ಬೆಂಗಳೂರು: ಕಳೆದ ಎರಡು ಗಂಟೆಗಳಿಂದ ಕೋವಿಡ್ ಸಂಬಂಧಿಸಿದಂತೆ ಸಭೆ ನಡೆಸಲಾಯಿತು. ಕೋವಿಡ್ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಸಭೆ ಮಾಡಲಾಯಿತು. ಸಭೆಯಲ್ಲಿ ಸಚಿವರು, ತಜ್ಞರು ಭಾಗಿಯಾಗಿದ್ದರು. ಬೆಂಗಳೂರಿನ ಪರಿಸ್ಥಿತಿ ಬಗ್ಗೆ ಹೆಚ್ಚಿನ ಚರ್ಚೆ ನಡೆಸಲಾಯಿತು. ಮುಂದಿನ 15 ದಿನ ರಾಜ್ಯದಲ್ಲಿ ಯಾವುದೇ ರೀತಿಯ ಸತ್ಯಾಗ್ರಹ ನಡೆಸಬಾರದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಹೇಳಿದರು.
ಕೋವಿಡ್ ಪ್ರಕರಣಗಳ ಹೆಚ್ಚಾದ ಹಿನ್ನೆಲೆಯಲ್ಲಿ ಇಂದು ಸಿಎಂ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ವೈ ಅವರು,
ಕೋವಿಡ್ ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ. ಈಗಾಗಲೇ 150 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ. ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ವಹಿಸಲೇಬೇಕು. ಇವತ್ತಿನಿಂದ ಇನ್ನು ಹದಿನೈದು ದಿನ ಯಾವುದೇ ರೀತಿ ಸತ್ಯಾಗ್ರಹ, ಚಳವಳಿಗೆ ಅವಕಾಶ ಇಲ್ಲ. ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ನಾಳೆಯಿಂದ ಮಾಸ್ಕ್ ದಂಡ ಜಾರಿಯಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಬಳಸಲೇಬೇಕು. ಮಾಸ್ಕ್ ಹಾಕದಿದ್ದಲ್ಲಿ ದಂಡ ವಿಧಿಸಲಾಗುವುದು.
ಫೆಬ್ರವರಿಯಲ್ಲಿ ಕೊರೋನಾ ಪ್ರಕರಣ ಶೇ. 0.9 ಇತ್ತು. ಮಾರ್ಚ್ನಲ್ಲಿ ಶೇ. 1.45 ರಷ್ಟು ಹೆಚ್ಚಾಗಿದೆ. ಕೊರೋನಾ ಚಿಕಿತ್ಸೆಗಾಗಿ ಬೆಂಗಳೂರಿನ ಹಜ್ ಭವನದಲ್ಲಿ 100 ಹಾಸಿಗೆ ಹಾಗೂ ಕೋರಮಂಗಲದ ಸ್ಟೇಡಿಯಂನಲ್ಲಿ 250 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಒಂದು ದಿನಕ್ಕೆ 40 ಸಾವಿರ ಕೇಸ್ ಬಂದರೆ ರಾಜ್ಯದಲ್ಲಿ 3 ಸಾವಿರ ಕೇಸ್ ಪತ್ತೆಯಾಗುತ್ತಿವೆ ಎಂದು ತಿಳಿಸಿದರು.
ಸ್ಲಮ್ಗಳಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಇದೆ. ಅಪಾರ್ಟ್ ಮೆಂಟ್ ಗಳಲ್ಲಿ ಕೋವಿಡ್ ನಿರ್ವಹಣೆ ಅಗತ್ಯ. ಕೋವಿಡ್ ಹೆಚ್ಚಾಗುತ್ತಾ ಇರೋ ಅಪಾರ್ಟ್ ಮೆಂಟ್ ಗಳಲ್ಲಿ
ಪಾರ್ಟಿ ಮಾಡಲು ಅವಕಾಶ ಇಲ್ಲ. ಕೋವಿಡ್ ವಿಷಯವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದು ಸಲಹೆ ನೀಡಿದ್ದಾರೆ. ಈ ಸಭೆಯಲ್ಲಿ ವಿಪಕ್ಷ ನಾಯಕರ ಸಲಹೆಯನ್ನು ಎಲ್ಲರಿಗೂ ತಿಳಿಸಿದ್ದೇವೆ. ವಿರೋಧ ಪಕ್ಷದ ನಾಯಕರ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತವೆ ಎಂದು ಯಡಿಯೂರಪ್ಪ ಅವರು ಹೇಳಿದರು.
ಇದನ್ನು ಓದಿ: ಕೊರೋನಾ ರಣಕೇಕೆ; ಔಷಧಿ ಮಳಿಗೆಗಳಿಂದ ಮಾಹಿತಿ ಸಂಗ್ರಹಿಸಿ; ಬಿಬಿಎಂಪಿ ಕಮಿಷನರ್ ಡಾ ಮಂಜುನಾಥ್
ಶಾಲಾ- ಕಾಲೇಜು ಬಂದ್ ಮಾಡಲ್ಲ. ಇನ್ನು ಹದಿನೈದು ದಿನ ಪರೀಕ್ಷೆಗಳು ಬರುತ್ತವೆ. ಯಾವುದೇ ಕಾರಣಕ್ಕೂ ಸ್ಕೂಲ್ -ಕಾಲೇಜು ಬಂದ್ ಇಲ್ಲ. ಪರೀಕ್ಷೆ ಇಲ್ಲದೇ ಯಾವುದೇ ವಿದ್ಯಾರ್ಥಿಗಳನ್ನು ಪಾಸ್ ಮಾಡೋದಿಲ್ಲ ಎಂದು ಹೇಳಿದ ಯಡಿಯೂರಪ್ಪ ಅವರು,
ಚಿತ್ರಮಂದಿರಗಳಲ್ಲಿ ಶೇ. 50 ಸೀಟ್ ಫಿಲ್ಲಿಂಗ್ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಪ್ರಸ್ತಾಪಿಸಿದೆ. ಆರಂಭಿಕ ಹಂತದಲ್ಲಿ ಚಿತ್ರಮಂದಿರಗಳ ಮೇಲೆ ನಿಗಾ ಇಟ್ಟರೆ ಕೊಂಚ ನಿರಾಳ. ಹೀಗಾಗಿ ಚೈನ್ ಬ್ರೇಕ್ ಮಾಡಲು ಥಿಯೇಟರ್ ಗಳಲ್ಲಿ ಮತ್ತೆ ಶೇ. 50 ಸೀಟ್ ಗೆ ಆದೇಶಿಸಿ ಎಂದ ತಾಂತ್ರಿಕ ಸಲಹಾ ಸಮಿತಿ ಹೇಳಿದೆ. ಆದರೆ ಈ ಬಗ್ಗೆ ಯಾವುದೇ ನಿರ್ಧಾರ ಸದ್ಯಕ್ಕೆ ಬೇಡ ಎನ್ನಲಾಗಿದೆ. ಆರ್ಥಿಕವಾಗಿ ಹೊಡೆತ ಕೊಡುವ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಹೇಳಿದರು.
ಜಾತ್ರೆ ಸೇರಿದಂತೆ ಮದುವೆ , ಕಾರ್ಯಕ್ರಮಗಳಿಗೆ ಹೆಚ್ಚಿನ ಜನ ಸೇರುವ ಹಾಗಿಲ್ಲ. ಮದುವೆ ಸಮಾರಂಭಗಳಲ್ಲಿ 400 ರಿಂದ 500 ಜನರು ಮಾತ್ರ ಸೇರಬಹುದು ಉಪ ಚುನಾವಣೆಗಳ ರ್ಯಾಲಿಯಲ್ಲಿ ಜನ ಸೇರುವುದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸುತ್ತೇನೆ. ನಾಳೆಯಿಂದಲೇ ಚುನಾವಣೆ ರ್ಯಾಲಿ, ಸೇರಿದಂತೆ ಎಲ್ಲಾ ಕಡೆ ಜನ ಸೇರಿಸುದರ ವಿರುದ್ದ ಕಠೀಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ