ಮೈಸೂರು: ಜಿಲ್ಲೆಯಲ್ಲಿ ಇಂದು ಮತ್ತೆ ಐದು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. 5 ಮಂದಿಯೂ ಜುಬಿಲೆಂಟ್ಸ್ ಕಾರ್ಖಾನೆ ನೌಕರರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ನಂಜನಗೂಡು ಜ್ಯುಬಿಲೆಂಟ್ ಕಾರ್ಖಾನೆ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಎರಡು ಗ್ರಾಮಗಳಲ್ಲಿ ಸೀಲ್ಡ್ಡೌನ್ಗೆ ಆದೇಶ ಮಾಡಲಾಗಿದೆ. ಹೆಬ್ಯಾ, ಸೋಮೇಶ್ವರ ಗ್ರಾಮಗಳು ಸೀಲ್ ಡೌನ್ ಆಗಿವೆ. ಮೈಸೂರಿನ ಜೆಪಿ ನಗರ, ಶ್ರೀರಾಂಪುರದ ಎರಡು ಮನೆಗಳ ವ್ಯಾಪ್ತಿಯಲ್ಲಿ ನಿರ್ಬಂಧ ಹೇರಲಾಗಿದೆ. ಜ್ಯುಬಿಲೆಂಟ್ ಕಾರ್ಖಾನೆ ಸೋಂಕು ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇಂದು ಐದು ಸೋಂಕು ಪತ್ತೆಯಾಗುವ ಮೂಲಕ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಚಿಕಿತ್ಸೆಯಲ್ಲಿರುವ ಕೆಲವರು ಗುಣಮುಖರಾಗುತ್ತಿದ್ದಾರೆ. ಸಂಜೆ ವೇಳೆಗೆ ಗುಣಮುಖರಾದ ಕೆಲವರು ಡಿಸ್ಚಾರ್ಜ್ ಆಗಲಿದ್ದಾರೆ. ಕಾರ್ಖಾನೆ ನೌಕರರ ಸ್ಯಾಂಪಲ್ ಟೆಸ್ಟಿಂಗ್ ಶೇ 85 ರಷ್ಟು ಮುಗಿದಿದೆ. ಮೈಸೂರು ಮಂದಿಯ ಸ್ಯಾಂಪಲ್ ಟೆಸ್ಟಿಂಗ್ ತ್ವರಿತಗತಿಗೆ ಬೆಂಗಳೂರಿನಲ್ಲೂ ಟೆಸ್ಟಿಂಗ್ ನಡೆಸಲಾಗುತ್ತಿದೆ. ವೈರಸ್ ಖಾತ್ರಿ ತಿಳಿಯಲು ತ್ವರಿತಗತಿಯಲ್ಲಿ ಟೆಸ್ಟಿಂಗ್ ಕಾರ್ಯ ನಡೆಸಲಾಗುತ್ತಿದೆ. ಎಲ್ಲವು ನಮ್ಮ ನಿಯಂತ್ರಣದಲ್ಲಿದೆ ಎಂದು ಮೈಸೂರು ಡಿಸಿ ಅಭಿರಾಮ್ ಜಿ.ಶಂಕರ್ ಹೇಳಿದರು.
ವೈರಸ್ ವ್ಯಾಪಕವಾಗಿ ಹರಡಲು ಕಾರಣವಾದ ಜ್ಯುಬಿಲೆಂಟ್ ಕಾರ್ಖಾನೆಗೆ ಲೀಗಲ್ ನೋಟಿಸ್ ನೀಡಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ರಿಷ್ಯಂತ್ ತಿಳಿಸಿದ್ದಾರೆ.
ಇದನ್ನು ಓದಿ: ಸೀಲ್ಡೌನ್ ಕುರಿತು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿ ಜನರ ಭೀತಿಯನ್ನು ತೊಲಗಿಸಲಿ; ಹೆಚ್ಡಿಕೆ ಆಗ್ರಹ
ನಾವು ಕೇಳಿದ ದಾಖಲೆಗಳನ್ನು ಅವರು ನೀಡಿರಲಿಲ್ಲ ಅದಕ್ಕೆ
ನೋಟಿಸ್ ಕೊಡಲಾಗಿದೆ. ಇದೀಗಾ ನೋಟಿಸ್ ಕೊಟ್ಟ ಬಳಿಕ ಎಲ್ಲಾ ದಾಖಲೆ ನೀಡುತ್ತಿದ್ದಾರೆ. P 52 ಟ್ರಾವೆಲ್ ಹಿಸ್ಟರಿ ಗೊತ್ತಾಗಿದೆ. ಆದರೆ ಯಾರಿಗೆ ಮೊದಲು ವೈರಸ್ ತಗುಲಿದೆ ಅಂತ ಗೊತ್ತಾಗಬೇಕಿದೆ. ಆಡಿಟ್ ಮಾಡಲು ಹೊರಗಿನಿಂದ ಕೆಲವರು ಬಂದಿದ್ದರು.
ಆಸ್ಟ್ರೇಲಿಯಾದಿಂದ ಹಾಗೂ ಗೋವಾದಿಂದ ಬಂದಿದ್ದರು. ಹಾಗೂ ಕಂಟೈನರ್ನಿಂದ ಬಂದಿದೆ ಎಂಬ ಮಾಹಿತಿ ಇದೆ. ಇದೆಲ್ಲದರ ಬಗ್ಗೆಯು ತನಿಖೆಯಾಗುತ್ತಿದೆ. ಇನ್ನು ಕಾರ್ಖಾನೆ ತೆರೆಯಬೇಕು ಎಂಬ ತೀರ್ಮಾನ ಸದ್ಯಕ್ಕೆ ಮಾಡಿಲ್ಲ. ತನಿಖೆ ಮುಗಿಯುವ ಹಂತದಲ್ಲಿದ್ದು ಜಿಲ್ಲಾಡಳಿತಕ್ಕೆ ವರದಿ ನೀಡಲಿದ್ದೇವೆ ಎಂದು ಎಸ್ಪಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ