• Home
 • »
 • News
 • »
 • coronavirus-latest-news
 • »
 • ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆರಡು ಪಾಸಿಟಿವ್ - ಜಿಲ್ಲಾಡಳಿತದಿಂದ ಹೈಅಲರ್ಟ್

ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆರಡು ಪಾಸಿಟಿವ್ - ಜಿಲ್ಲಾಡಳಿತದಿಂದ ಹೈಅಲರ್ಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗಿಯಾದಾತನ ಸೊಸೆಯಾಗಿರುವ ಈಕೆಯಲ್ಲಿ ಕೊರೋನಾ ಲಕ್ಷಣಗಳು ಕಾಣಿಸಿದ್ದವು. ಆರೋಗ್ಯ ಇಲಾಖೆ ಕಳುಹಿಸಿಕೊಟ್ಟಿದ್ದ ಥ್ರೋಟ್ ಸ್ಯಾಂಪಲ್ ವರದಿ ಬಂದಿದ್ದು, ಪಾಸಿಟಿವ್ ಎಂದು ಬಂದಿದೆ.

 • Share this:

  ಕಲಬುರ್ಗಿ(ಏ.07): ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆರಡು ಕೊರೋನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಜನರ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ. ಒಂದೇ ದಿನ ಎರಡು ಪಾಸಿಟಿವ್ ಪ್ರಕರಣಗಳು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಶಹಾಬಾದ್ ನ 28 ವರ್ಷದ ಮಹಿಳೆಗೆ ಕೊರೋನಾ ಪಾಸಿಟಿವ್ ಬಂದಿದೆ.


  ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗಿಯಾದಾತನ ಸೊಸೆಯಾಗಿರುವ ಈಕೆಯಲ್ಲಿ ಕೊರೋನಾ ಲಕ್ಷಣಗಳು ಕಾಣಿಸಿದ್ದವು. ಆರೋಗ್ಯ ಇಲಾಖೆ ಕಳುಹಿಸಿಕೊಟ್ಟಿದ್ದ ಥ್ರೋಟ್ ಸ್ಯಾಂಪಲ್ ವರದಿ ಬಂದಿದ್ದು, ಪಾಸಿಟಿವ್ ಎಂದು ಬಂದಿದೆ. ಈಕೆಯ ಅತ್ತೆಗೂ ಈಗಾಗಲೇ ಪಾಸಿಟಿವ್ ಬಂದಿದೆ. ಆದರೆ ಧಾರ್ಮಿಕ ಸಭೆಯಲ್ಲಿ ಭಾಗಿಯಾದಾತನಿಗೆ ನೆಗೆಟಿವ್ ಬಂದಿದೆ.


  ಮತ್ತೊಂದೆಡೆ ಕಲಬುರ್ಗಿಯ ಖಮರ್ ಕಾಲೋನಿಯ 57 ವರ್ಷದ ವ್ಯಕ್ತಿಗೂ ಕೊರೋನಾ ಪಾಸಿಟಿವ್ ಬಂದಿದೆ. ಈ ವ್ಯಕ್ತಿಯ ಸೋಂಕಿನ ಲಿಂಕ್ ಸಿಕ್ಕಿಲ್ಲ. ಯಾರಿಂದ ಈತನಿಗೆ ಸೋಂಕು ತಗುಲಿರಬಹುದೆಂಬ ಕುರಿತು ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸುತ್ತಿದೆ.


  ಇಬ್ಬರಿಗೂ ಇ.ಎಸ್.ಐ. ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಬುರ್ಗಿಯ ಖಮರ್ ಕಾಲೋನಿಯನ್ನು ಕಂಟೈನ್ ಮೆಂಟ್ ಪ್ರದೇಶವೆಂದು ಘೋಷಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕಂಟೋನ್​​ಮೆಂಟ್ ಝೋನ್ ಗಳ ಸಂಖ್ಯೆ ನಾಲ್ಕಕ್ಕೇರಿದೆ. ಕಂಟೋನ್​​ ಮೆಂಟ್ ಝೋನ್ ಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.


  ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಕೃಷಿ ಸಚಿವ:


  ಲಾಕ್ ಡೌನ್ ನಿಂದಾಗಿ ಬೆಳೆದ ಕಲ್ಲಂಗಡಿ ಮಾರಲಾಗದೆ ಆತ್ಮಹತ್ಯೆಗೆ ಶರಣಾದ ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಲಾಡ್ ಚಿಂಚೋಳಿ ಗ್ರಾಮದ ರೈತ ಚಂದ್ರಕಾಂತ ಬಿರಾದಾರ ನಿವಾಸಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್​​ ಭೇಟಿ ನೀಡಿದರು. ಕಲಬುರ್ಗಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಲಾಡ್ ಚಿಂಚೋಳಿಗೆ ಭೇಟಿ ನೀಡಿದ ಪಾಟೀಲ್​, ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಆದೇಶ ಪತ್ರದ ಪ್ರತಿ ವಿತರಿಸಿದ ಸಚಿವರು, ಮೃತನ ಪತ್ನಿ ಜಗದೇವಿಗೆ ವಿಧವಾ ವೇತನ ಪ್ರತಿಯನ್ನೂ ಸ್ಥಳದಲ್ಲಿಯೇ ವಿತರಿಸಿದರು.


  ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ಪರಿಹಾರವನ್ನು ಸಚಿವ ಬಿ.ಸಿ.ಪಾಟೀಲ್ ನೀಡಿದರು. ಈ ವೇಳೆ ಮಾತನಾಡಿದ ಅವರು, ಲಾಕ್ ಡೌನ್ ಕಾರಣಕ್ಕೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳದಿರುವಂತೆ ಮನವಿ ಮಾಡಿಕೊಂಡರು. ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಿದ್ದು, ಯಾವುದೇ ಕಾರಣಕ್ಕೂ ದುಡುಕದಿರುವಂತೆ ಮನವಿ ಮಾಡಿದರು.


  ಇದನ್ನೂ ಓದಿ : ಲಾಕ್ ಡೌನ್​ಗೆ ಚಾಮರಾಜನಗರದಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ - ಎಗ್ಗಿಲ್ಲದೆ ಸಂಚರಿಸುತ್ತಿರುವ ವಾಹನಗಳು


  ರೈತನ ಮನೆಗೆ ಭೇಟಿ ನೀಡಿದ ನಂತರ ಕಲಬುರ್ಗಿಗೆ ಆಗಮಿಸಿದ ಸಚಿವ ಬಿ.ಸಿ.ಪಾಟೀಲ್, ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಲಾಕ್ ಡೌನ್ ಕಾರಣದಿಂದಾಗಿ ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು, ಮಾರಾಟಕ್ಕೆ ಅನುವು ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

  Published by:G Hareeshkumar
  First published: