ಹಾಸನ (ಜೂ. 29): ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದೆ. ಈಗಾಗಲೇ ಎರಡನೇ ಅಲೆ ಸೋಂಕಿನಿಂದ ಕಂಗೆಟ್ಟಿರುವ ಜಿಲ್ಲೆಯಲ್ಲಿ ಮಕ್ಕಳಲ್ಲಿ ಸೋಂಕು ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತಷ್ಟು ಆತಂಕ ಉಂಟು ಮಾಡಿದೆ. ಜಿಲ್ಲೆಯಲ್ಲಿ ಏಳು ಸಾವಿರಕ್ಕೂ ಅಧಿಕ ಮಂದಿ ಕೊರೊನಾ ಎರಡನೇ ಅಲೆಗೆ ತುತ್ತಾಗಿದ್ದು, ಇದು ಹೆಚ್ಚಿನ ಕಳವಳ ಉಂಟು ಮಾಡಿದೆ. 2021 ರ ಮಾರ್ಚ್ 22 ರಿಂದ ಜೂನ್ 23 ರವರೆಗೆ 7747 ಮಂದಿ 18 ವರ್ಷ ಒಳಗಿನವರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 11 ರಿಂದ 18 ವರ್ಷದೊಳಗಿನವರೇ ಹೆಚ್ಚಿರುವುದು ಆತಂಕಕಾರಿ ಸಂಗತಿಯಾಗಿದೆ. ಅದರಲ್ಲೂ ಹಾಸನ ತಾಲೂಕಿನಲ್ಲಿಯೇ ಅತೀ ಹೆಚ್ಚು ಅಂದರೆ 2409 ಮಕ್ಕಳಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ
ಇನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ಒಂದೇ ತಿಂಗಳು ಅಂದರೆ ಜೂನ್ ತಿಂಗಳಿನಲ್ಲಿ 1843 ಮಕ್ಕಳಲ್ಲಿ ಕೊರೊನ ವೈರಸ್ ಸೋಂಕು ಕಾಣಿಸಿಕೊಂಡಿದೆ. ಜೂನ್ ತಿಂಗಳಿನಲ್ಲಿ ಹಾಸನ ತಾಲೂಕಿನಲ್ಲಿಯೇ ಅತೀ ಹೆಚ್ಚು ಅಂದರೆ 520 ಮಕ್ಕಳಿಗೆ ಸೋಂಕು ತಗುಲಿದೆ. ಜಿಲ್ಲಾ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಹಾಸನ ಜಿಲ್ಲೆಯಾದ್ಯಂತ 11 ರಿಂದ 18 ವಯಸ್ಸಿನ ಮಕ್ಕಳೇ ಅತೀ ಹೆಚ್ಚು ಸೋಂಕಿಗೆ ತುತ್ತಾಗುತ್ತಿದ್ದಾರೆ. ಇದುವರೆಗೂ ಹಾಸನ ಜಿಲ್ಲೆಯಲ್ಲಿ 5021 ಈ ವಯಸ್ಸಿನ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು ಪೋಷಕರ ವಲಯದಲ್ಲಿ ಆತಂಕ ಸೃಷ್ಠಿಸಿರುವುದು ಸುಳ್ಳಲ್ಲ.
ಇದನ್ನು ಓದಿ: ಇನ್ನು 10ದಿನದೊಳಗೆ ರಾಜ್ಯದ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ; ಡಿಸಿಎಂ ಅಶ್ವತ್ಥ್ ನಾರಾಯಣ
ಕೊರೊನಾ ಆರ್ಭಟ ಕಡಿಮೆಯಾದ ಬಳಿಕ ಸರ್ಕಾರ ಹಂತಹಂತವಾಗಿ ಲಾಕ್ ಡೌನ್ ಸಡಿಲಗೊಳಿಸುತ್ತಿದೆ. ಮೂರನೇ ಅಲೆಯ ಬಗ್ಗೆ ತಜ್ಞರ ಸಮಿತಿ ವರದಿ ನೀಡಿದ್ದು, ಈ ನಿಟ್ಟಿನಲ್ಲಿ ಮಕ್ಕಳ ಆರೋಗ್ಯ ರಕ್ಷಣೆಯ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಹಿಮ್ಸ್ ಆಸ್ಪತ್ರೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಮಾಹಿತಿ ನಿಡಿದ್ದು, ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗಾಗಿ 10 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಇದರೊಂದಿಗೆ ಹಿಮ್ಸ್ ನಲ್ಲಿ ವೆಂಟಿಲೇಟರ್ ಹಾಗೂ 200 ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಇನ್ನೂ ಹೆಚ್ಚಿನ ವೆಂಟಿಲೇಟರ್ ಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮಕ್ಕಳ ತಜ್ಞ ವೈದ್ಯರಿಗೆ ಅಗತ್ಯ ತರಬೇತಿ ನೀಡುವ ಮೂಲಕ ಸಜ್ಜುಗೊಳಿಸಲಿದ್ದೇವೆ ಎಂದಿದ್ದಾರೆ.
ಇದನ್ನು ಓದಿ: ಸೋಂಕು ಇಳಿಕೆಯಾದರೂ ರೆಡ್ಲಿಸ್ಟ್ನಿಂದ ಹೊರಬಂದಿಲ್ಲ ಬೆಂಗಳೂರಿನ ಈ 10 ಏರಿಯಾಗಳು
ಮಕ್ಕಳ ಆರೋಗ್ಯ ಅತ್ಯಂತ ಸೂಕ್ಷ್ಮ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಪ್ರಮುಖವಾಗಿ ಕೊರೊನಾ ನವಜಾತ ಶಿಶುಗಳನ್ನೂ ಬಾಧಿಸುತ್ತಿರುವುದು ಸದ್ಯ ಇರುವ ಅತೀ ದೊಡ್ಡ ಕಂಟಕ. ಇದಕ್ಕೆ ಪೋಷಕರು ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಮಾಸ್ಕ್ ಹಾಕುವುದನ್ನು ಕಲಿಸಬೇಕಿದೆ. ಸದಾ ಎಲ್ಲರೊಂದಿಗೆ ಬೆರೆಯುವ ಮಕ್ಕಳಿಗೆ ಸಾಮಾಜಿಕ ಅಂತರದ ಬಗ್ಗೆಯೂ ಅರಿವು ಮೂಡಿಸಬೇಕಿದೆ. ಮತ್ತೊಂದೆಡೆ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಮಕ್ಕಳ ಆರೋಗ್ಯ ರಕ್ಷಣೆಯ ಬಗ್ಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ.
(ವರದಿ: ಶಶಿಧರ್.ಬಿ.ಸಿ.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ