ಮೈಸೂರಿನಲ್ಲಿ ಮತ್ತೆ 10 ಪಾಸಿಟಿವ್ ಕೇಸ್: ಜುಬಿಲೆಂಟ್ಸ್ ಕಾರ್ಖಾನೆಯ ಸೋಂಕಿನ ಮೂಲ ಪತ್ತೆ ಕಷ್ಟ ಎಂದ ಎಡಿಜಿಪಿ

ಜುಬಿಲೆಂಟ್ಸ್ ಕಾರ್ಖಾನೆ ಕಂಟೈನರ್‌ನಿಂದ ಸೋಂಕು ತಗುಲಿರುವ ಗುಮಾನಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಚ್ಚಾ ವಸ್ತುವಿನಿಂದ ಬಂದಿದೆ ಎಂಬ ಬಗ್ಗೆ ಪುಣೆ ಲ್ಯಾಬ್ ವರದಿ ಬಂದಿದೆ. ಅದರಲ್ಲಿ ನೆಗೆಟಿವ್ ವರದಿ ಸಿಕ್ಕಿದ್ದು, ‌ಕಂಟೈನರ್‌ನಿಂದ ಬಂದಿದೆ ಅನ್ನೋದು ತಪ್ಪು ಮಾಹಿತಿ ಎಂದು ಸ್ಪಷ್ಟನೆ ನೀಡಿದರು.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಮೈಸೂರು: ರಾಜ್ಯದಲ್ಲಿ ಕೊರೋನಾ ಕೇಂದ್ರ ಬಿಂದು ಆಗಿರುವ ಮೈಸೂರು ಜಿಲ್ಲೆಯಲ್ಲಿ ಇಂದು ಸಹ 10 ಕೊರೋನಾ ಪಾಸಿಟಿವ್ ಸೋಂಕು ಪ್ರಕರಗಳು ಪತ್ತೆಯಾಗಿವೆ. 10 ಮಂದಿಗೆ ಸೋಂಕು ಧೃಢ‌ಪಟ್ಟಿರುವುದನ್ನು ಜಿಲ್ಲಾಡಳಿತ ಖಚಿತಪಡಿಸಿದ್ದು, ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆಯಾದ ಪಾಸಿಟಿವ್ ಕೇಸ್‌ನಲ್ಲಿ ಜುಬಿಲೆಂಟ್ಸ್ ಕಾರ್ಖಾನೆಯ 9 ಮಂದಿ ಹಾಗೂ ತೀವ್ರ ಉಸಿರಾಟದ ಸಮಸ್ಯೆ ಇದ್ದ ಓರ್ವ ವ್ಯಕ್ತಿಗೆ ಸೋಂಕು ತಗುಲಿರೋದು ಖಾತ್ರಿಯಾಗಿದೆ. ಉಸಿರಾಟದ ಸಮಸ್ಯೆ ಇದ್ದ ವ್ಯಕ್ತಿಗೆ ಸೋಂಕು ತಗುಲಿದ್ದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮೈಸೂರಿನಲ್ಲಿ ಈವರೆಗೆ 12 ಮಂದಿ ಕೊರೋನಾದಿಂದ ಮುಕ್ತರಾಗಿದ್ದು, ಇದೀಗ 10 ಪಾಸಿಟಿವ್ ಕೇಸ್‌ನಿಂದಾಗಿ ಮೈಸೂರಿನಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.

ನಂಜನಗೂಡು ಪ್ರಕರಣದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಎಡಿಜಿಪಿ ಪರಶಿವಮೂರ್ತಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು. ನಂತರ ಮಾತನಾಡಿದ ಎಡಿಜಿಪಿ ಪರಶಿವಮೂರ್ತಿ ಮೈಸೂರು ಸಿಟಿ ಹಾಗೂ ಮೈಸೂರು ಜಿಲ್ಲೆ ಹಾಟ್‌ಸ್ಪಾಟ್ ಆಗಿದೆ. ಮಾಧ್ಯಮಗಳು ಮೈಸೂರಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ಸುಳ್ಳು ಸುದ್ದಿಗಳು ಹಬ್ಬದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಮೂರು ರೀತಿಯ ಸೋಂಕಿತರು ಇದ್ದಾರೆ‌. ಜುಬಿಲೆಂಟ್ಸ್,  ತಬ್ಲಿಘಿಗಳು, ದುಬೈನಿಂದ ಬಂದವರು‌ ಸೋಂಕಿತರಾಗಿದ್ದು, ಸೋಂಕಿತರಿಗೆ 1898 ಮಂದಿ ಪ್ರೈಮರಿ ಸಂಪರ್ಕಿತರಿದ್ದಾರೆ. ಎಲ್ಲರ ಪರೀಕ್ಷೆ ನಡೆಯುತ್ತಿದೆ. 1310 ಸ್ಯಾಂಪಲ್ ಟೆಸ್ಟ್ ಆಗಿದೆ 58 ಮಂದಿ ಪಾಸಿಟಿವ್ ಇದ್ದಾರೆ. 1252 ವರದಿ ನೆಗೆಟಿವ್ ಬಂದಿದೆ. ಇನ್ನಷ್ಟು ಸ್ಯಾಂಪಲ್ ಟೆಸ್ಟ್ ಆಗಲಿದೆ. ಆಗ ಇನ್ನೊಂದಿಷ್ಟು ಪಾಸಿಟಿವ್ ಕೇಸ್ ಬರಬಹುದು. ಜನರಲ್ಲಿ ಕೊರೋನಾ ಬಗ್ಗೆ ಗಂಭೀರತೆ ಇರಬೇಕು‌. ಜನರಿಂದ ಇನ್ನಷ್ಟು ಹೆಚ್ಚಿನ ಜವಾಬ್ದಾರಿ ನಿರೀಕ್ಷೆ ಮಾಡುತ್ತೇವೆ. ಯಾರು ಗಾಬರಿ ಆಗದೆ ಸೋಂಕಿನ ಯಾವುದೇ ವಿಚಾರದಲ್ಲಿ‌ ಜನರು ನಿರ್ಭೀತಿಯಿಂದ ಆಸ್ಪತ್ರೆಗೆ ಬರಬೇಕು ಎಂದು ಮನವಿ ಮಾಡಿದರು.

ಇನ್ನು ಜುಬಿಲೆಂಟ್ಸ್ ಕಾರ್ಖಾನೆ ಮೊದಲ ಸೋಂಕಿತನಿಗೆ ಸೋಂಕು ಹೇಗೆ ಬಂತು ಎಂಬುದು ಇನ್ನೂ ಗೊತ್ತಾಗಿಲ್ಲ. ನದಿ ಮೂಲ, ಋಷಿ ಮೂಲದಂತೆ ಇದನ್ನು ಹುಡಕಲು ಸಾಧ್ಯವಾಗುತ್ತಿಲ್ಲ. ದೇಶದ ಬಹುತೇಕ ಪ್ರಕರಣದಲ್ಲಿ ಇಂತದ್ದೆ ಅನುಮಾನ ಇದೆ. ಮೊದಲು ಯಾರಿಂದ ಯಾರಿಗೆ ಬಂತು ಅನ್ನೋದು ಗೊತ್ತಾಗಿಲ್ಲ. ತಬ್ಲಿಘಿಗಳ ಪ್ರಕರಣ ಜುಬಿಲೆಂಟ್ಸ್ ಗಿಂತ ದೊಡ್ಡದು‌. ಅಲ್ಲಿಯೂ ಮೊದಲು ಯಾರಿಗೆ ಬಂತು ಅನ್ನೋದು ಗೊತ್ತಾಗಿಲ್ಲ. ನಮ್ಮ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ‌. ಎಲ್ಲ ಆಯಾಮದಲ್ಲೂ ತನಿಖೆ ನಡಿದಿದ್ದು, ಎಲ್ಲವು ಗೊತ್ತಾಗಲಿದೆ ಎಂದು ತಿಳಿಸಿದರು.

ಜುಬಿಲೆಂಟ್ಸ್ ಕಾರ್ಖಾನೆ ಕಂಟೈನರ್‌ನಿಂದ ಸೋಂಕು ತಗುಲಿರುವ ಗುಮಾನಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಚ್ಚಾ ವಸ್ತುವಿನಿಂದ ಬಂದಿದೆ ಎಂಬ ಬಗ್ಗೆ ಪುಣೆ ಲ್ಯಾಬ್ ವರದಿ ಬಂದಿದೆ. ಅದರಲ್ಲಿ ನೆಗೆಟಿವ್ ವರದಿ ಸಿಕ್ಕಿದ್ದು, ‌ಕಂಟೈನರ್‌ನಿಂದ ಬಂದಿದೆ ಅನ್ನೋದು ತಪ್ಪು ಮಾಹಿತಿ ಎಂದು ಸ್ಪಷ್ಟನೆ ನೀಡಿದರು. ಯಾರೋ ಒಬ್ಬರು ಕಾರ್ಖಾನೆಗೆ ಬಂದು ಹೋಗಿದ್ದಾರೆ. ಆದರೆ ಯಾರು ಎಂಬುದು‌ ಗೊತ್ತಾಗುತ್ತಿಲ್ಲ. ಇದರಲ್ಲಿ ಯಾರಿಂದ ಸೋಂಕು ಬಂತು ಎಂಬುದನ್ನು ಕಂಡು ಹಿಡಿಯಲು ಕಷ್ಟ ಆಗುತ್ತೆ ಎಂದರು.

ಇದನ್ನು ಓದಿ: ಕೊವಿಡ್-19: ಕರ್ನಾಟಕದ 8 ಜಿಲ್ಲೆ ಸೇರಿ ದೇಶಾದ್ಯಂತ 170 ಜಿಲ್ಲೆಗಳು ಹಾಟ್ ಸ್ಪಾಟ್ ಎಂದು ಘೋಷಿಸಿದ ಕೇಂದ್ರ

ಮೈಸೂರಿನಲ್ಲಿ ಈವರೆಗೆ 58  ಕೊರೋನಾ ಪಾಸಿಟಿವ್ ಪ್ರಕರಣ  ಪತ್ತೆಯಾಗಿದ್ದು, 46 ಕೊರೋನಾ ಪ್ರಕರಣ ಜುಬಿಲೆಂಟ್ಸ್ ಕಾರ್ಖಾನೆ ಪ್ರಕರಣವಾದರೆ,  8 ಮಂದಿ ತಬ್ಲಿಘಿಗಳ ಪ್ರಕರಣವಾಗಿದೆ. 2 ವಿದೇಶದಿಂದ ವಾಪಸ್ ಬಂದವರು ಹಾಗೂ 1 ವಿದೇಶಿದಿಂದ ಬಂದವರ ಸಂಪರ್ಕಿತ ಮತ್ತು 1 ವ್ಯಕ್ತಿ ಯಾವುದೇ ಸಂಪರ್ಕ ಇಲ್ಲ ಸೋಂಕಿತನಾಗಿದ್ದಾರೆ. 12 ಮಂದಿ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದು,  ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆ 46ಕ್ಕೆ ಏರಿಕೆಯಾಗಿದೆ.
First published: