Black Fungus: ರಾಜ್ಯಕ್ಕೆ ಇಂದು ಮತ್ತೆ 5190 ವಯಲ್ಸ್ ಎಂಫೊಟೆರಿಸಿನ್ ಚುಚ್ಚುಮದ್ದು; ಕೇಂದ್ರ ಸಚಿವ ಸದಾನಂದ ಗೌಡ

ಕಪ್ಪು ಶಿಲೀಂದ್ರ ಹಳೆ ಕಾಯಿಲೆಯಾಗಿದ್ದು ಇದಕ್ಕೆ ಸಾಕಷ್ಟು ಪರ್ಯಾಯ ಔಷಧಗಳು ಲಭ್ಯವಿವೆ. ಹಾಗಾಗಿ ಇದಕ್ಕೆ ಔಷಧ ಕೊರತೆಯಾಗಬಹುದು ಎಂದು ಗಾಬರಿಗೊಳಗಾಗಬೇಡಿ ಎಂದು ಕೇಂದ್ರ ಸಚಿವ ಸದಾನಂದ ಗೌಡ ಅವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

ಬ್ಲಾಕ್ ಫಂಗಸ್.

ಬ್ಲಾಕ್ ಫಂಗಸ್.

  • Share this:
    ನವದೆಹಲಿ (ಮೇ 27): ಕಪ್ಪು ಶಿಲೀಂಧ್ರದ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರವು ಇಂದು ಕರ್ನಾಟಕಕ್ಕೆ ಹೆಚ್ಚುವರಿಯಾಗಿ 5190 ವಯಲ್ಸ್ ಎಂಫೊಟೆರಿಸಿನ್-ಬಿ ಚುಚ್ಚುಮದ್ದನ್ನು ಹಂಚಿಕೆ ಮಾಡಿದೆ ಎಂದು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ತಿಳಿಸಿದ್ದಾರೆ.  ಈ ವಿಷಯವಾಗಿ ಇಂದು ಸಚಿವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ರಾಜ್ಯಕ್ಕೆ ನಿನ್ನೆಯ ತನಕ ಅಂದರೆ 26 ಮೇ 2021ರವರೆಗೆ 5180 ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿಕೆ ಮಾಡಲಾಗಿತ್ತು. ಇಂದು ರಾಜ್ಯದ ಬೇಡಿಕೆಯನ್ನು ಪರಿಗಣಿಸಿ ಹೆಚ್ಚುವರಿಯಾಗಿ 5190 ವಯಲ್ಸ್ ನೀಡಲಾಗಿದೆ. ಇಲ್ಲಿಯ ತನಕ ರಾಜ್ಯಕ್ಕೆ ಒಟ್ಟು 10370 ವಯಲ್ಸ್ ಎಂಫೊಟೆರಿಸಿನ್-ಬಿ ಒದಗಿಸಿದಂತಾಯಿತು ಎಂದರು.

    ಇದಲ್ಲದೆ, ರಾಜ್ಯಕ್ಕೆ ಇದುವರೆಗೆ ಕೊರೋನಾ ಚಿಕಿತ್ಸೆಗಾಗಿ ಒಟ್ಟು 14,25,000 ವಯಲ್ಸ್ ಡೆಮ್ಡೆಸಿವಿರ್ ಹಂಚಿಕೆ ಮಾಡಲಾಗಿದೆ. ಹಾಗೆಯೇ ರಾಜ್ಯಕ್ಕೆ 13935 ವಯಲ್ಸ್ ಟೊಸಿಲಿಜುಮಾಬ್ ಚುಚ್ಚುಮದ್ದನ್ನು ಸಹ ವಿತರಿಸಲಾಗಿದೆ ಎಂದು ಸದಾನಂದ ಗೌಡ ವಿವರಿಸಿದರು

    ಮೂರು ದಿನಗಳ ಹಿಂದೆ ದೇಶದ ಬೇರೆ ಬೇರೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 29250 ವಯಲ್ಸ್ ಎಂಫೋಟೆರಿಸಿನ್- ಬಿ ಹಂಚಲಾಗಿತ್ತು. ಆಗ ರಾಜ್ಯಕ್ಕೆ 1221 ವಯಲ್ಸ್ ಒದಗಿಸಲಾಗಿತ್ತು. ಮೇ 24ರಂದು ಕಪ್ಪುಶಿಲೀಂಧ್ರ ರೋಗದ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ 19,420 ಸೀಸೆ (ವಯಲ್ಸ್) ಲಿಪೋಸೊಮಾಲ್ ಎಂಫೋಟೆರಿಸಿನ್- ಬಿ ಚುಚ್ಚುಮದ್ದನ್ನು ಹಂಚಿಕೆ ಮಾಡಿತ್ತು. ಕರ್ನಾಟಕ ರಾಜ್ಯಕ್ಕೆ 1030 ವಯಲ್ಸ್ ಒದಗಿಸಲಾಗಿತ್ತು. ಅದಕ್ಕೂ ಮುನ್ನ ಮೂರು ಕಂತುಗಳಲ್ಲಿ 1660 ವಯಲ್ಸ್ ಒದಗಿಸಲಾಗಿತ್ತು.

    ದೇಶದಲ್ಲಿಯೇ ತ್ವರಿತವಾಗಿ ಲಿಪೋಸೊಮಾಲ್ ಎಂಫೋಟೆರಿಸಿನ್- ಬಿ ಉತ್ಪಾದನೆ ಹೆಚ್ಚಿಸಲು ತುರ್ತು ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ದೇಶದ ಐದು ಫಾರ್ಮಾ ಕಂಪನಿಗಳು ಇದರ ಉತ್ಪಾದನೆ ಮಾಡುತ್ತಿದ್ದು ಈಗ ಹೊಸದಾಗಿ ಮತ್ತೆ ಐದು ಕಂಪನಿಗಳಿಗೆ ಲೈಸನ್ಸ್ ನೀಡಲಾಗಿದೆ. ಈ ಸ್ವದೇಶಿ ಕಂಪನಿಗಳು ಮೇ ತಿಂಗಳಲ್ಲಿ 1.63 ಲಕ್ಷ ಸೀಸೆ ಹಾಗೂ ಜೂನ್ ತಿಂಗಳಲ್ಲಿ 2.55 ಸೀಸೆ ಲಿಪೋಸೊಮಾಲ್ ಎಂಫೋಟೆರಿಸಿನ್ ಬಿ ಉತ್ಪಾದನೆ ಮಾಡಲಿವೆ ಎಂದು ಸಚಿವ ಸದಾನಂದ ಗೌಡ ಅವರು ತಿಳಿಸಿದ್ದಾರೆ.

    ಹಾಗೆಯೇ ಮೈಲಾನ್ ಕಂಪನಿ ಮೂಲಕ ಮೇ ತಿಂಗಳ ಒಳಗಾಗಿ 3.63 ಲಕ್ಷ ವಯಲ್ಸ್ ಲಿಪೋಸೊಮಾಲ್ ಎಂಫೋಟೆರಿಸಿನ್- ಬಿ ಆಮದು ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಸ್ವಲ್ಪಭಾಗ ಈಗಾಗಲೇ ಭಾರತ ತಲುಪಿದೆ. ಯೋಜಸಿದಂತೆ ಸಾಗಣೆಯಲ್ಲಿ ಏನೂ ವ್ಯತ್ಯಾಸವಾಗದಿದ್ದರೆ ಉಳಿದ ಬಹುತೇಕ ಭಾಗ ವಾರದೊಳಗೆ ಭಾರತ ತಲುಪುವುದೆಂದು ನಿರೀಕ್ಷಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

    ಇದನ್ನು ಓದಿ: Sputnik V: ಜೂನ್ 2ನೇ ವಾರದಿಂದ ಸ್ಪುಟ್ನಿಕ್ ವಿ ಲಸಿಕೆ ಅಪೋಲೊ ಆಸ್ಪತ್ರೆಯಲ್ಲಿ ಲಭ್ಯ!

    ಇನ್ನು, ಜೂನ್ ತಿಂಗಳಲ್ಲಿ 3.15 ಲಕ್ಷ ವಯಲ್ಸ್ ಲಿಪೋಸೊಮಾಲ್ ಎಂಫೋಟೆರಿಸಿನ್- ಬಿ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ 2.55 ಲಕ್ಷ ವಯಲ್ಸ್ ಸ್ವದೇಶಿ ಉತ್ಪಾದನೆ ಸೇರಿ ಜೂನ್ ತಿಂಗಳಲ್ಲಿ 5.7 ಲಕ್ಷ ವಯಲ್ಸ್ ಲಿಪೋಸೊಮಾಲ್ ಎಂಫೋಟೆರಿಸಿನ್- ಬಿ ಲಭ್ಯವಿರಲಿವೆ. ಅಗತ್ಯವಾದರೆ ಇನ್ನೂ ಹೆಚ್ಚು ಆಮದು ಮಾಡಿಕೊಳ್ಳುತ್ತೇವೆ. ಸ್ವದೇಶಿ ಉತ್ಪಾದನೆಯೂ ಹೆಚ್ಚಾಗುತ್ತಿದ್ದು ಇದರ ಹಂಚಿಕೆ ನಿರಂತರವಾಗಿ ನಡೆಯಲಿದೆ. ಕಪ್ಪು ಶಿಲೀಂದ್ರ ಹಳೆ ಕಾಯಿಲೆಯಾಗಿದ್ದು ಇದಕ್ಕೆ ಸಾಕಷ್ಟು ಪರ್ಯಾಯ ಔಷಧಗಳು ಲಭ್ಯವಿವೆ. ಹಾಗಾಗಿ ಇದಕ್ಕೆ ಔಷಧ ಕೊರತೆಯಾಗಬಹುದು ಎಂದು ಗಾಬರಿಗೊಳಗಾಗಬೇಡಿ ಎಂದು ಕೇಂದ್ರ ಸಚಿವ ಸದಾನಂದ ಗೌಡ ಅವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:HR Ramesh
    First published: