ಟಿಆರ್​ಎಸ್​ ಪಕ್ಷದ ನಾಯಕಿ ಕವಿತಾ ಅವರಿಗೂ, ಕಾರ್ಮಿಕರ ಸಂಕಷ್ಟದ ಬಗ್ಗೆ ಬರೆದು ಟ್ಯಾಗ್‌ ಮಾಡುವ ಮೂಲಕ ಗಮನಸೆಳೆದಿದ್ದಾರೆ. ಟ್ವೀಟ್‌ಗೆ ತಕ್ಷಣವೇ ತೆಲಂಗಾಣ ಸಿಎಂ ಕಚೇರಿಯಿಂದ ಪ್ರತಿಕ್ರಿಯೆಯೂ ಬಂತು. ತಮ್ಮ ರಾಜ್ಯದ ಕಾರ್ಮಿಕರಿಗೆ ಸ್ಪಂದಿಸುವ ಭರವಸೆ ನೀಡಿದರು. ಕೆಎಸ್​​ಆರ್​​ಟಿಸಿ ಬಸ್‌ ಸಂಪರ್ಕಿಸಿದಾಗ 2 ಬಸ್‌ಗಳನ್ನು ನೀಡಲು ಮುಂದಾಗಿದ್ದಾರೆ. ಆದರೆ 1,98,200 ರೂಪಾಯಿ ಬಸ್‌ ದರವನ್ನು ನಿಗದಿಪಡಿಸಿದರು. ಸಾಯಿಶ್ರೀ ತಾನೇ ಸಾರ್ವಜನಿಕರಿಂದ 50 ಸಾವಿರ ರೂಪಾಯಿ ಸಂಗ್ರಹಿಸಿದ್ದಾರೆ. ತೆಲಂಗಾಣ ಸರಕಾರವೇ ಉಳಿದ ಹಣವನ್ನ ನೀಡುವುದಾಗಿ ಹೇಳಿದೆ.

ಇದನ್ನೂ ಓದಿ : ದೇಶದಲ್ಲಿ ಮತ್ತೆ ದಿನವೊಂದರಲ್ಲಿ 5 ಸಾವಿರಕ್ಕೂ ಹೆಚ್ಚು ಕೊರೋನಾ ಪೀಡಿತರು ಪತ್ತೆ

ಕಾರ್ಮಿಕರಲ್ಲಿ 20 ಮಂದಿ ಮಹಿಳೆಯರಾಗಿದ್ದು, ಒಬ್ಬಾಕೆ ಗರ್ಭಿಣಿಯಾದರೆ, 10 ಮಕ್ಕಳಿದ್ದು ಅದರಲ್ಲಿ 5 ವರುಷದ ಕೆಳಗಿನವರು ಹಾಗೂ ಒಂದು ವರ್ಷದ ಎರಡು ಕಂದಮ್ಮಗಳಿದ್ದರು. ಕಾಲ್ನಡಿಗೆಯಲ್ಲಿ ಊರಿಗೆ ಹೊರಟಿದ್ದ ಕಾರ್ಮಿಕರು ಕೊನೆಗೂ ಬಸ್ ನಲ್ಲಿ ತೆಲಂಗಾಣ ಕ್ಕೆ ತೆರಳಿದ್ದಾರೆ. ಎರಡು ಕೆಎಸ್​ಆರ್​ಟಿಸಿ ಬಸ್‌ಗಳ ಮೂಲಕ ವಲಸೆ ಕಾರ್ಮಿಕರು ತಮ್ಮ ಊರಿಗೆ ವಾಪಾಸ್‌ ಆಗಿದ್ದಾರೆ. ಈ ವೇಳೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯುವತಿಯ ಮಾನವೀಯತೆಗೆ ಅಭಿನಂದಿಸಿದ್ದಾರೆ.

(ವರದಿ : ಪರೀಕ್ಷಿತ್ ಶೇಟ್ )

 
First published: May 21, 2020, 12:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading