ತುಮಕೂರು: ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಷ್ಟು ಹಣ್ಣು, ತರಕಾರಿ ಲಭ್ಯವಾಗುತ್ತಿಲ್ಲ. ಇದರಿಂದಾಗಿ ದಿನನಿತ್ಯ ಬಳಸುವ ತರಕಾರಿಗೆ ಬೇಡಿಕೆ ಹೆಚ್ಚಾಗತೊಡಗಿದೆ. ಲಾಕ್ಡೌನ್ ಸಡಿಲಿಕೆಗೂ ಮುನ್ನ ರೈತರು ಸ್ಥಳೀಯವಾಗಿ ಹಣ್ಣು, ತರಕಾರಿ ಮಾರಾಟ ಮಾಡುತ್ತಿದ್ದರು. ವ್ಯಾಪಾರಸ್ಥರು ತಮಗೆ ಬೇಕಾದಷ್ಟು ತಂದು ವ್ಯಾಪಾರ ಮಾಡುತ್ತಿದ್ದರು. ಇದೀಗ ಸ್ಥಳೀಯವಾಗಿ ಸಿಗುತ್ತಿದ್ದ ಹಣ್ಣು, ತರಕಾರಿ ಬೇರೆಡೆಗೆ ಸಾಗಣೆ ಆಗುತ್ತಿರುವುದರಿಂದ ಸ್ಥಳೀಯವಾಗಿ ಕೊರತೆ ಎದುರಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಎಪಿಎಂಸಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ್ಣು, ತರಕಾರಿ ಪೂರೈಕೆಯಾಗುತ್ತಿತ್ತು. ವ್ಯಾಪಾರಸ್ಥರು ತಮಗೆ ಅನುಕೂಲವಾದ ಸಮಯದಲ್ಲಿ ಹೋಗಿ ಖರೀದಿಸುತ್ತಿದ್ದರು. ಈಗ ಬೇಡಿಕೆ ಹೆಚ್ಚಾಗಿದ್ದು, ಬೆಂಗಳೂರು ಸೇರಿದಂತೆ ಹೊರ ಜಿಲ್ಲೆ ವ್ಯಾಪಾರಿಗಳು ಬಂದು ಖರೀದಿಸುತ್ತಿದ್ದಾರೆ. ಇದರಿಂದಾಗಿ ಬೆಲೆಯೂ ಏರಿಕೆಯಾಗಿದೆ.
ಮಧ್ಯರಾತ್ರಿ ದೌಡು
ಮಾರುಕಟ್ಟೆಗಳಲ್ಲಿ ಹಣ್ಣು, ತರಕಾರಿ ಸಂಗ್ರಹ ಪ್ರಮಾಣ ಕಡಿಮೆಯಾಗಿದ್ದು, ವ್ಯಾಪಾರಸ್ಥರು ಖರೀದಿಸಲು ಮಧ್ಯರಾತ್ರಿ 2, 3 ಗಂಟೆಗೆ ಮಾರುಕಟ್ಟೆಗಳಿಗೆ ದೌಡಾಯಿಸುತ್ತಿದ್ದಾರೆ. ಸ್ವಲ್ಪ ತಡವಾದರೂ ವ್ಯಾಪಾರಸ್ಥರು ಬರಿಗೈಲಿ ಹಿಂದಿರುಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಲಾಕ್ಡೌನ್ನಿಂದಾಗಿ ಕೊಳ್ಳುವವರಿಲ್ಲದೆ ಕಂಗಾಲಾಗಿದ್ದ ರೈತರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಲಾಕ್ಡೌನ್ ಸಡಿಲಿಕೆಯಿಂದಾಗಿ ಕೊಂಚ ನಿರಾಳರಾಗಿದ್ದಾರೆ.
ಲಾಕ್ಡೌನ್ ಸಡಿಲಿಕೆ ನಂತರ ಹಣ್ಣು, ತರಕಾರಿ ಬೆಲೆ ಕುಸಿಯುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆ ಸಂದರ್ಭದಲ್ಲಿ ಇದ್ದ ಬೆಲೆಯೇ ಈಗಲೂ ಮುಂದುವರಿದಿದೆ. ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನೂ ಕೊತ್ತಂಬರಿ ಸೊಪ್ಪಿನ ಬೆಲೆಯಲ್ಲಿ ಏರಿಕೆಯಾಗಿದ್ದು, ಕೆ.ಜಿ 100 ರೂ.ನಂತೆ ಮಾರಾಟವಾಗುತ್ತಿದೆ. ಉಳಿದಂತೆ ಪಾಲಾಕ್, ದಂಟು ಇತರೆ ಸೊಪ್ಪುಗಳು ಎಂದಿನ ಬೆಲೆಗೆ ಮಾರಾಟವಾಗುತ್ತಿವೆ.
ಇದನ್ನು ಓದಿ: ರಾಜ್ಯದ ರೈತರು, ಕೈಮಗ್ಗ ಕಾರ್ಮಿಕರಿಗೆ 162 ಕೋಟಿ ರೂ. ಪರಿಹಾರ; ಸಿಎಂ ಯಡಿಯೂರಪ್ಪ ಘೋಷಣೆ
ಹಣ್ಣು, ತರಕಾರಿ ಮಾರಾಟ ಮಾಡುವವರ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಖಾಸಗಿ ಕಂಪನಿಗಳು, ಕೈಗಾರಿಕೆಗಳು, ಕಾರ್ಖಾನೆಗಳು ಉದ್ಯೋಗ ಕಡಿತಗೊಳಿಸಿದ್ದು, ಅನೇಕರು ಜೀವನ ನಿರ್ವಹಣೆಗಾಗಿ ವ್ಯಾಪಾರಕ್ಕೆ ಇಳಿದಿದ್ದಾರೆ. ಜತೆಗೆ ಹೋಟೆಲ್, ಕ್ಯಾಂಟೀನ್, ಜ್ಯೂಸ್ ಸೆಂಟರ್ಗಳು ತೆರೆದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು, ತರಕಾರಿ ಪೂರೈಕೆಯಾಗುತ್ತಿದೆ. ಹಾಗಾಗಿ ಬೇಡಿಕೆ ಹೆಚ್ಚಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ