Corona Danger- ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಸೋಂಕು ಪತ್ತೆ; ಇದು ಹೊಸ ತಳಿಯಾ? ಇಲ್ಲಿದೆ ವಿವರ

Two from South Africa tests Covid Positive- ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಇತ್ತೀಚೆಗೆ ಬಂದಿದ್ದ ಇಬ್ಬರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಆದರೆ, ಅವರ ಸ್ಯಾಂಪಲ್ ಅನ್ನು ಜಿನೋಮ್ ಸೀಕ್ವೆನ್ಸಿಂಗ್​ಗೆ ಕಳುಹಿಸಲಾಗಿದ್ದು, ಅವರದ್ದು ಡೆಲ್ಟಾ ತಳಿಯ ವೈರಾಣು ಸೋಂಕು ಎಂಬುದು ಗೊತ್ತಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು, ನ. 27: ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಓಮಿಕ್ರಾನ್ (Omicron Mutant Coronavirus) ಎಂದು ಹೆಸರಿಸಲಾಗಿರುವ ಹೊಸ ಕೋವಿಡ್ ರೂಪಾಂತರಿ ತಳಿ ಇಡೀ ವಿಶ್ವವನ್ನ ಬೆಚ್ಚಿಬೀಳಿಸುತ್ತಿದೆ. ಈವರೆಗೆ ಸೃಷ್ಟಿಯಾದ ಎಲ್ಲಾ ತಳಿಗಿಂತ ಓಮಿಕ್ರಾನ್ ಅತ್ಯಂತ ಅಪಾಯಕಾರಿ (Dangerous Virus Mutant) ಹಾಗೂ ಅತಿ ವೇಗವಾಗಿ ಹರಡಬಲ್ಲ ವೈರಾಣು ತಳಿ ಎನ್ನಲಾಗಿದೆ. ಇದೇ ಆತಂಕದ ನಡುವೆ ಇಂದು ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾದಿಂದ (South Africa) ಬಂದವರಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅದೃಷ್ಟಕ್ಕೆ ಇವರಿಗೆ ಬಂದಿರುವ ಸೋಂಕು ಒಮಿಕ್ರಾನ್ ತಳಿಯದ್ದಲ್ಲ, ಡೆಲ್ಟಾ ವೈರಸ್ (Delta Virus) ತಳಿಯ ಸೋಂಕು ತಗುಲಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ (BBMP heath wing special commissioner Trilok Chandra) ಅವರು ನ್ಯೂಸ್18 ಕನ್ನಡಕ್ಕೆ ಖಚಿತಪಡಿಸಿದ್ದಾರೆ.

  ಕೋವಿಡ್ ಸೋಂಕು ದೃಢಪಟ್ಟ ಸೌತ್ ಆಫ್ರಿಕಾ ಮೂಲಕ ಇಬ್ಬರು ಕೂಡ 60 ವರ್ಷ ಮೇಲ್ಪಟ್ಟ ವಯಸ್ಸಿನವರಾಗಿದ್ದಾರೆ. ಅವರ ಒಬ್ಬರು ನ. 9ರಂದು ನಗರಕ್ಕೆ ಬಂದಿದ್ದರೆ, ಮತ್ತೊಬ್ಬರು ನ. 20ಕ್ಕೆ ಬಂದಿದ್ದರೆನ್ನಲಾಗಿದೆ. ಆಫ್ರಿಕಾದಲ್ಲಿ ಹೊಸ ರೂಪಾಂತರಿ ಓಮಿಕ್ರಾನ್ ಮೊದಲು ಪತ್ತೆಯಾಗಿದ್ದು ನ. 23ಕ್ಕೆ. ಇವರಿಗೆ ಕೋವಿಡ್ ಸೋಂಕು ದೃಢಪಡುತ್ತಿದ್ದಂತೆಯೇ ಬಿಬಿಎಂಪಿ ಇವರನ್ನ ಕ್ವಾರಂಟೈನ್ ಮಾಡಿದೆ. ಇವರು ತಂಗಿದ್ದ ಖಾಸಗಿ ಹೋಟೆಲ್​ನ ಎಲ್ಲಾ ಸಿಬ್ಬಂದಿಯನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಜೊತೆಗೆ, ಇವರಿಬ್ಬರ ಸ್ಯಾಂಪಲ್ ಅನ್ನು ಜಿನೋಮ್ ಸೀಕ್ವೆನ್ಸಿಂಗ್​ಗೂ ಕಳುಹಿಸಲಾಗಿತ್ತು. ಅದರಲ್ಲಿ ಇವರಿಗೆ ಡೆಲ್ಟಾ ವೈರಸ್ ತಳಿಯ ಸೋಂಕು ತಗುಲಿರುವುದು ದೃಢಪಟ್ಟಿದೆ.

  ರಾಜ್ಯದಲ್ಲಿ ಇಂದು 322 ಕೇಸ್ ಪತ್ತೆ:

  ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು (Covid cases in Karnataka) ಏರಿಕೆ ಗತಿಯಲ್ಲಿವೆ. ಇಂದು 322 ಕೋವಿಡ್ ಪ್ರಕರಣ ಪತ್ತೆಯಾಗಿವೆ. ಬೆಂಗಳೂರು ನಗರವೊಂದರಲ್ಲೇ 149 ಕೇಸ್​ಗಳು ಬೆಳಕಿಗೆ ಬಂದಿವೆ. ರಾಜ್ಯದಲ್ಲಿ ಇಂದು ಒಟ್ಟಾರೆ 176 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 146 ಏರಿವೆ.

  ಇದನ್ನೂ ಓದಿ: Omicron Covid- ಹೊಸ ಅಪಾಯಕಾರಿ ವೈರಸ್; ಬೆಂಗಳೂರು ಮತ್ತು ಕರ್ನಾಟಕದಲ್ಲಿ ಕಟ್ಟೆಚ್ಚರ

  ಇಂದು ಕೋವಿಡ್​ಗೆ ಮೂವರು ಬಲಿಯಾಗಿದ್ಧಾರೆ. ಧಾರವಾಡ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಒಬ್ಬೊಬ್ಬರು ಮೃತಪಟ್ಟಿದ್ದಾರೆ.

  ಒಟ್ಟು ಪ್ರಕರಣ 30 ಲಕ್ಷ ಸಮೀಪ:

  ರಾಜ್ಯದಲ್ಲಿ ಇವತ್ತು ದಾಖಲಾದ 322 ಸೇರಿ ಈವರೆಗೆ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 29,95,285 ಆಗಿದೆ. ಇವರಲ್ಲಿ ಸಾವನ್ನಪ್ಪಿದವರು 38,196 ಮಂದಿ. ಸದ್ಯ ರಾಜ್ಯಾದ್ಯಂತ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ 6,754 ಇದೆ. ಇದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಆಗಿದೆ.

  ಇದನ್ನೂ ಓದಿ: ಹೆಚ್ಚುತ್ತಿರುವ ಕೋವಿಡ್; ಸಿಎಂ ನೇತೃತ್ವದಲ್ಲಿ ಸಭೆ; ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳಲಿರುವ ಕ್ರಮಗಳಿವು

  7.29 ಕೋಟಿ ಲಸಿಕೆ ಡೋಸ್:

  ಇನ್ನು, ಲಸಿಕೆ ವಿತರಣೆ ಬಗ್ಗೆ ಇಲಾಖೆ ಮಾಹಿತಿ ನೀಡಿದೆ. ಅದರ ಪ್ರಕಾರ, ಈವರೆಗೆ ರಾಜ್ಯಾದ್ಯಂತ 7.29 ಕೋಟಿ ಡೋಸ್​ಗಳಿಗೂ ಹೆಚ್ಚು ಲಸಿಕೆಗಳನ್ನ ಹಾಕಲಾಗಿದೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ಕರ್ನಾಟಕ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.)
  Published by:Vijayasarthy SN
  First published: