Seema.RSeema.R
|
news18-kannada Updated:March 6, 2020, 6:08 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು (ಮಾ.06): ವಿಶ್ವವನ್ನು ಬೆಚ್ಚಿ ಬೀಳಿಸಿರುವ ಕೊರೋನಾ ವೈರಸ್ ಭಾರತಕ್ಕೂ ಕಾಲಿಟ್ಟು, ಎಲ್ಲರನ್ನು ಕಂಗೆಡಿಸಿದೆ. ರಾಜ್ಯದಲ್ಲೂ ಕೊರೋನಾ ಭೀತಿ ಎದುರಾಗಿದ್ದು, ಸಾರ್ವಜನಿಕರು ಹೊರಗೆ ಅಡ್ಡಾಡುವುದಕ್ಕೂ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಪ್ರವಾಸೋದ್ಯಮದ ಮೇಲೂ ಕೊರೋನಾ ವೈರಸ್ ಕರಿಛಾಯೆ ಬಿದ್ದಿದ್ದು, ರಾಜ್ಯದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ.
ರಾಜ್ಯದ ಐತಿಹಾಸಿಕ ಪ್ರವಾಸಿ ಸ್ಥಳಗಳಾದ ಹಳೇಬೀಡು, ಶ್ರವಣಬೆಳಗೊಳ, ಬೇಲೂರು, ಗೋಕರ್ಣ, ಹಂಪಿ ಸೇರಿದಂತೆ ಅನೇಕ ತಾಣಗಳಿಗೆ ವಿದೇಶಿಗರು ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಆದರೆ, ಕೊರೋನಾ ವೈರಸ್ ಭೀತಿಯಿಂದಾಗಿ ಪ್ರವಾಸಿಗರ ಸಂಖ್ಯೆ ಕುಸಿದಿದೆ. ಅಲ್ಲದೇ, ವಿದೇಶದಿಂದ ಬರುವ ಪ್ರವಾಸಿಗರನ್ನು ಕಂಡಾಗ ಸ್ಥಳೀಯರು ಭಯಪಡುವಂತಹ ಪರಿಸ್ಥಿತಿ ಉದ್ಭವವಾಗಿದೆ. ಈ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿತಾಣಗಳಿಗೆ ಭೇಟಿ ನೀಡದಂತೆ ವಿಶ್ವಸಂಸ್ಥೆ ಸೇರಿದಂತೆ ಎಲ್ಲಾ ರಾಷ್ಟ್ರಗಳು ಸೂಚನೆ ನೀಡಿವೆ.
ಇನ್ನು ರಾಜ್ಯದಲ್ಲಿ ಅತಿ ಹೆಚ್ಚು ವಿದೇಶಿಗರು ಭೇಟಿ ನೀಡುವ ಸ್ಥಳವೆಂದರೇ ಅದು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿರುವ ಹಂಪಿ. ಅದರಲ್ಲಿಯೂ ಹೋಳಿ ಸಂದರ್ಭದಲ್ಲಿ ಓಕುಳಿ ಹಬ್ಬ ಆಚರಿಸಲು ಅಧಿಕ ಸಂಖ್ಯೆಯ ಜನರು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಈಗ ಇಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದು, ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿಲ್ಲ.
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆಯು ಗಣನೀಯವಾಗಿ ಇಳಿಕೆ ಕಂಡಿದೆ. ದೇವಾಲಯದ ಆವರಣದಲ್ಲಿ ವ್ಯಾಪಾರ ವಹಿವಾಟು ಕುಸಿದಿದ್ದು, ಸಣ್ಣಪುಟ್ಟ ವ್ಯಾಪಾರಿಗಳು ಪರಿತಪಿಸುತ್ತಿದ್ದಾರೆ.
ಇದನ್ನು ಓದಿ: ಕೊರೋನಾ ಭೀತಿ: ಮಕ್ಕಳಿಗೆ ಆಟ, ಶಿಕ್ಷಕರಿಗೆ ಪ್ರಾಣ ಸಂಕಟ; ರಜೆಗಾಗಿ ನಾಟಕವಾಡಿದ ವಿದ್ಯಾರ್ಥಿಗಳು
ಗೋಕರ್ಣದಲ್ಲಿಯೂ ಮುನ್ನೆಚ್ಚರಿಕೆ ಕ್ರಮವಾಗಿ ವಿದೇಶಿಗರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಗೋಕರ್ಣದಲ್ಲಿ ವಿದೇಶಿಗರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
First published:
March 6, 2020, 6:04 PM IST