ಹರಿಯಾಣ (ಏ.22) : ಕೊರೋನಾ ಭಾರತೀಯರನ್ನು ದಿನೇ ದಿನೇ ಕಿತ್ತು ತಿನ್ನುತ್ತಿದೆ. ವೈರಸ್ನಿಂದ ಬದುಕುಳಿಯಲು ಲಕ್ಷಾಂತರ ಜನ ನಿತ್ಯ ಹೋರಾಟ ನಡೆಸುತ್ತಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ಮಾನವೀಯತೆಗಿಂತ ಮೇಲು ಬೇರೇನೂ ಇಲ್ಲ ಎಂಬುವುದು ಹರಿಯಾಣದಲ್ಲಿ ನಡೆದ ಘಟನೆಯಿಂದ ಸಾಬೀತಾಗಿದೆ. ಕದ್ದ ಬಾಕ್ಸ್ನಲ್ಲಿ ಕೊರೋನಾ ವ್ಯಾಕ್ಸಿನ್ ಇದ್ದಿದ್ದನ್ನು ಕಂಡ ಕಳ್ಳರು ಬಾಕ್ಸನ್ನು ಪೊಲೀಸ್ ಠಾಣೆಯ ಬಳಿ ಬಿಟ್ಟು ಹೋಗಿದ್ದಾರೆ. ಜೊತೆಗೆ ಪತ್ರವನ್ನೂ ಬರೆದಿರುವ ಕಳ್ಳರು ನಮ್ಮನ್ನು ಕ್ಷಮಿಸಿ. ಬಾಕ್ಸ್ನಲ್ಲಿ ವ್ಯಾಕ್ಸಿನ್ ಇದೆ ಎಂದು ತಿಳಿಯದೇ ಕದ್ದಿದ್ದಕ್ಕೆ ಕ್ಷಮೆ ಇರಲಿ ಎಂದು ಬರೆದಿದ್ದಾರೆ. ತಮ್ಮ ಮಾನವೀಯತೆ ಮೂಲಕ ಕಳ್ಳರು ಪೊಲೀಸರ ಮನಗೆದ್ದಿದ್ದಾರೆ.
ಇಂಥ ಅಪರೂಪದ ಘಟನೆ ನಡೆದಿರೋದು ಜಿಂದ್ ಜಿಲ್ಲೆಯ ಆಸ್ಪತ್ರೆಯಲ್ಲಿ. ಬುಧವಾರ ರಾತ್ರಿ ಆಸ್ಪತ್ರೆಗೆ ನುಗ್ಗಿದ್ದ ಕಳ್ಳರು ಸ್ಟೋರ್ ರೂಂನಲ್ಲಿ ಕೈಗೆ ಸಿಕ್ಕ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು. ಆಸ್ಪತ್ರೆಯ ಹೆಡ್ ನರ್ಸ್ ಬಂದು ನೋಡುವಷ್ಟರಲ್ಲಿ ಔಷಧಿ ದಾಸ್ತಾನು ಕೊಠಡಿಯ ಬೀಗ ಮುರಿದಿತ್ತು. ಒಳಗೆ ಪರಿಶೀಲಿಸಿದಾಗ ವ್ಯಾಕ್ಸಿನ್ ಇದ್ದ ಬಾಕ್ಸ್ ಕಣ್ಮರೆಯಾಗಿತ್ತು. ವ್ಯಾಕ್ಸಿನ್ ಕಳವಿನಿಂದ ಜಿಲ್ಲೆಯಲ್ಲಿ ವಿತರಿಸಲು ಲಸಿಕೆ ಇಲ್ಲದಂತೆ ಆಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು. ವಾಕ್ಸಿನ್ ಕಳವಾಗಿದೆ ಎಂದು ದೊಡ್ಡ ಸುದ್ದಿಯಾಗಿತ್ತು.
2 ದಿನಗಳ ನಂತರ ಆಸ್ಪತ್ರೆಯಲ್ಲಿ ಕಳುವಾಗಿದ್ದ ಲಸಿಕೆಗಳಿದ್ದ ಬಾಕ್ಸ್ ಸ್ಥಳೀಯ ಪೊಲೀಸ್ ಠಾಣೆಯ ಬಳಿ ಪತ್ತೆಯಾಗಿತ್ತು. ಬಾಕ್ಸ್ನಲ್ಲಿ 182 ವೈಯಲ್ಸ್ ಕೋವಿಶೀಲ್ಡ್ ಹಾಗೂ 440 ಡೋಸೇಜ್ ಕೊವ್ಯಾಕ್ಸಿನ್ ಲಸಿಕೆ ಹಾಗೆಯೇ ಇದ್ದವು. ಬಾಕ್ಸ್ ಜೊತೆ ಕಳ್ಳರು ಬರೆದಿದ್ದ ಪತ್ರವೂ ಸಿಕ್ಕಿತ್ತು. ಗೊತ್ತಿಲ್ಲದೇ ನಾವು ವ್ಯಾಕ್ಸಿನ್ ಇದ್ದ ಬಾಕ್ಸನ್ನು ಕದ್ದಿದ್ದೇವೆ. ಹೀಗಾಗಿ ಬಾಕ್ಸನ್ನು ಹಿಂತಿರುಗಿಸುತ್ತಿದ್ದೇವೆ. ಕ್ಷಮೆ ಇರಲಿ ಎಂದು ಹಿಂದಿಯಲ್ಲಿ ಬರೆಯಲಾಗಿತ್ತು.
ಕಳ್ಳರ ನಿಯತ್ತಿಗೆ ಪೊಲೀಸರ ಮನವೂ ಕರಗಿದೆ. ಕೊರೋನಾ ಕಷ್ಟವನ್ನು ಅರಿತು ಜವಾಬ್ದಾರಿಯುತವಾಗಿ ನಡೆದುಕೊಂಡ ಕಳ್ಳರ ಬಗ್ಗೆ ಸ್ಥಳೀಯರಲ್ಲೂ ಮರುಕ ಉಂಟಾಗಿದೆ. ಇನ್ನು ಪೊಲೀಸ್ ಠಾಣೆಯ ಟೀ ಅಂಗಡಿ ಬಳಿ ವ್ಯಾಕ್ಸಿನ್ ಬಾಕ್ಸ್ ಇಟ್ಟು ಹೋದ ಕಳ್ಳರಿಗಾಗಿ ಹುಡುಕಾಟ ನಡೆಸಲಾಗಿದೆ. ಸ್ಥಳದಲ್ಲಿದ್ದ ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಕಳ್ಳರು ಬಾಕ್ಸನ್ನು ತಂದಿಟ್ಟಿರುವುದು ಗೊತ್ತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ