ಕೊರೋನಾ ತಡೆಗೆ ಸರ್ಕಾರದ ನಡೆ: ವಾರದ ಮಟ್ಟಿಗೆ ಮಾಲ್​, ಥಿಯೇಟರ್​, ಜಾತ್ರೆ, ಮದುವೆ, ಸಾರ್ವಜನಿಕ ಸಭೆಗಳಿಗೆ ನಿಷೇಧ

ಸಾರ್ವಜನಿಕರ ಹಿತದೃಷ್ಟಿ ಹಿನ್ನೆಲೆ ಒಂದು ವಾರಗಳ ಕಾಲ ಮಾಲ್​, ಥಿಯೇಟರ್, ಪಬ್​, ಶಾಲಾ ಕಾಲೇಜು​ಗಳನ್ನು ಸ್ಥಗಿತಗೊಳಿಸಲಾಗುವುದು. ಅಲ್ಲದೇ ಯಾವುದೇ ಸಭೆ, ಸಮಾರಂಭ, ಮದುವೆ, ಜಾತ್ರೆ ನಡೆಸದಂತೆ ಆದೇಶಿಸಿರುವುದಾಗಿ ಯಡಿಯೂರಪ್ಪ ಘೋಷಿಸಿದರು

ಬಿಎಸ್​ ಯಡಿಯೂರಪ್ಪ

ಬಿಎಸ್​ ಯಡಿಯೂರಪ್ಪ

 • Share this:
  ಬೆಂಗಳೂರು  (ಮಾ.13): ಮಹಾಮಾರಿ ಕೊರೋನಾ ವೈರಸ್ ​ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ  ಜನಸಂದಣಿ ಸೇರುವ ಮಾಲ್​ ಹಾಗೂ ಥಿಯೇಟರ್​ಗಳನ್ನು ಒಂದು ವಾರದ ಮಟ್ಟಿಗೆ ಬಂದ್​ ಮಾಡುವಂತೆ ಸಿಎಂ ಬಿಎಸ್​ ಯಡಿಯೂರಪ್ಪ ಆದೇಶ ಮಾಡಿದ್ದಾರೆ. ಕೊರೋನಾ ವೈರಸ್​ ಒಬ್ಬರಿಂದ ಒಬ್ಬರಿಗೆ ಅತಿ ಶೀಘ್ರದಲ್ಲಿ ಹರಡುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.

  ವಿಶ್ವದೆಲ್ಲೆಡೆ ಆತಂಕ ಮೂಡಿಸಿರುವ ಮಾರಣಾಂತಿಕ ಕೊರೋನಾಗೆ ರಾಜ್ಯದಲ್ಲಿ ಈಗಾಗಲೇ 6 ಜನ ಸೋಂಕಿತರಾಗಿದ್ದು, ಕಲಬುರ್ಗಿ ವೃದ್ಧ ಸಾವನ್ನಪ್ಪುವ ಮೂಲಕ ರಾಜ್ಯದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ವೈದ್ಯರು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಸಭೆ ನಡೆಸಿದ್ದರು.

  ಸಭೆ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್​ವೈ, ಸಾರ್ವಜನಿಕರ ಹಿತದೃಷ್ಟಿ ಹಿನ್ನೆಲೆ ಒಂದು ವಾರಗಳ ಕಾಲ ಮಾಲ್​, ಥಿಯೇಟರ್, ಪಬ್, ನೈಟ್​ ಔಟ್​ ​ಗಳನ್ನು ಸ್ಥಗಿತಗೊಳಿಸಲಾಗುವುದು. ಅಲ್ಲದೇ ಯಾವುದೇ ಸಭೆ, ಸಮಾರಂಭ, ಮದುವೆ, ಜಾತ್ರೆ ನಡೆಸದಂತೆ ಆದೇಶಿಸಿರುವುದಾಗಿ ಘೋಷಿಸಿದ್ದಾರೆ.

  ವೈದ್ಯಕೀಯ ನುರಿತರ ಅಭಿಪ್ರಾಯ ಪಡೆದು ಈ ನಿರ್ಣಯ ಕೈಗೊಳ್ಳಲಾಗಿದ್ದು, ಒಂದು ವಾರದ ಬಳಿಕ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರು ಸಾಧ್ಯವಾದರೆ ಪ್ರವಾಸ ರದ್ದು ಮಾಡುವುದು ಒಳ್ಳೆಯದು ಎಂದರು.

  ಒಂದರಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ. ಆದರೆ, ಎಸ್​ಎಸ್​ಎಲ್​ಸಿ, ಪಿಯುಸಿ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ. ಜೊತೆಗೆ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸದಂತೆ ಕೂಡ ಸೂಚನೆ ನೀಡಲಾಗಿದೆ ಎಂದರು.

  ಜತೆಗೆ, ಒಬ್ಬರಿಂದ ಒಬ್ಬರಿಗೆ ಕನಿಷ್ಟ ಆರು ಅಡಿ ದೂರ ನಿಂತು ಸಂಪರ್ಕಿಸುವುದು ಉತ್ತಮ ಎಂದ ಬಿಎಸ್​ವೈ, ಶೇಕ್​ ಹ್ಯಾಂಡ್​ ಕೊಡುವುದು, ಆಲಿಂಗನ ಮಾಡದಂತೆ ಮನವಿ ಮಾಡಿದ್ದಾರೆ. ಸರ್ಕಾರದ ಈ ಆದೇಶದಿಂದ ಸಾರ್ವಜನಿಕರಿಗೆ ತೊಂದರೆಯಾಗಬಹುದು ಆದರೆ, ಅನಿವಾರ್ಯ ಕಾರಣಗಳಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದ್ದು ಸಹಕರಿಸುವಂತೆ ಬಿಎಸ್​ವೈ ಮನವಿ ಮಾಡಿದ್ದಾರೆ.
  First published: