ಸಾರಿಗೆ ನೌಕರರಿಗೆ ಗುಡ್‌ ನ್ಯೂಸ್; ಸಿಬ್ಬಂದಿ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ತೆಗೆದುಕೊಂಡ ಸಾರಿಗೆ ನಿಗಮ

ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಕಲ್ಪಿಸುವ ವ್ಯವಸ್ಥೆಯನ್ನು ನಮ್ಮ ಸಾರಿಗೆ ಸಂಸ್ಥೆಗಳಿಂದ ಮಾಡಲಾಗುತ್ತಿದೆ. ಈ ಬಗ್ಗೆ ಯಾವುದೇ ಕುಂದುಕೊರತೆಗಳಿದ್ದಲ್ಲಿ ನಮ್ಮ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಸಾರಿಗೆ ಸಚಿವರು ಹೇಳಿದ್ದಾರೆ.

ಡಿಸಿಎಂ ಲಕ್ಷ್ಣಣ ಸವದಿ

ಡಿಸಿಎಂ ಲಕ್ಷ್ಣಣ ಸವದಿ

  • Share this:
ಬೆಂಗಳೂರು; ಕೊರೋನಾ‌ ಭಯದ ಹಿನ್ನೆಲೆಯಲ್ಲಿ ಸಾರಿಗೆ ನೌಕರರಿಗೆ ನಿಗಮ ಗುಡ್ ನ್ಯೂಸ್ ನೀಡಿದೆ. ಬಿಎಂಟಿಸಿ, ಕೆಎಸ್​‌ಆರ್​ಟಿಸಿ, ಈಶಾನ್ಯ ಸಾರಿಗೆ ಸಂಸ್ಥೆ, ವಾಯುವ್ಯ ಸಾರಿಗೆ ಸಂಸ್ಥೆಯ  ಉನ್ನತ‌ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಚಿವ ಲಕ್ಷ್ಮಣ್ ಸವದಿ ಮಹತ್ತರ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಸಹಜವಾಗಿ ಸಾರಿಗೆ ನೌಕರರಿಗೆ ಒಂದಷ್ಟು ರಿಲೀಫ್  ನೀಡಿದಂತಾಗಿದೆ.

ಕೊರೋನಾ ಭಯದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ತೀವ್ರ ಇಳಿಮುಖವಾಗಿರುವ ಕಾರಣದಿಂದ ಸಾರಿಗೆ ಸಂಸ್ಥೆಯ ಆದಾಯದಲ್ಲಿ ತೀವ್ರ ಕುಸಿತ ಉಂಟಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ ಸಿಬ್ಬಂದಿಗೆ ಯಾವುದೇ ಅನನುಕೂಲತೆ ಆಗದ ರೀತಿಯಲ್ಲಿ ಅನಗತ್ಯ ವೆಚ್ಚಗಳನ್ನು ಕಡಿಮೆಗೊಳಿಸುವ ಸಂಬಂಧ ಹಲವಾರು ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಇನ್ನು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಸಚಿವ ಸವದಿ ಮಾಹಿತಿ ನೀಡಿದ್ದಾರೆ.

ಬಿಎಂಟಿಸಿ, ಕೆಎಸ್​ಆರ್​ಟಿಸಿ ಈಶಾನ್ಯ ಸಾರಿಗೆ ಸಂಸ್ಥೆ ಮತ್ತು ವಾಯುವ್ಯ ಸಾರಿಗೆ ಸಂಸ್ಥೆಗಳಲ್ಲಿ ಈ ಬಗ್ಗೆ ಯಾವ ರೀತಿ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂಬುದನ್ನು ಚರ್ಚಿಸಲು ಏರ್ಪಡಿಸಲಾಗಿದ್ದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ರೂಪುರೇಷೆ ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾರಿಗೆ ಸಂಸ್ಥೆಗಳಲ್ಲಿ ಯಾರೊಬ್ಬರೂ ಕರ್ತವ್ಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಹಾಗೂ ಎಲ್ಲರಿಗೂ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುವಂತಾಗಲು ರೊಟೇಷನ್ ಆಧಾರದಲ್ಲಿ ಸಿಬ್ಬಂದಿ ಇದೇ ಮೊದಲ ಬಾರಿಗೆ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಹೋಂ ಗಾರ್ಡ್ಸ್ (ಗೃಹ ರಕ್ಷಕ) ಸಿಬ್ಬಂದಿ ಬದಲಿಗೆ ಸಾರಿಗೆ ಸಂಸ್ಥೆಗಳಲ್ಲಿ ಆಸಕ್ತಿ ಹೊಂದಿರುವಂತಹ ಸಿಬ್ಬಂದಿಯನ್ನು ಭದ್ರತಾ ರಕ್ಷಕ ಹುದ್ದೆಗಳಿಗೆ ಉಪಯೋಗಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅಷ್ಟೇ ಅಲ್ಲ ಇದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಸಾರಿಗೆ  ಸಿಬ್ಬಂದಿಗಳು ಕೊರೋನಾ  ಭಯದ ಈ ದಿನಗಳಲ್ಲಿಯೂ ಸಹ ಅತ್ಯಂತ ಕಾಳಜಿಯಿಂದ ಮತ್ತು ದಿಟ್ಟತನದಿಂದ ತಮ್ಮ ಸೇವೆ ಸಲ್ಲಿಸುತ್ತಿರುವುದನ್ನು ಗಮನಿಸಿ 55 ವರ್ಷ ಮೇಲ್ಪಟ್ಟ ಸಿಬ್ಬಂದಿಗಳಿಗೆ ಅವರ ಆರೋಗ್ಯದ ಆಧಾರದ ಮೇಲೆ ಉದಾರವಾಗಿ ರಜೆ ಮಂಜೂರು ಮಾಡಲಾಗುವುದು. ಅಷ್ಟೇ ಅಲ್ಲ ಹೃದಯ ಸಂಬಂಧಿ ರೋಗ, ರಕ್ತದ ಒತ್ತಡಗಳಂತಹ ಕಾಯಿಲೆ ಇರುವರಿಗೆ ಅಗತ್ಯ ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗುವುದು. ಗರ್ಭಿಣಿ ಮಹಿಳಾ ಸಿಬ್ಬಂದಿಗಳನ್ನು ಲಘು ಕರ್ತವ್ಯದ ಮೇಲೆ ನಿಯೋಜಿಸಲು ಆದೇಶ ಮಾಡಲಾಗಿದೆ.

ಅನಗತ್ಯವಾಗಿ ಹೆಚ್ಚುವರಿಯಾಗಿದ್ದ ಕೆಲವು ಹೊರಗುತ್ತಿಗೆ ಸಿಬ್ಬಂದಿಗಳನ್ನು ಕಡಿಮೆ ಮಾಡಲು ಆಡಳಿತಾತ್ಮಕ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಸಾರಿಗೆ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳ ಆರೋಗ್ಯ ರಕ್ಷಣೆಗೂ ಪ್ರಥಮ ಆದ್ಯತೆ ನೀಡಲಾಗುತ್ತಿದ್ದು, ಯಾವುದೇ ಸಿಬ್ಬಂದಿಯಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದರೆ ಅವರ ಸಂಪೂರ್ಣ ಆರೈಕೆವರೆಗೆಎಲ್ಲ ಅಗತ್ಯ ಜವಾಬ್ದಾರಿಗಳ ಬಗ್ಗೆ ಸಾರಿಗೆ ಸಂಸ್ಥೆಯಿಂದ ಕ್ರಮ ವಹಿಸಲಾಗುತ್ತಿದೆ. ಅಷ್ಟೇ ಅಲ್ಲ ಎಲ್ಲಾ ಸಾರಿಗೆ ಸಿಬ್ಬಂದಿಗಳಿಗೆ ಕೊರೋನಾ ಪರೀಕ್ಷೆಗಳನ್ನು ಘಟಕಗಳ ಮಟ್ಟದಲ್ಲಿಯೇ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಬಸ್ ಸಂಚಾರಗಳು ಮತ್ತು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವುದರಿಂದ ತಮಗೆ ಆದಾಯ ಕೂಡ ಇಳಿಮುಖವಾಗಿದೆ. ಆದ್ದರಿಂದ ಬಸ್ ನಿಲ್ದಾಣಗಳಲ್ಲಿ ಇರುವ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ಒಂದು ತಿಂಗಳ ಬಾಡಿಗೆಯನ್ನು ಶೇಕಡ 50ರಷ್ಟು  ರಿಯಾಯಿತಿ ದರದಲ್ಲಿ ನೀಡುವಂತೆ ಕೋರಿರುತ್ತಾರೆ. ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸವದಿ ತಿಳಿಸಿದ್ದಾರೆ.

ಇದನ್ನು ಓದಿ: ಬೆಂಗಳೂರಿನಿಂದ ಬಂದ ಯುವತಿಗೆ ಕೊರೋನಾ; ಚಿಕ್ಕಮಗಳೂರು ನಗರದಲ್ಲಿ ಹೆಚ್ಚಾದ ಆತಂಕ!

ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಕಲ್ಪಿಸುವ ವ್ಯವಸ್ಥೆಯನ್ನು ನಮ್ಮ ಸಾರಿಗೆ ಸಂಸ್ಥೆಗಳಿಂದ ಮಾಡಲಾಗುತ್ತಿದೆ. ಈ ಬಗ್ಗೆ ಯಾವುದೇ ಕುಂದುಕೊರತೆಗಳಿದ್ದಲ್ಲಿ ನಮ್ಮ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸ್ಯಾನಿಟೈಸರ್ ಸೇರಿದಂತೆ ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಪ್ರಯಾಣಿಕರು ಯಾವುದೇ ಭಯ ಇಲ್ಲದೆ ಮುಕ್ತವಾಗಿ ಸಂಚರಿಸಬಹುದಾಗಿದೆ. ಈ ಬಗ್ಗೆ ಯಾರೂ ಅನಗತ್ಯವಾಗಿ ಭಯಪಡುವ ಅವಶ್ಯಕತೆ ಇಲ್ಲ ಎಂದು ಸಾರಿಗೆ ನಿಗಮ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
First published: