Tihar Jail: ದೆಹಲಿಯ ತಿಹಾರ್ ಜೈಲಿನ 52 ಕೈದಿಗಳು, 7 ಜೈಲಧಿಕಾರಿಗಳಿಗೆ ಕೊರೋನಾ ಸೋಂಕು

Coronavirus Updates: ದೇಶದಲ್ಲಿ ಅತಿಹೆಚ್ಚು ಕೈದಿಗಳಿರುವ ಬೃಹತ್ ಕಾರಾಗೃಹವಾಗಿರುವ ತಿಹಾರ್ ಜೈಲಿನ 52 ಕೈದಿಗಳು ಮಾತ್ರವಲ್ಲದೆ ಜೈಲಿನ ವೈದ್ಯರು ಸೇರಿದಂತೆ ಒಟ್ಟು 7 ಜೈಲಧಿಕಾರಿಗಳಿಗೆ ಕೊರೋನಾ ಸೋಂಕು ತಗುಲಿದೆ.

ತಿಹಾರ್ ಜೈಲ್

ತಿಹಾರ್ ಜೈಲ್

  • Share this:
ನವದೆಹಲಿ (ಏ. 13): ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನವದೆಹಲಿಯ ತಿಹಾರ್ ಜೈಲಿನ 52 ಕೈದಿಗಳಿಗೆ ಕೋವಿಡ್ ಸೋಂಕು ತಗುಲಿದ್ದು, ಜೈಲಿನ ಒಂದು ಕಾಂಪ್ಲೆಕ್ಸ್​ ಅನ್ನೇ ಸೀಲ್​ಡೌನ್ ಮಾಡಲಾಗಿದೆ. ದೇಶದಲ್ಲಿ ಅತಿಹೆಚ್ಚು ಕೈದಿಗಳಿರುವ ಬೃಹತ್ ಕಾರಾಗೃಹವಾಗಿರುವ ತಿಹಾರ್ ಜೈಲಿನ 52 ಕೊರೋನಾ ಸೋಂಕಿತ ಕೈದಿಗಳ ಪೈಕಿ 35 ಕೈದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇವಲ ಕೈದಿಗಳು ಮಾತ್ರವಲ್ಲದೆ ಜೈಲಿನ ವೈದ್ಯರು ಸೇರಿದಂತೆ ಒಟ್ಟು 7 ಜೈಲಧಿಕಾರಿಗಳಿಗೆ ಕೊರೋನಾ ಸೋಂಕು ತಗುಲಿದೆ. ಈ ಜೈಲಿನ ಸಾಮರ್ಥ್ಯ 10 ಸಾವಿರ. ಆದರೆ, ಸದ್ಯಕ್ಕೆ ತಿಹಾರ್ ಜೈಲಿನಲ್ಲಿ ಒಟ್ಟು 20 ಸಾವಿರ ಕೈದಿಗಳಿದ್ದಾರೆ. ಹೀಗಾಗಿ, ಉಳಿದ ಕೈದಿಗಳಿಗೂ ಕೊರೋನಾ ಹರಡುವ ಆತಂಕ ಎದುರಾಗಿದೆ.

ಏಪ್ರಿಲ್ 6ರವರೆಗೆ ತಿಹಾರ್ ಜೈಲಿನಲ್ಲಿ 19 ಕೊರೋನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿದ್ದವು. ಆದರೆ, ಕಳೆದೊಂದು ವಾರದಿಂದ ಈ ಸಂಖ್ಯೆ 52ಕ್ಕೆ ಏರಿಕೆಯಾಗಿದ್ದು, 7 ಅಧಿಕಾರಿಗಳೂ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿತರ ಪೈಕಿ ಮೂವರು ಕೈದಿಗಳ ಸ್ಥಿತಿ ಚಿಂತಾಜನಕವಾಗಿದೆ. 32 ಕೈದಿಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, 17 ಕೈದಿಗಳನ್ನು ಜೈಲಿನಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಇನ್ನು 7 ಕೈದಿಗಳನ್ನು ಜೈಲಿನಿಂದ ಹೊರಗೆ ಕ್ವಾರಂಟೈನ್ ಮಾಡಲಾಗಿದೆ.

ಭಾರತದಲ್ಲಿ ಸೋಮವಾರ 1,61,736 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 97,168 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,36,89,453ಕ್ಕೆ ಏರಿಕೆ ಆಗಿದೆ.‌ ಸೋಮವಾರ ಒಂದೇ ದಿನ ಕೊರೋನಾಗೆ 879 ಜನರು ಬಲಿ ಆಗಿದ್ದಾರೆ. ಸದ್ಯ ಮಹಾಮಾರಿ ಕೊರೋನಾಗೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈವರೆಗೆ ಕೊರೋನಾ ರೋಗದಿಂದ ಸತ್ತವರ ಸಂಖ್ಯೆ 1,71,058ಕ್ಕೆ ಏರಿಕೆ ಆಗಿದೆ.
Published by:Sushma Chakre
First published: