ಶಿವಮೊಗ್ಗ(ಏ.13): ರಾಜ್ಯದಲ್ಲಿ ಕೊರೋನಾ ಭೀತಿ ಇದ್ದರೆ, ಶಿವಮೊಗ್ಗ ಜಿಲ್ಲೆಯ ಜನರಿಗೆ ಕೊರೋನಾಗಿಂತ ಮಂಗನ ಕಾಯಿಲೆ ಕಾಟವೇ ಅಧಿಕವಾಗಿದೆ. ಈಗಾಗಲೇ 5 ಜನರನ್ನು ಬಲಿ ಪಡೆದಿರುವ ಮಂಗನ ಕಾಯಿಲೆ, ಶಿವಮೊಗ್ಗ ಜಿಲ್ಲೆಯ ಜನರಲ್ಲಿ ಅತಂಕಕ್ಕೆ ಕಾರಣವಾಗಿದೆ. 148 ಪ್ರಕರಣಗಳಲ್ಲಿ ಪಾಸಿಟಿವ್ ಕಂಡು ಬಂದಿದೆ. ಇಂದು ಮತ್ತೆ ಇಬ್ಬರು ಮಹಿಳೆಯರಲ್ಲಿ ಕೆಎಫ್ ಡಿ ಸೋಂಕು ಇರುವುದು ಪತ್ತೆಯಾಗಿದೆ.
ಮಂಗನ ಕಾಯಿಲೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಸಾಗರ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಜನರು ಮಂಗನ ಕಾಯಿಲೆಯಿಂದ ತತ್ತರಿಸಿ ಹೋಗುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 148 ಜನರಲ್ಲಿ ಮಂಗನ ಕಾಯಿಲೆ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಬಿಸಿಲು ಏರಿಕೆಯಾದಂತೆ, ಮಂಗನ ಕಾಯಿಲೆ ಹರಡುವುದು ಹೆಚ್ಚಾಗುತ್ತದೆ. ಏಪ್ರಿಲ್ ತಿಂಗಳು ಕಳೆದರೆ ಸಾಕು ಎನ್ನುವಂತ ಪರಿಸ್ಥಿತಿ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಸೃಷ್ಠಿಯಾಗಿದೆ.
ಈಗಾಗಲೇ ಒಟ್ಟು 5 ಜನರು ಮೃತಪಟ್ಟಿದ್ದಾರೆ. ಅವರಲ್ಲಿ ಮೂವರು ವ್ಯಕ್ತಿಗಳು ಕೆಎಫ್ಡಿಯಿಂದಲೇ ಮೃತಪಟ್ಟಿದ್ದಾರೆಂಬುದು ಖಾತ್ರಿಯಾಗಿದೆ. ಇನ್ನೆರಡು ಸಾವಿನಲ್ಲಿ ಪ್ರಾಥಮಿಕ ವರದಿಯಲ್ಲಿ ಕೆಎಫ್ಡಿ ಇದೆ ಎಂದಿದೆಯಾದರೂ ಅಂತಿಮ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಇನ್ನು ಗೊಬ್ಬರಕ್ಕಾಗಿ ಅರಣ್ಯ ಪ್ರದೇಶದಿಂದ ಒಣ ಎಲೆಗಳನ್ನು ತಂದಿರುವ ಪ್ರಕರಣಗಳಲ್ಲಿ ಕೆಎಫ್ಡಿ ಹೆಚ್ಚಿನ ಪ್ರಮಾಣದಲ್ಲಿ ಹರಡಿರುವುದನ್ನು ಪತ್ತೆ ಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಕಾಡಿನಿಂದ ಒಣ ಎಲೆಗಳನ್ನು ತರುವುದನ್ನು ಸಂಪೂರ್ಣವಾಗಿ ಜಿಲ್ಲಾಡಳಿತ ನಿಷೇಧಿಸಿದೆ.
ಈ ಸಾಲಿನ ಕೆಎಫ್ಡಿ ಪ್ರಕರಣಗಳು ಕೇವಲ 31 ನಿರ್ದಿಷ್ಟ ಪ್ರದೇಶಗಳಲ್ಲಿ ವರದಿಯಾಗಿದ್ದು, ಇವುಗಳನ್ನು ಅತಿಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಆ ಭಾಗದಲ್ಲಿ ಅರಣ್ಯಕ್ಕೆ ಭೇಟಿ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಇಬ್ಬರು ಮಹಿಳೆಯರಿಲ್ಲಿ ಕೆ.ಎಫ್.ಡಿ. ಸೋಂಕು ಪತ್ತೆಯಾಗಿರುವುದು ಮತ್ತಷ್ಟು ಅತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯ ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ಇಬ್ಬರು ಮಹಿಳೆಯರಲ್ಲಿ ಮಂಗನ ಕಾಯಿಲೆ ಸೋಂಕು ಇರುವುದು ದೃಢ ಪಟ್ಟಿದೆ. ತೀರ್ಥಹಳ್ಳಿ ತಾಲೂಕಿನ ವಡ್ಡಿನಕೊಪ್ಪ ಗ್ರಾಮ ಮತ್ತು ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಸಗುಪ್ಪೆ ಗ್ರಾಮದ ಮಹಿಳೆಯರಿಲ್ಲಿ ಕೆಎಫ್ಡಿ ಸೊಂಕು ಇರುವುದು ಪತ್ತೆಯಾಗಿದೆ. ಸೋಂಕು ಕಾಣಿಸಿಕೊಂಡ ಒಬ್ಬ ಮಹಿಳೆ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಮತ್ತೊಬ್ಬರು ಸಾಗರದ ಅರಳಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ತದ ಮಾದರಿ ಪರೀಕ್ಷೆ ವರದಿ ಬಂದ ಬಳಿಕ ಪಾಸಿಟಿವ್ ಎಂದು ದೃಢವಾಗಿದೆ.
ಇದನ್ನೂ ಓದಿ :
ನಾಳೆಗೆ ಕೊರೋನಾ ಲಾಕ್ ಡೌನ್ ಮುಕ್ತಾಯ; ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಮುಂದಾದ ಪೊಲೀಸ್ ಇಲಾಖೆ
ಮಣಿಪಾಲ್ ಆಸ್ಪತ್ರಗೆ ದಾಖಲಿಸಲು ವೈದ್ಯಾಧಿಕಾರಿಗಳ ಸೂಚನೆ ನೀಡಿದ್ದಾರೆ. ಈ ಮೂಲಕ ಸಾಗರದಲ್ಲಿ ಕೆಎಫ್ಡಿ ಸೋಂಕಿತರ ಸಂಖ್ಯೆ 28 ಕ್ಕೆ ಏರಿಕೆಯಾದರೆ, ತೀರ್ಥಹಳ್ಳಿಯಲ್ಲಿ 118 ಕ್ಕೆ ಏರಿಕೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಜನರಿಗೆ ಮಂಗನ ಕಾಯಿಲೆ ಎಂದರೇ ಸಾಕು ನಿದ್ದೆಯಲ್ಲಿ ಸಹ ಬೆಚ್ಚಿ ಬೀಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ