ಚಾಮರಾಜನಗರ(ಮಾ.16): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಬಂಡೀಪುರ ಹುಲಿ ರಕ್ಷಿತಾರಣ್ಯ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಜೊತೆಗೆ ಬಂಡೀಪುರ ವ್ಯಾಪ್ತಿಯ ಹೋಟೆಲ್, ರೆಸಾರ್ಟ್ಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ಪ್ರವಾಸಿಗರಿಲ್ಲದೆ ಬಂಡೀಪುರ ಬಣಗುಡುತ್ತಿದೆ. ಇನ್ನೊಂದೆಡೆ ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ಗಳಲ್ಲಿ ಕೇರಳದಿಂದ ಬರುವ ಪ್ರಯಾಣಿಕರ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.
ತೀವ್ರಗತಿಯಲ್ಲಿ ಹರಡುತ್ತಿರುವ ಕೊರೋನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲಾಡಳಿತ ವ್ಯಾಪಕ ಕ್ರಮ ಕೈಗೊಂಡಿದೆ. ನೆರೆಯ ಕೇರಳದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರವಾಸಿಗರ ಮೇಲೆ ತೀವ್ರ ನಿಗಾವಹಿಸಲಾಗಿದೆ.
ಜಿಲ್ಲೆಯ ಬಂಡೀಪುರ ಹುಲಿರಕ್ಷಿತಾರಣ್ಯದ ಬಂಡೀಪುರ ಹಾಗೂ ಮೂಲೆಹೊಳೆ ಚೆಕ್ ಪೋಸ್ಟ್ ಗಳಲ್ಲಿ ಕೇರಳದ ಕಡೆಯಿಂದ ಬರುವ ಪ್ರಯಾಣಿಕರನ್ನು ಥರ್ಮಲ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಯಾರಿಗಾದರು ನೆಗಡಿ, ಕೆಮ್ಮು, ಗಂಟಲುಬೇನೆ, ಜ್ವರ ಇದೆಯೇ ಎಂಬುದನ್ನು ಪರಿಶೀಲಿಸಿ ಕಳುಹಿಸಲಾಗುತ್ತಿದೆ. ಆರೋಗ್ಯ ಇಲಾಖೆ ಹಾಗೂ ಪೊಲೀಸರ ತಂಡ ಪ್ರಯಾಣಿಕರನ್ನು ತಪಾಸಣೆ ಒಳಪಡಿಸಿ ಕೊರೋನಾ ವೈರಸ್ ಕುರಿತು ಕರಪತ್ರಗಳನ್ನು ನೀಡಿ ಮುನ್ನೆಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಇದರ ಜೊತೆಗೆ ಜಿಲ್ಲಾ ಕೇಂದ್ರ ಚಾಮರಾಜನಗರದ ಅಂಬೇಡ್ಕರ್ ಭವನದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋವಿಡ್ 19 ವಿಶೇಷ ನಿಗಾ ಘಟಕ ತೆರೆಯಲಾಗಿದೆ. ಅಗತ್ಯ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿ ಸನ್ನದ್ದವಾಗಿಡಲಾಗಿದೆ. ಅನುಮಾನ ಬಂದ ವ್ಯಕ್ತಿಗಳನ್ನು ಇಲ್ಲಿರಿಸಿ ನಿಗಾವಹಿಸಲಾಗುವುದು. ಅವಶ್ಯವಿದ್ದಲ್ಲಿ ಮಾತ್ರ ಈ ನಿಗಾಘಟಕವನ್ನು ಉಪಯೋಗಿಸಲಾಗುವುದು ಎಂದು ಡಿ.ಹೆಚ್.ಓ. ಡಾ| ಎಂ.ಸಿ. ರವಿ ತಿಳಿಸಿದ್ದಾರೆ.
ಇನ್ನೊಂದೆಡೆ ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳ ತಾಣವಾಗಿರುವ ಬಂಡೀಪುರಕ್ಕೆ ಸಫಾರಿ ಮಾಡಲೆಂದು ದೇಶ ವಿದೇಶಗಳಿಂದ ಹಾಗೂ ರಾಜ್ಯದ ನಾನಾ ಮೂಲೆಗಳಿಂದ ನಿತ್ಯ ನೂರಾರು ಪ್ರವಾಸಿಗರು ಬರುವುದು ಸಾಮಾನ್ಯ ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಬಂಡೀಪುರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಡಾ| ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ.
ಮಾರ್ಚ್ 22 ರವರೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದ್ದು ಸಫಾರಿಯನ್ನು ಸಹ ರದ್ದುಗೊಳಿಸಲಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ ತಿಳಿಸಿದ್ದಾರೆ. ಹೀಗಾಗಿ ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಬಂಡೀಪುರ ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ.
ಇದನ್ನೂ ಓದಿ : Viral Video: ಚೀನಾದಿಂದ ಭಾರತಕ್ಕೆ ಬಂದು ಕಳಂಕ ತರಲ್ಲ ; ಸತ್ತರೇ ಇಲ್ಲೇ ಸಾಯುತ್ತೇನೆ ಎಂದ ಎಂಬಿಬಿಎಸ್ ವಿದ್ಯಾರ್ಥಿ
ಪ್ರವಾಸಿಗರಿಗೆ ಪ್ರವೇಶ ನಿಷೇಧದ ಜೊತೆಗೆ ಬಂಡೀಪುರ ಹಾಗೂ ಸುತ್ತಮುತ್ತ ಇರುವ ಹೋಟೆಲ್ ಹಾಗೂ ರೆಸಾರ್ಟ್ಗಳನ್ನು ಒಂದು ವಾರ ಕಾಲ ಮುಚ್ಚುವಂತೆ ಈಗಾಗಲೇ ಆದೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಹಾಗೂ ರೆಸಾರ್ಟ್ಗಳು ಇಂದು ಮಧ್ಯಾಹ್ನದಿಂದ ಬಂದ್ ಆಗಿವೆ. ರೆಸಾರ್ಟ್ಗಳ ಮುಂಗಡ ಬುಕಿಂಗ್ ಕೂಡ ರದ್ದಾಗಿದೆ.
(ವರದಿ : ಎಸ್.ಎಂ.ನಂದೀಶ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ