ವಿಜಯಪುರ(ಏ.10): ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗದ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಲಾಕ್ ಡೌನ್ ಸಡಿಲಿಕೆಗೆ ಚಿಂತನೆ ನಡೆದಿದೆ. ಆದರೆ, ಈ ಬಗ್ಗೆ ಇನ್ನೂ ಅಂತಿಮ ನಿರ್ಧಾವಾಗಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಕೊರೋನಾ ಪತ್ತೆಯಾಗದ ಜಿಲ್ಲೆ, ತಾಲೂಕಿಗೆ ಸೀಮಿತವಾಗಿ ಲಾಕ್ಡೌನ್ ತೆರವಿಗೆ ಚಿಂತನೆ ನಡೆದಿದೆ. ನಾಳೆ ಪ್ರಧಾನಿ ಸಿಎಂಗಳ ಸಭೆ ನಡೆಸಲಿದ್ದಾರೆ. ಆ ಸಭೆಯ ಬಳಿಕ ಈ ಕುರಿತು ಅಂತಿಮ ನಿರ್ಧಾರ ಸಾಧ್ಯತೆ ಇದೆ ಎಂದರು.
ಕೊರೋನಾ ತಡೆಗಟ್ಟಲು ಕೇಂದ್ರ ಸರಕಾರ ಏ.14ರ ವರೆಗೆ ಭಾರತ ಲಾಕ್ ಡೌನ್ ಮಾಡಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಸಿಎಂ ಗಳ ಜೊತೆ ವಿಡಿಯೋ ಕಾನ್ಪರೆನ್ಸ್ ನಡೆಸಲಿದ್ದಾರೆ. ಅಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಲಿದ್ದಾರೆ. ಕೆಲ ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ರಾಜ್ಯ ಮಟ್ಟ ದಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿ ಲಾಕ್ ಡೌನ್ ಸಡಿಲಿಕೆ ಮಾಡುವ ಕುರಿತು ಚರ್ಚೆ ನಡೆದಿದೆ ಎಂದು ತಿಳಿಸಿದರು.
ಲಾಕ್ ಡೌನ್ ಸಡಿಲಿಸಿದರೂ ಆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬಸ್ ಸಂಚಾರ ಆರಂಭಿಸಬೇಕು ಎನ್ನುವ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಏಕೆಂದರೆ ಕೆಲ ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ದಾಖಲಾಗದಿದ್ದರೂ ಅಕ್ಕಪಕ್ಕದ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳಿರುವ ಕಾರಣ ಬಸ್ ಸಂಚಾರ ಸದ್ಯಕ್ಕೆ ಅಸಾಧ್ಯ ಎಂದರು.
ರಾಜ್ಯದಲ್ಲಿ ಲಾಕಡೌನ್ ಜಾರಿ ಆದ ಮೇಲೆ ಜನರು ಇದಕ್ಕೆ ಸರಿಯಾಗಿ ಸ್ಪಂದಿಸಿಲ್ಲ. ಜನರು ಸಂಪೂರ್ಣ ಸಹಕಾರ ನೀಡಿದ್ದರೆ, ಕೊರೋನಾವನ್ನು ಸಮರ್ಥವಾಗಿ ಎದುರಿಸಬಹುದಿತ್ತು ಎಂದು ಗೋವಿಂದ ಕಾರಜೋಳ ತಿಳಿಸಿದರು.
ಇದನ್ನೂ ಓದಿ :
ಕೊರೋನಾ ಸಂಕಷ್ಟ: ಹಸಿದವರಿಗೆ ಅನ್ನದಾತರಾದ ಬೆಂಗಳೂರಿನ ಅಪಾರ್ಟ್ ಮೆಂಟ್ ನಿವಾಸಿಗಳು
ರಾಜ್ಯದಲ್ಲಿ ಇಲ್ಲಿಯವರೆಗೆ ಸುಮಾರು 21 ಸಾವಿರ ಜನ ಹೋಮ್ ಕ್ವಾರಂಟ್ವಿನ್ ನಲ್ಲಿದ್ದಾರೆ. ಅವರಲ್ಲಿ 17 ಸಾವಿರ ಜನ ಬೇರೆ ಬೇರೆ ರಾಜ್ಯದಿಂದ ಬಂದವರಿದ್ದಾರೆ. ಅವರು, ರಾಜ್ಯದಲ್ಲಿ ಇಲ್ಲಿಯವರೆಗೆ ಕೊರೋನಾ ಪಾಸಿಟಿವ್ ಇದ್ದವರ 207, ಸಾವನ್ನಪ್ಪಿದವರು 6 ಜನ ಮಾತ್ರ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ