ಬಡವರ ಕಷ್ಟಕ್ಕೆ ಮಿಡಿದ ಮಂಗಳಮುಖಿಯರು; ಕೂಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿ ವಿತರಣೆ

ಚಿಕ್ಕಮಗಳೂರಿನ ಮಂಗಳಮುಖಿಯರೇ ಸೇರಿ ಮಾಡಿಕೊಂಡಿರೋ ಮಡಿಲು ಸಂಘದಿಂದ ಕೊರೋನಾ ಆರಂಭವಾದಾಗಿನಿಂದ ಈ ಸೇವೆ ಮಾಡುತ್ತಿದ್ದಾರೆ. ಆದರೆ, ಯಾರಿಗೂ ಈ ವಿಷಯ ಗೊತ್ತಿಲ್ಲ. ಇವರು ಕೂಡ ಯಾರಿಗೂ ಹೇಳಿಲ್ಲ.

ಚಿಕ್ಕಮಗಳೂರಲ್ಲಿ ಆಹಾರ ಸಾಮಗ್ರಿ ವಿತರಿಸಿದ ಮಂಗಳಮುಖಿಯರು.

ಚಿಕ್ಕಮಗಳೂರಲ್ಲಿ ಆಹಾರ ಸಾಮಗ್ರಿ ವಿತರಿಸಿದ ಮಂಗಳಮುಖಿಯರು.

  • Share this:
ಚಿಕ್ಕಮಗಳೂರು: ಮಂಗಳಮುಖಿರನ್ನು ಜನರು ನೋಡುವ ದೃಷ್ಟಿಯೇ ಬೇರೆ. ಆದರೆ, ಅವರೊಳಗೊಂದು ಮನಸ್ಸಿರುತ್ತದೆ, ಅವರಿಗೂ ಭಾವನೆಗಳಿರುತ್ತವೆ ಎಂಬುದು ಯಾರಿಗೂ ಅರ್ಥವಾಗಲ್ಲ. ಮಂಗಳಮುಖಿರನ್ನು ಕಂಡರೆ ಮುಖ ತಿರುಗಿಸಿಕೊಂಡು ಹೋಗುವವರೆ ಅಧಿಕ. ಆದರೆ, ಇಲ್ಲಿನ ಮಂಗಳಮುಖಿಯರು ಮಾಡಿರುವ ಕೆಲಸವನ್ನು ಪ್ರತಿಯೊಬ್ಬರು ಶ್ಲಾಘಿಸಲೇಬೇಕು.

ಲಾಕ್​ಡೌನ್​ ಸಮಯದಲ್ಲಿ ತಮಗೆ ಇತರರು ನೀಡಿದ ಆಹಾರ ಕಿಟ್​ಗಳಲ್ಲಿ ಅಗತ್ಯವಿದ್ದಷ್ಟನ್ನು ಇಟ್ಟುಕೊಂಡು ಉಳಿದ ಆಹಾರ ಪದಾರ್ಥಗಳನ್ನು ಈ ಮಂಗಳಮುಖಿಯರು ಬಡ ಕೂಲಿ ಕಾರ್ಮಿಕರಿಗೆ ವಿತರಿಸಿ, ಮಾನವೀಯತೆ ಮೆರೆದಿದ್ದಾರೆ.

ಕೊರೋನಾ ಆತಂಕದಿಂದ ಇಡೀ ದೇಶವೇ ಲಾಕ್ಡೌನ್ ಆದ ಮೇಲೆ ದಾನಿಗಳು ಬಡವರಿಗೆ ದಿನಸಿ ಸಾಮಾಗ್ರಿಗಳನ್ನು ದಾನ ಮಾಡಿದ್ದಾರೆ. ಅದೇ ರೀತಿ ಇಲ್ಲಿನ ಮಂಗಳಮುಖಿಯರಿಗೂ ಹಲವು ದಾನಿಗಳು ಆಹಾರ ಪದಾರ್ಥಗಳನ್ನು ಕೊಟ್ಟಿದ್ದಾರೆ. ಅಗತ್ಯಕ್ಕಿಂತಲೂ ಹೆಚ್ಚಾಗಿಯೇ ಸಿಕ್ಕಿದ ಆಹಾರ ಕಿಟ್​ಗಳನ್ನು ಈ ಮಂಗಳಮುಖಿಯರು ಇಟ್ಟುಕೊಳ್ಳದೆ ಅದನ್ನು ನೂರಾರು ಬಡವರಿಗೆ ನೀಡಿದ್ದಾರೆ.

ಮಂಗಳಮುಖಿಯರು ಯಾವುದೇ ಪ್ರಚಾರದ ಆಸೆಯಿಲ್ಲದೆ ಬಡವರಿಗೆ ಆಹಾರ ಕಿಟ್​ಗಳನ್ನು ನೀಡಿದ್ದಾರೆ. ಇಂತಹ ಕೆಲಸ ಸೇವೆಯಾಗಿರಬೇಕೇ ಹೊರತು ಪ್ರಚಾರಕ್ಕಲ್ಲ ಎಂದು ಇವರು ಹಂಚುತ್ತಿರುವ ದೃಶ್ಯವನ್ನು ಸಹ ವಿಡಿಯೋ ಕೂಡ ಮಾಡಿಕೊಂಡಿಲ್ಲ. ತಮ್ಮ ನೆನಪು ಹಾಗೂ ಸಮಾಧಾನಕ್ಕಾಗಿ ಫೋಟೋ ಕ್ಲಿಕ್ಕಿಸಿಕೊಂಡು ಯಾರಿಗೂ ಹೇಳದೆ ಈ ಕಾರ್ಯ ನೆರೆವೇರಿಸಿದ್ದಾರೆ. ಜಿಲ್ಲೆಯ ಪ್ರತಿ ಭಾಗಕ್ಕೂ ಹೋಗಿ ತಮ್ಮ ಕೈಲಾದಷ್ಟು ಬಡವರಿಗೆ ಆಹಾರ ಕಿಟ್ ಕೊಡುತ್ತಿದ್ದಾರೆ. ನಾವು ಯಾರಿಗೋ ಮೆಚ್ಚಿಸುವುದಕ್ಕೋಸ್ಕರ ಈ ಕೆಲಸ ಮಾಡುತ್ತಿಲ್ಲ. ನಮ್ಮಂತಹವರು ಹಾಗೂ ಬಡವರಿಗೆ ನಮ್ಮದೊಂದು ಅಳಿಲು ಸೇವೆ ಅನ್ನೋದು ಇವರ ಅಭಿಪ್ರಾಯ.

ಚಿಕ್ಕಮಗಳೂರಿನ ಮಂಗಳಮುಖಿಯರೇ ಸೇರಿ ಮಾಡಿಕೊಂಡಿರೋ ಮಡಿಲು ಸಂಘದಿಂದ ಕೊರೋನಾ ಆರಂಭವಾದಾಗಿನಿಂದ ಈ ಸೇವೆ ಮಾಡುತ್ತಿದ್ದಾರೆ. ಆದರೆ, ಯಾರಿಗೂ ಈ ವಿಷಯ ಗೊತ್ತಿಲ್ಲ. ಇವರು ಕೂಡ ಯಾರಿಗೂ ಹೇಳಿಲ್ಲ.

ಇದನ್ನು ಓದಿ: ಕರ್ನಾಟಕದಲ್ಲಿಂದು ದಾಖಲೆಯ 69 ಕೊರೋನಾ ಕೇಸ್ ಪತ್ತೆ; ಸೋಂಕಿತರ ಸಂಖ್ಯೆ 1,056ಕ್ಕೆ ಏರಿಕೆ

ಬಲಗೈಲಿ ಮಾಡಿದ ದಾನ ಎಡಗೈಗೆ ಗೊತ್ತಾಗಬಾರದು ಎಂದು ಹೇಳುತ್ತಾರೆ. ಆದರೆ ಬಹುತೇಕ ದಾನಗಳು ಪ್ರಚಾರದ ಸಾಮಗ್ರಿಯಾಗಿದೆ. ಮಾಡಿದ ದಾನದ ವಿಡಿಯೋ-ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪ್ರಚಾರ ಪಡೆದುಕೊಳ್ಳುತ್ತಾರೆ. ಇಂಥವರ ಮಧ್ಯೆ ಯಾರೋ ಕೊಟ್ಟ ಆಹಾರ ಸಾಮಗ್ರಿಯನ್ನು ತಮಗೆ ಬೇಕಾದಷ್ಟು ಇಟ್ಟುಕೊಂಡು ಉಳಿದಿದ್ದನ್ನು ಅಗತ್ಯವಿದ್ದವರಿಗೆ ಸದ್ದಿಲ್ಲದ ದಾನ ಮಾಡಿ ಮಾನವೀಯತೆ ಮೆರೆಯುತ್ತಿರುವ ಈ ಮಂಗಳಮುಖಿಯರಿಗೆ ನಮ್ಮದೊಂದು ಹ್ಯಾಟ್ಸಾಫ್.
First published: