CoronaVirus: ಕೊರೋನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಎದುರಾಗಲಿದೆ ಆತಂಕ: ರಾಜ್ಯದಲ್ಲಿದೆ ಮಕ್ಕಳ ತಜ್ಞ ವೈದ್ಯರ ಕೊರತೆ
ಮೂರನೇ ಅಲೆಗೂ ಮುಂಚಿತವಾಗಿ ಮಕ್ಕಳ ಚಿಕಿತ್ಸಾ ಸೌಲಭ್ಯ ಸಶಕ್ತೀಕರಣಕ್ಕೆ ಸರ್ಕಾರ ಚಿಂತನೆ ಮಾಡುತ್ತಿದೆ. ನಮ್ಮ ರಾಜ್ಯದಲ್ಲಿ ಇರುವುದು ಅಂದಾಜು 3 ಸಾವಿರ ಮಕ್ಕಳ ವೈದ್ಯರು ಮಾತ್ರ. ಬೆಂಗಳೂರಿನಲ್ಲಿರುವುದು ಕೇವಲ 1200 ಮಕ್ಕಳ ತಜ್ಞ ವೈದ್ಯರಷ್ಟೇ.
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗುತ್ತಿದೆ. ಈ ನಡುವೆ ಮೂರನೇ ಅಲೆಯ ಮುನ್ಸೂಚನೆಯನ್ನೂ ಹಿರಿಯ ತಜ್ಞ ವೈದ್ಯರು ಕೊಟ್ಟಿದ್ದಾರೆ. ಆದ್ರೆ ಕೊರೋನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಕಾಡಲಿದೆ ಅನ್ನುವುದು ತಜ್ಞರ ಅಂದಾಜು. ಒಂದು ವೇಳೆ ಹಾಗಾದರೆ ನಮ್ಮಲ್ಲಿ ಮಕ್ಕಳ ವೈದ್ಯರ ಕೊರತೆ ಕಾಣಲಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೊರೋನಾ ಎರಡನೇ ಅಲೆಯ ಕೊನೆಗಳಿಗೆಯಲ್ಲಿ ನಾವಿದ್ದೇವೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಮೂರನೇ ಅಲೆಯೂ ಅಪ್ಪಳಿಸಲಿದೆ ಅನ್ನುವುದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ತಜ್ಞರು ಹೇಳಿದಂತೆ ಕೊರೋನಾ ಮೂರನೇ ಅಲೆ ಬಂದು ಮಕ್ಕಳನ್ನು ಗುರಿಯಾಗಿಸಿದರೆ ಮತ್ತೊಮ್ಮೆ ದುರಂತ ತಪ್ಪಿದ್ದಲ್ಲ. ಯಾಕಂದ್ರೆ ನಮ್ಮ ರಾಜ್ಯದಲ್ಲಿ ಇದಕ್ಕೆ ಬೇಕಾದ ವೈದ್ಯರಿಲ್ಲ. ಮಕ್ಕಳ ತಜ್ಞ ವೈದ್ಯರ ಕೊರತೆ ಇದೆ ನಮ್ಮಲ್ಲಿ. ಈ ಬಗ್ಗೆ ಗಂಭೀರ ಚಿಂತನೆಯಲ್ಲಿದೆ ಸರ್ಕಾರ ಹಾಗೂ ಇನ್ನಿತರ ಸ್ಥಳೀಯ ಆಡಳಿತ ಸಂಸ್ಥೆಗಳು.
ಮೂರನೇ ಅಲೆಗೂ ಮುಂಚಿತವಾಗಿ ಮಕ್ಕಳ ಚಿಕಿತ್ಸಾ ಸೌಲಭ್ಯ ಸಶಕ್ತೀಕರಣಕ್ಕೆ ಸರ್ಕಾರ ಚಿಂತನೆ ಮಾಡುತ್ತಿದೆ. ನಮ್ಮ ರಾಜ್ಯದಲ್ಲಿ ಇರುವುದು ಅಂದಾಜು 3 ಸಾವಿರ ಮಕ್ಕಳ ವೈದ್ಯರು ಮಾತ್ರ. ಬೆಂಗಳೂರಿನಲ್ಲಿರುವುದು ಕೇವಲ 1200 ಮಕ್ಕಳ ತಜ್ಞ ವೈದ್ಯರಷ್ಟೇ. ಹೀಗಾಗಿ ಮೂರನೇ ಅಲೆಗೆ ಮಕ್ಕಳು ತುತ್ತಾದ್ರೆ ವೈದ್ಯರ ಅಭಾವ ಕಾಡಲಿದೆ ಕರುನಾಡಿಗೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಸುಮಾರು 2 ಲಕ್ಷ 32 ಸಾವಿರ ಮಕ್ಕಳಿಗೆ ಸೋಂಕು ಬಾಧಿಸಿದೆ. ಆದರೆ ಮೂರನೇ ಅಲೆಯಲ್ಲಿ ಇದರ ಸಂಖ್ಯೆ ಅನೂಹ್ಯ ಮಟ್ಟಕ್ಕೆ ಏರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
10-15 ವಯಸ್ಕ ಕೊರೋನಾ ಸೋಂಕಿತರಿಗೆ ಒಬ್ಬ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಬಹುದು. ಆದರೆ ಮಕ್ಕಳ ವಿಚಾರಕ್ಕೆ ಬಂದ್ರೆ ಅದು ಸಾಧ್ಯವಿಲ್ಲ. ಮಕ್ಕಳು ವೆಂಟಿಲೇಟರ್ ಕಿತ್ತು ಹಾಕುವುದು ಹಾಗೂ ಇತರೆ ತುಂಟ ಪ್ರವೃತ್ತಿ ತೋರಿಕೆ ಸಾಧ್ಯತೆ ಇದೆ. ಹೀಗಾಗಿ 2-3 ಮಕ್ಕಳಿಗೆ ಒಬ್ಬ ತಜ್ಞ ವೈದ್ಯನ ಅಗತ್ಯತೆ ಬೀಳಲಿದೆ.
ಸದ್ಯ ಸರ್ಕಾರ ಹಿರಿಯ ವೈದ್ಯ ಡಾ ದೇವಿಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ರಚಿಸಿದ ತಾಂತ್ರಿಕ ಸಲಹಾ ಸಮಿತಿ ರಾಜ್ಯದಲ್ಲಿರುವ ಪಿಡಿಯಾಟ್ರಿಕ್ ಹಾಸ್ಟಿಟಲ್ ಗಳ ವ್ಯವಸ್ಯೆ ಮತ್ತು ಮಾಹಿತಿ ಕಲೆ ಹಾಕುತ್ತಿದೆ. ಬೇಗನೆ ಇದಕ್ಕೊಂದು ಪರಿಹಾರ ಸಿಗುವ ಭರವಸೆ ಇದೆ.
ಮೂರನೇ ಅಲೆಗೆ ಪಾಲಿಕೆ ಸಿದ್ಧತೆ:
ಇನ್ನು ಮೂರನೇ ಅಲೆಗೆ ಬಿಬಿಎಂಪಿ ಭರದ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಗರದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಜನರೆಟರ್ಸ್ ಅಳವಡಿಕೆ ಪಾಲಿಕೆ ಸೂಚಿಸಿದೆ. ಈ ಬಾರಿ ಮಕ್ಕಳ ಚಿಕಿತ್ಸಾ ಸೌಲಭ್ಯದ ಗುಣಮಟ್ಟ ಹೆಚ್ಚಿಸಲು ಬಿಬಿಎಂಪಿ ನಿರ್ಧರಿಸಿದೆ. ಆಕ್ಸಿಜನ್ ಪ್ಲಾಂಟ್ ರೀತಿ ಓಪನ್ ಮಾಡಲು ಜಾಗೂ ಮಕ್ಕಳಿಗೆ ಪ್ರತ್ಯೇಕ ಆಸ್ಪತ್ರೆ ಮೀಸಲಿಡಲು ಚಿಂತನೆಯನ್ನೂ ಮಾಡಿದೆ. ಇದರ ಜೊತೆಗೆ ಮಕ್ಕಳ ತಜ್ಞರ ಎಲ್ಲ ಕಡೆ ನೇಮಕಕ್ಕೆ ಒತ್ತು.
ವೈದ್ಯಕೀಯ ಸಿಬ್ಬಂದಿ ಹೆಚ್ಚಳಕ್ಕೂ ಕ್ರಮವನ್ನು ತೆಗೆದುಕೊಳ್ತಿದೆ. ಒಟ್ಟಾರೆಯಾಗಿ ಮೂರನೇ ಅಲೆ ಕೊರೋನಾ ಆಟಾಟೋಪಕ್ಕೆ ಆರಂಭದಲ್ಲೇ ಬ್ರೇಕ್ ಹಾಕುವುದಕ್ಕೆ ಸಕಲ ಸಿದ್ಧತೆಗಳು ನಡೀತಿವೆ. ಆದರೆ ಮೂರನೇ ಅಲೆ ಮಕ್ಕಳನ್ನು ಗುರಿ ಮಾಡುತ್ತೆ ಎಂಬ ತಜ್ಞರ ಅಭಿಪ್ರಾಯ ಆತಂಕ ಹುಟ್ಟಿಸಿದೆ. ಯಾಕಂದ್ರೆ ರಾಜ್ಯದಲ್ಲಿ ಇರುವುದು ಕೇವಲ 3 ಸಾವಿರ ಮಕ್ಕಳ ತಜ್ಞ ವೈದ್ಯರು ಮಾತ್ರ.
(ವರದಿ- ಆಶಿಕ್ ಮುಲ್ಕಿ)
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ