ಕೊರೋನಾ ಬಿಕ್ಕಟ್ಟು: ಚಾಮರಾಜನಗರದ ತಮಿಳುನಾಡು ಗಡಿಯಲ್ಲಿ ತರಕಾರಿ ಲೋಡ್ ಜೊತೆ ಸಿಗರೇಟ್, ಗುಟಕಾ ಸಾಗಾಣಿಕೆ

ತರಕಾರಿ ಸಾಗಣಿಕೆಯ ವಾಹನಗಳು ಆಯಾ ಜಿಲ್ಲಾಡಳಿತದಿಂದ ಪಾಸ್ ತರಬೇಕು. ಪಾಸ್ ಇದ್ದರೆ ಮಾತ್ರ ಅಂತಹ ವಾಹನಗಳಿಗೆ ಚೆಕ್ ಪೋಸ್ಟ್ ಮೂಲಕ ಪ್ರವೇಶಾವಕಾಶ ಮಾಡಿಕೊಡಲಾಗುತ್ತದೆ

news18-kannada
Updated:April 9, 2020, 9:41 PM IST
ಕೊರೋನಾ ಬಿಕ್ಕಟ್ಟು: ಚಾಮರಾಜನಗರದ ತಮಿಳುನಾಡು ಗಡಿಯಲ್ಲಿ ತರಕಾರಿ ಲೋಡ್ ಜೊತೆ ಸಿಗರೇಟ್, ಗುಟಕಾ ಸಾಗಾಣಿಕೆ
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ(ಏ.09): ಲಾಕ್ ಡೌನ್ ಹಿನ್ನೆಲೆಯಲ್ಲಿ ಅಂತಾರಾಜ್ಯ ಗಡಿಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ. ಆದರೆ ತುರ್ತು ಹಾಗು ಅಗತ್ಯ ವಸ್ತುಗಳ ಸಾಗಾಣಿಕೆಯ ವಾಹನಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಅವಕಾಶದ ದುರ್ಲಾಭ ಪಡೆದ ಖದೀಮರು ತರಕಾರಿ ವಾಹನಗಳಲ್ಲಿ ಸಿಗರೇಟ್, ಗುಟುಕದಂತಹ ವಸ್ತುಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಹೀಗೆ ಚಾಮರಾಜನಗರ ಜಿಲ್ಲೆಯ ತಮಿಳುನಾಡು ಗಡಿಯಲ್ಲಿ ಕೇವಲ 24 ಗಂಟೆ ಅವಧಿಯಲ್ಲಿ ಅಕ್ರಮ ಸಾಗಾಣಿಕೆಯ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ.

ತರಕಾರಿ ಸಾಗಣಿಕೆಯ ವಾಹನಗಳು ಆಯಾ ಜಿಲ್ಲಾಡಳಿತದಿಂದ ಪಾಸ್ ತರಬೇಕು. ಪಾಸ್ ಇದ್ದರೆ ಮಾತ್ರ ಅಂತಹ ವಾಹನಗಳಿಗೆ ಚೆಕ್ ಪೋಸ್ಟ್ ಮೂಲಕ ಪ್ರವೇಶಾವಕಾಶ ಮಾಡಿಕೊಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಕೊಯಮತ್ತೂರಿನಿಂದ ಮೈಸೂರಿನ ಬಂಡೀಪಾಳ್ಯಕ್ಕೆ ತರಕಾರ ಸಾಗಿಸಲು ಪಾಸ್ ಪಡೆದ ಖದೀಮರು ಒಳಭಾಗದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಿಗರೇಟ್ ಬಂಡಲ್​ಗಳನ್ನು ಇಟ್ಟು ಮೇಲ್ಭಾಗದಲ್ಲಿ ಎಲೆಕೋಸು ತುಂಬಿ ಸಾಗಿಸುತ್ತಿದ್ದಾಗ ಚಾಮರಾಜನಗರ ಜಿಲ್ಲೆಯ ಪುಣಜನೂರು ಚೆಕ್ ಪೋಸ್ಟ್ ನಲ್ಲಿ ಸಿಕ್ಕಿಬಿದ್ದಿದ್ದಾರೆ

ಪಾಸ್ ತೋರಿಸಿ ಕರ್ನಾಟಕ ಗಡಿ ಪ್ರವೇಶಿಸಿದ ವಾಹನದ ಬಗ್ಗೆ ಅನುಮಾನಗೊಂಡ ಪೊಲೀಸರು ಹಾಗು ಕಂದಾಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಕಂಟೈನರ್ ಒಳಭಾಗದಲ್ಲಿ ಸಿಗರೇಟ್ ಬಂಡಲ್ ಗಳನ್ನು ಜೋಡಿಸಿ ಯಾರಿಗೂ ಅನುಮಾನ ಬಾರದಂತೆ ಅದರ ಮೇಲೆ ಎಲೆಕೋಸು ತುಂಬಿರುವುದು ಕಂಡುಬಂದಿದೆ. ತಕ್ಷಣ ವಾಹನವನ್ನು ವಶಕ್ಕೆ ಪಡೆದ ಪೊಲೀಸರು ಗಣಪತ್ ಹಾಗು ಭರತ್ ಎಂಬುವರನ್ನು ಬಂಧಿಸಿ ರಾಮಸಮುದ್ರ ಪೂರ್ವ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಮತ್ತೊಂದು ಪ್ರಕರಣದಲ್ಲಿ ಟೊಮೆಟೋ ಹಣ್ಣು ಸಾಗಿಸುತ್ತಿದ್ದ ವಾಹನದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಗುಟುಕ ಪತ್ತೆಯಾಗಿದೆ. ತಮಿಳುನಾಡಿನ ಸೇಲಂ ನಿಂದ ಕರ್ನಾಟಕಕ್ಕೆ ಟೊಮೆಟೋ ಹಣ್ಣು ತುಂಬಿಕೊಂಡು ಬಂದ ವಾಹನವನ್ನು ಪುಣಜನೂರು ಚೆಕ್ ಪೋಸ್ಟ್ ನಲ್ಲಿ ತಪಾಸಣೆಗೆ ಒಳಪಡಿಸಿದಾಗ ಒಳಭಾಗದಲ್ಲಿ ಗುಟುಕ ತುಂಬಿದ ಚೀಲಗಳನ್ನಿಟ್ಟು ಮೇಲ್ಭಾಗದಲ್ಲಿ ಟೊಮೆಟೋ ಹಣ್ಣುಗಳನ್ನು ತುಂಬಿರುವುದು ಪತ್ತೆಯಾಗಿದೆ. 1.2 ಲಕ್ಷ ರೂಪಾಯಿ ಮೌಲ್ಯದ ಗುಟುಕವನ್ನು ವಶ ಪಡಿಸಿಕೊಂಡ ಪೊಲೀಸರು ಟೆಂಪೋ ಚಾಲಕನನ್ನು ಬಂಧಿಸಿ ಪೂರ್ವಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಕೊರೋನಾ ಬಿಕ್ಕಟ್ಟು: ಅನಾನಸ್​, ಕಲ್ಲಂಗಡಿ ಬೆಳೆದ ಶಿವಮೊಗ್ಗದ ರೈತರಿಗೆ ಸಂಕಷ್ಟ

ಇದರೊಂದಿಗೆ ತರಕಾರಿ ಸಾಗಾಣಿಕೆಗೆಂದು ಅನುಮತಿ ಪಡೆದು ಬೇರೆ ಬೇರೆ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿರುವುದು ಬಯಲಾಗಿದೆ. ತಾವು ಬೆಳೆದ ಬೆಳೆ ಮಾರಾಟ ಮಾಡಲಾಗದೆ ಪರಿತಪಿಸುತ್ತಿದ್ದ ರೈತರಿಗೆ ಅನುಕೂಲವಾಗಲೆಂದು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ದಂಧೆಕೋರರು ರೈತರಿಗೆ ನೀಡಿರುವ ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸುತ್ತಿದ್ದು ಚೆಕ್ ಪೋಸ್ಟ್ ಗಳಲ್ಲಿ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

 (ವರದಿ : ಎಸ್​ ಎಂ ನಂದೀಶ್)
First published: April 9, 2020, 9:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading