ಹೊರ ಜಿಲ್ಲೆಗೆ ತೆರಳುವವರಿಗೆ ಎರಡೇ ಗಂಟೆಯಲ್ಲಿ ಸಿಗುತ್ತೇ ಪಾಸ್..!

ಲಾಕ್​ ಡೌನ್​​​ ಸಡಿಲಿಕೆ ಮಾಡಿದ್ದರೂ, ಸಾರ್ವಜನಿಕರು ಅಗತ್ಯ ಸಂದರ್ಭಗಳಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕು. ಅಗತ್ಯ ಸಾಮಾಗ್ರಿಗಳನ್ನು ಮನೆಯ ಸಮೀಪದಲ್ಲೇ ಖರೀದಿಸಬೇಕು

ವಾಹನಗಳ ಪರಿಶೀಲನೆ ನಡೆಸುತ್ತಿರುವ ಜಿಲ್ಲಾಧಿಕಾರಿ ಹಾಗೂ ಎಸ್​ಪಿ

ವಾಹನಗಳ ಪರಿಶೀಲನೆ ನಡೆಸುತ್ತಿರುವ ಜಿಲ್ಲಾಧಿಕಾರಿ ಹಾಗೂ ಎಸ್​ಪಿ

  • Share this:
ಶಿವಮೊಗ್ಗ(ಮೇ.06): ಕೊರೋನಾ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ಹೊರ ಜಿಲ್ಲೆಗಳಿಗೆ ಒಂದು ಅವಧಿಗೆ ಮಾತ್ರ ತೆರಳುವವರಿಗೆ ಈಗಾಗಲೇ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಹಂತದಲ್ಲಿ ವನ್ ವೇ ಪಾಸ್ ನೀಡಲಾಗುತ್ತಿದೆ. ವಿಳಂಬಕ್ಕೆ ಅವಕಾಶವಿಲ್ಲದಂತೆ ಅರ್ಜಿ ಸಲ್ಲಿಸಿದ ಎರಡು ಗಂಟೆ ಒಳಗಾಗಿ ಪಾಸ್ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅರ್ಜಿಯಲ್ಲಿ ಮೊಬೈಲ್ ಸಂಖ್ಯೆ ಸೇರಿದಂತೆ ಕನಿಷ್ಟ ಮಾಹಿತಿಗಳನ್ನು ಮಾತ್ರ ಪಡೆಯಬೇಕು. ಜನರನ್ನು ಕಾಯಿಸದೇ ನೇರವಾಗಿ ಅರ್ಜಿಯನ್ನು ಸ್ವೀಕರಿಸಬೇಕು. ಒಂದು ವೇಳೆ ಪಾಸ್ ನೀಡಲು ಸಾಧ್ಯವಿಲ್ಲದಿದ್ದರೆ ಅರ್ಜಿ ಸ್ವೀಕರಿಸುವ ಸಂದರ್ಭದಲ್ಲಿಯೇ ತಿಳಿಸಬೇಕು. ಅರ್ಜಿಗಳನ್ನು ತಹಶೀಲ್ದಾರ್ ಕಚೇರಿಯಲ್ಲಿ ಸ್ವೀಕರಿಸಬೇಕು. ಪಾಸ್​ಗಳನ್ನು ಮೊಬೈಲ್ ಸಂಖ್ಯೆ ತಿಳಿಸಿ ನಾಡ ಕಚೇರಿಯಲ್ಲಿ ಪಡೆಯುವಂತ ವ್ಯವಸ್ಥೆ ಸಹ ಮಾಡಲಾಗಿದೆ.

ಹೊರ ಜಿಲ್ಲೆಗಳಿಗೆ ತೆರಳುವವರು ಬಸ್ ಸೌಲಭ್ಯ ಬಯಸಿದರೆ ಕಲ್ಪಿಸಲಾಗುತ್ತಿದೆ. ಯಾವುದಾದರೂ ಒಂದು ಊರಿಗೆ ಒಂದು ಬಸ್​ನಲ್ಲಿ ಪ್ರಯಾಣಿಸುವಷ್ಟು ಜನರಿಂದ ವಿನಂತಿ ಬಂದರೆ, ಕೆಎಎಸ್​ಆರ್​​ಟಿಸಿ ಅಧಿಕಾರಿಗಳಿಗೆ ಮಾತನಾಡಿ ಬಸ್ ವ್ಯವಸ್ಥೆ ಮಾಡಿ ಅರ್ಜಿದಾರರಿಗೆ ಮಾಹಿತಿ ನೀಡುವ ಕೆಲಸ ಸಹ ಆಗುತ್ತಿದೆ. ಇದರಿಂದ ಹೊರ ಜಿಲ್ಲೆಗಳಿಗೆ ತೆರಳುವಂತವರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಕಳೆದ 45 ದಿನಗಳಿಂದ ಬೇರೆ ಜಿಲ್ಲೆಗಳಿಂದ ಬಂದು ಇಲ್ಲೇ ಲಾಕ್ ಆಗಿದ್ದವರು. ಈಗ ಅವರ ಜಿಲ್ಲೆಗಳಿಗೆ ಮರಳಿ ಹೋಗುವುದಕ್ಕೆ ಸಹಕಾರಿಯಾಗಿದೆ.

ಜಿಲ್ಲೆಯ ಎಪಿಎಂಸಿಗಳಿಗೆ ಸೇರಿದಂತೆ ಕೈಗಾರಿಕಾ ವಲಯಗಳಿಗೆ ಹೊರ ರಾಜ್ಯಗಳಿಂದ ಲಾರಿಗಳಲ್ಲಿ ಆಗಮಿಸುವವರ ಸಂಪೂರ್ಣ ವಿವರಗಳನ್ನು ಪಡೆಯಬೇಕು. ಹೊರ ರಾಜ್ಯಗಳಿಂದ ಲಾರಿಗಳಲ್ಲಿ ಅನಧಿಕೃತವಾಗಿ ಯಾರೂ ಜಿಲ್ಲೆ ಪ್ರವೇಶಿಸುವಂತಿಲ್ಲ. ಎಪಿಎಂಸಿಗಳಿಗೆ ಆಗಮಿಸುವ ಲಾರಿಗಳ ಚಾಲಕರ ವಿವರ, ಒಂದು ವೇಳೆ ಹಮಾಲಿಗಳು ಆಗಮಿಸಿದ್ದರೆ ಅವರ ವಿವರ, ಆಗಮಿಸಿದ ಹಾಗೂ ಹಿಂತಿರುಗುವ ದಿನಾಂಕ ಇತ್ಯಾದಿಗಳನ್ನು ಎಪಿಎಂಸಿ ಕಾರ್ಯದರ್ಶಿಗಳು ಪಡೆದು ಪೊಲೀಸರಿಗೆ ಸಲ್ಲಿಸಬೇಕು ಎಂಬ ನಿರ್ದೇಶನ ಸಹ ನೀಡಲಾಗಿದೆ. ಯಾವುದೇ ಕಾರಣಕ್ಕೂ ಲಾರಿಯಲ್ಲಿ ಆಗಮಿಸುವವರು ಎಪಿಎಂಸಿ ಆವರಣದ ಹೊರಗೆ ಅಡ್ಡಾಡುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ಸಗಟು ಡೀಲರ್ ವಿರುದ್ಧ ಸೂಕ್ತ ಕ್ರಮ ಜರುಗಿಸು ಎಚ್ಚರಿಕೆ ನೀಡಲಾಗಿದೆ.

ಲಾಕ್​ ಡೌನ್​​​ ಸಡಿಲಿಕೆ ಮಾಡಿದ್ದರೂ, ಸಾರ್ವಜನಿಕರು ಅಗತ್ಯ ಸಂದರ್ಭಗಳಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕು. ಅಗತ್ಯ ಸಾಮಾಗ್ರಿಗಳನ್ನು ಮನೆಯ ಸಮೀಪದಲ್ಲೇ ಖರೀದಿಸಬೇಕು. ಯಾವುದೇ ಅಂಗಡಿಗಳ ಮುಂದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ವ್ಯಾಪಾರ ನಡೆಸುತ್ತಿದ್ದರೆ, ಅಂತಹ ಅಂಗಡಿ ಮಾಲಿಕರಿಗೆ ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ಸೂಚನೆ ಕೊಟ್ಟಿದ್ದಾರೆ.

ಇದನ್ನೂ ಓದಿ :  ಬಿಐಇಸಿ ಕೇಂದ್ರದಲ್ಲಿ 11 ಜನರಿಗೆ ಕೊರೋನಾ ಶಂಕೆ ; 3 ಸಾವಿರ ಜನರ ತಪಾಸಣೆ

ಇನ್ನು ಜಿಲ್ಲೆಯಲ್ಲಿ ಸೆಲೂನ್ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಕಡ್ಡಾಯವಾಗಿ ಮಾಸ್ಕ್ ಮತ್ತು ಕೈಗವಸು ಸೇರಿದಂತೆ ಎಲ್ಲಾ ಅಗತ್ಯ ಮುಂಜಾಗರೂಕತೆ ವಹಿಸಿರಬೇಕು ಎಂದು ನಿರ್ದೇಶನ ಕೊಡಲಾಗಿದೆ.
First published: