• Home
  • »
  • News
  • »
  • coronavirus-latest-news
  • »
  • ಎರಡು ವರ್ಷದ ಮಗುವಿಗೆ ಕೊರೋನಾ ಸೋಂಕು - ವಾಡಿಯಲ್ಲಿ ಸೀಲ್ ಡೌನ್ ವಾತಾವರಣ

ಎರಡು ವರ್ಷದ ಮಗುವಿಗೆ ಕೊರೋನಾ ಸೋಂಕು - ವಾಡಿಯಲ್ಲಿ ಸೀಲ್ ಡೌನ್ ವಾತಾವರಣ

ಪರಿಶೀಲನೆ ನಡೆಸುತ್ತಿರುವ ಪೊಲೀಸರು

ಪರಿಶೀಲನೆ ನಡೆಸುತ್ತಿರುವ ಪೊಲೀಸರು

  • Share this:

ಕಲಬುರ್ಗಿ(ಏ.13): ಎರಡು ವರ್ಷದ ಮಗುವಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಾಲಕನ ಪೋಷಕರು ವಾಸಿಸುತ್ತಿದ್ದ ವಾಡಿ ಪಟ್ಟಣದ ಪಿಲಕಮ್ ಪ್ರದೇಶಕ್ಕೆ ಸಂಪೂರ್ಣ ದಿಗ್ಬಂಧನ ಹಾಕಲಾಗಿದೆ. ಪಿಲಕಮ್ ಪ್ರದೇಶದ ಸುತ್ತ ಬ್ಯಾರಿಕೇಟ್ ಅಳವಡಿಕೆ ಮಾಡಲಾಗಿದ್ದು,ಹೊರಗಿನವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಆ ಪ್ರದೇಶದವರಿಗೂ ಹೊರಗಡೆ ಹೋಗಲು ನಿರ್ಬಂಧ ವಿಧಿಸಲಾಗಿದೆ.

ಪಿಲಕಮ್ ಪ್ರದೇಶದಲ್ಲಿ ಸೀಲ್ ಡೌನ್ ಪರಿಸ್ಥಿತಿ ನಿರ್ಮಾಣವಾಗಿದೆ. ಅಗತ್ಯವಿದ್ದವರಿಗೆ ಮನೆಗೇ ಹಾಲು, ತರಕಾರಿ ಪೂರೈಕೆ ಮಾಡಲಾಗುತ್ತಿದೆ. ತಾಲೂಕು ಆಡಳಿತ, ಪುರಸಭೆ ಅಥವಾ ಪೊಲೀಸರಿಗೆ ತಿಳಿಸಿದರೆ ಸಾಮಾಗ್ರಿ ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಪಡಿತರ ಪಡೆಯದವರಿಗೆ ಮನೆ ಬಾಗಿಲಿಗೆ ತಂದುಕೊಡುವ ವ್ಯವಸ್ಥೆ ಮಾಡಲಾಗಿದೆ. ಬಾಲಕನ ಪೋಷಕರು ಉತ್ತರ ಪ್ರದೇಶ ಮೂಲದವರಾಗಿದ್ದು, ಹಲವು ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಬಾಲಕನ ತಂದೆ ರೈಲಿನಲ್ಲಿ ಪರ್ಸ್ ಇತ್ಯಾದಿ ವಸ್ತುಗಳನ್ನು ಮಾರಿ ಜೀವನ ಸಾಗಿಸುತ್ತಿದ್ದ. ಬಾಲಕನಿಗೆ ಹೇಗೆ ಕೊರೋನಾ ಸೋಂಕು ಬಂದಿತೆಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ.

ಬಾಲಕನಿಗೆ ಐಸೋಲೇಷನ್ ವಾರ್ಡನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪೋಷಕರ ಥ್ರೋಟ್ ಸ್ಯಾಂಪಲ್ ಲ್ಯಾಬ್ ಗೆ ರವಾನೆ ಮಾಡಲಾಗಿದೆ. ಪೋಷಕರನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ಬಾಲಕನಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಮತ್ತು ಸಿಬ್ಬಂದಿಗೂ ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ಸ್ವಯಂ ನಿರ್ಬಂಧ ಹಾಕಿಕೊಂಡ ಜನ :

ಎರಡು ವರ್ಷದ ಬಾಲಕನಲ್ಲಿ ಕೊರೋನಾ ಪಾಸಿಟಿವ್ ಸೋಂಕಿರೋದು ದೃಢಪಟ್ಟ ಹಿನ್ನೆಲೆಯಲ್ಲಿ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಜನತೆಯಲ್ಲಿ ಆತಂಕ ಹೆಚ್ಚಿದೆ. ಸೋಂಕಿನ ಭೀತಿಯಿದಾಗಿ ಕೆಲ ಬಡಾವಣೆ ನಿವಾಸಿಗಳು ಸ್ವಯಂ ಆಗಿ ಬೇಲಿ ಹಾಕಿಕೊಂಡು, ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಬಾಲಕನ ಪೋಷಕರಿರುವ ಪಿಲಕಮ್ ಪ್ರದೇಶದ ಮೇಲೆ ಪೊಲೀಸರು ಸಂಪೂರ್ಣ ನಿರ್ಬಂಧ ವಿಧಿಸಿದ್ದಾರೆ. ಉಳಿದ ಕಡೆ ಜನರಿಂದಲೇ ಸ್ವಯಂ ನಿರ್ಬಂಧ ಹಾಕಿಕೊಳ್ಳಲಾಗಿದೆ. ಇದರ ನಡುವೆ ಆಶಾ ಕಾರ್ಯಕರ್ತೆಯರು ಪಟ್ಟಣದಲ್ಲಿ ಸಮೀಕ್ಷೆ ಆರಂಭಿಸಿದ್ದು, ನೆಗಡಿ, ಕೆಮ್ಮು, ಜ್ವರವಿದ್ದವರ ಮಾಹಿತಿ ಪಡೆಯುತ್ತಿದ್ದಾರೆ. ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡುತ್ತಿದ್ದಾರೆ. ಸೋಂಕು ಹರಡದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಬಾಲಕನ ಪೋಷಕರ ಥ್ರೋಟ್ ಸ್ಯಾಂಪಲ್ ಗಾಗಿ ಜಿಲ್ಲಾಡಳಿತ ಎದುರು ನೋಡುತ್ತಿದೆ.

ಲಾಕ್ ಡೌನ್ ನಕಲಿ ಪಾಸ್ ಗಳ ಹಾವಳಿ :

ಲಾಕ್ ಡೌನ್ ಹಿನ್ನೆಲೆಯಲ್ಲಿ ತುರ್ತು ಅಗತ್ಯ ಇರುವವರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪಾಸ್ ವಿತರಿಸಿದೆ. ಆದರೆ ಕಲಬುರ್ಗಿಯಲ್ಲಿ ನಕಲಿ ಪಾಸ್ ಗಳ ಹಾವಳಿ ಹೆಚ್ಚಾಗಿದ್ದು, ಅವೇ ಪಾಸ್ ಗಳನ್ನು ತೋರಿಸಿ ರಸ್ತೆಗಳಲ್ಲಿ ಬೇಕಾಬಿಟ್ಟಿ ಅಡ್ಡಾಡುತ್ತಿದ್ದಾರೆ. ಇಂದು ಕಲಬುರ್ಗಿ ಸೂಪರ್ ಮಾರುಕಟ್ಟೆಯ ಚೌಕ್ ನಲ್ಲಿ ವಾಹನ ತಪಾಸಣೆ ವೇಳೆ ನಕಲಿ ಪಾಸ್ ಗಳು ಸಿಕ್ಕಿವೆ. ಸಂಚಾರಿ ಪೊಲೀಸರು ತಪಾಸಣೆ ಮಾಡಿದಾಗ ಮೂರು ನಕಲಿ ಪಾಸ್ ಸಿಕ್ಕಿವೆ. ಮೂರು ವಾಹನಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಇಬ್ಬರು ವ್ಯಕ್ತಿಗಳನ್ನೂ ವಶಕ್ಕೆ ಪಡೆದಿದ್ದಾರೆ.

ಲಾಕ್ ಡೌನ್ ನಲ್ಲಿಯೂ ಸಂಚರಿಸಲು ನಕಲಿ ಪಾಸ್ ಸೃಷ್ಟಿ ಮಾಡಿಕೊಳ್ಳಲಾಗಿದೆ. ತುರ್ತು ಅಗತ್ಯವಿದ್ದವರಿಗೆ ಮಾತ್ರ ಪಾಸ್ ನೀಡಿದ್ದರೂ, ಅಂಥವುಗಳನ್ನೂ ನಕಲಿ ಮಾಡಿ, ಕೆಲವರು ಅಡ್ಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರೂ ನಕಲಿ ಪಾಸ್ ಸೃಷ್ಟಿಸಿಕೊಂಡು ಅಡ್ಡಾಡದಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದೇ ರೀತಿ ಮುಂದುವರೆದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

First published: