news18-kannada Updated:May 18, 2020, 2:27 PM IST
ಸಾಂದರ್ಭಿಕ ಚಿತ್ರ
ಕಾರವಾರ(ಮೇ 18): ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ರಣಕೇಕೆ ಮುಂದುವರೆದಿದ್ದು, ಜಿಲ್ಲೆಯಲ್ಲಿಂದು ಒಟ್ಟು 8 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಈ ಮೂಲಕ ಸೋಂಕಿತರ ಸಂಖ್ಯೆ 51ಕ್ಕೆ ಏರಿದೆ. ಕಡಿಮೆ ಆಗಬಹುದು ಎಂದುಕೊಂಡಿದ್ದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಜಿಲ್ಲೆಯ ಭಟ್ಕಳ ಮೂಲದ ಇಬ್ಬರಿಗೆ, ಹೊನ್ನಾವರ ಮೂಲದ ನಾಲ್ವರಿಗೆ, ಹಾಗೂ ಮುಂಡಗೋಡ ಮೂಲದ ಇಬ್ಬರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇಂದು ದೃಢಪಟ್ಟ ಎಂಟು ಜನರಲ್ಲಿ ಏಳು ಜನ ಮುಂಬೈನಿಂದ ವಾಪಾಸ್ ಜಿಲ್ಲೆಗೆ ಬಂದವರಾಗಿದ್ದಾರೆ. ಭಟ್ಕಳ ಮೂಲದ ಎರಡು ವರ್ಷದ ಬಾಲಕಿಗೆ ಮಾತ್ರ ಈಗಾಗಲೇ ಸೋಂಕು ತಗುಲಿರುವವರ ಸಂಪರ್ಕದಿಂದ ಸೋಂಕು ತಗುಲಿದೆ.
ಹೊನ್ನಾವರದ ನಾಲ್ವರು ಸೋಂಕಿತರು ಒಂದೇ ಕುಟುಂಬದವರಾಗಿದ್ದು, ಎಲ್ಲರೂ ಮುಂಬೈನಿಂದ ಬಂದ ನಂತರ ಪಟ್ಟಣದ ಪ್ರಭಾತ್ ನಗರದಲ್ಲಿ ಇರುವ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇದ್ದರು. ಇದೀಗ ಪ್ರಭಾತ್ ನಗರವನ್ನ ಸೀಲ್ ಡೌನ್ ಮಾಡಲಾಗಿದೆ. ಇನ್ನು ಮುಂಬೈ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಮುಂಡಗೋಡ ತಾಲೂಕಿನ ಇಬ್ಬರಿಗೆ ಸೋಂಕು ದೃಡಪಟ್ಟಿದೆ. ಸೋಂಕಿತರ ಎರಡು ಗ್ರಾಮದಲ್ಲಿ ಜನರ ಓಡಾಟವನ್ನ ನಿರ್ಬಂಧಿಸಲಾಗಿದೆ.
ಇದಲ್ಲದೇ ಮುಂಬೈನಿಂದ ವಾಪಾಸ್ ಬಂದು ಮುರುಡೇಶ್ವರದ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ ಸೋಂಕು ತಗುಲಿದ್ದು ಜಿಲ್ಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಮಹಾರಾಷ್ಟ್ರದಿಂದ ಬಂದಿರುವ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲಿದ್ದು ಜಿಲ್ಲಾಡಳಿತಕ್ಕೆ ಇದು ದೊಡ್ಡ ತಲೆ ನೋವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಅರ್ಧ ಶತಕಕ್ಕೆ ಬಂದು ತಲುಪಿದೆ.
ಇದನ್ನೂ ಓದಿ :
ಅರ್ಧ ದಿನದಲ್ಲೇ ದಾಖಲೆಯ 84 ಹೊಸ ಪ್ರಕರಣಗಳು; ಕರ್ನಾಟಕಕ್ಕೆ ‘ಮಹಾ’ ಗಂಡಾಂತರ
ಸದ್ಯ 40 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ಇದ್ದು, ಒಟ್ಟು ಸೋಂಕಿತರ ಸಂಖ್ಯೆ 51 ಆಗಿದೆ. 11 ಮಂದಿ ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಓರ್ವ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 30 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಆಯಾ ತಾಲೂಕು ಆಸ್ಪತ್ರೆಯಲ್ಲೇ ಇದ್ದಾರೆ.
First published:
May 18, 2020, 2:26 PM IST