ಆನೇಕಲ್​​ನಲ್ಲಿ ದಿಢೀರ್​​ ಹುಲಿ ಪ್ರತ್ಯಕ್ಷ; ಭಾರೀ ಆತಂಕದಲ್ಲಿ ಸ್ಥಳೀಯರು

ಅಂದಹಾಗೆ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಸಂತತಿ ಕಂಡು ಬಂದಿರುವುದು ಪ್ರಾಣಿ ಪ್ರಿಯರಲ್ಲಿ ಸಂತಸ ಮೂಡಿಸಿದ್ರೆ ಬನ್ನೇರುಘಟ್ಟ ಅರಣ್ಯದಂಚಿನ ಗ್ರಾಮ ವಾಸಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ. ಸದ್ಯ ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ದೌಡಾಯಿಸಿದ್ದು, ಹುಲಿಯ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆನೇಕಲ್(ಮೇ.30): ವಿಚಿತ್ರ ಅಂದರೆ ಇದೆ ಇರಬೇಕು ಅನ್ನಿಸುತ್ತೆ. ಯಾಕೆಂದರೆ ಸದಾ ಓಡಾಟ ನಡುತ್ತಿದ್ದ ಜನ ಲಾಕ್​​ಡೌನ್​​ನಿಂದಾಗಿ ಮನೆ ಸೇರಿಕೊಂಡಿದ್ದಾರೆ. ಜನರಿಗೆ ಕಾಣದೇ ಕಾಡಿನಲ್ಲಿ ಕಾಲ ಕಳೆಯುತ್ತಿದ್ದ ವನ್ಯಜೀವಿಗಳು ಇತ್ತೀಚೆಗೆ ಹೆಚ್ಚಾಗಿ ನಾಡಿನತ್ತ ದಾಂಗುಡಿಯಿಡುತ್ತಿದ್ದು,  ಲಾಕ್ ಡೌನ್ ವನ್ಯಜೀವಿಗಳ ಸ್ವೇಚ್ಛಾಚಾರದ ಬದುಕಿಗೆ ವರದಾನವಾದಂತಿದೆ.

ಇದಕ್ಕೆ ತಾಜ‌ ನಿದರ್ಶನವೆಂಬಂತೆ ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕೃಷ್ಣದೊಡ್ಡಿ ಸಮೀಪದ ಗುಡ್ಡವೊಂದರಲ್ಲಿ ಹುಲಿ ಮತ್ತು ಮೂರು ಮರಿಗಳು ಕಾಣಿಸಿಕೊಂಡು ಸ್ಥಳೀಯರಲ್ಲಿ ಅಚ್ಚರಿ ಮತ್ತು ಆತಂಕ ಮೂಡಿಸಿವೆ. ಬನ್ನೇರುಘಟ್ಟ ಅರಣ್ಯಕ್ಕೆ ಹೊಂದಿಕೊಂಡಂತೆ ಕೃಷ್ಣದೊಡ್ಡಿ ಸೇರಿದಂತೆ ಹಲವು ಗ್ರಾಮಗಳಿದ್ದು, ಆಗಿಂದಾಗ್ಗೆ ಕಾಡಾನೆಗಳು ಗ್ರಾಮಗಳ ಸುತ್ತಮುತ್ತ ಸುಳಿದಾಡುವುದು ಸರ್ವೆ ಸಾಮಾನ್ಯವಾಗಿತ್ತು. ಆದ್ರೆ ಇದೀಗ ವ್ಯಾಘ್ರ ಹುಲಿ ಮತ್ತು ಮರಿಗಳು ಗ್ರಾಮದ ಬಳಿ ಇದೆ ಮೊದಲು ಕಾಣಿಸಿಕೊಂಡಿದ್ದು ಗ್ರಾಮಸ್ಥರ ಆಕಂಕಕ್ಕೆ ಕಾರಣವಾಗಿದೆ.

ಬೆಳಗ್ಗೆ ಎಂದಿನಂತೆ ದನಗಾಹಿಗಳು ಗುಡ್ಡದತ್ತ ಹೋದಾಗ ದೂರಕ್ಕೆ ಯಾವುದೋ ಪ್ರಾಣಿ ತನ್ನ ಮರಿಗಳೊಂದಿಗೆ ಓಡಾಡುವುದು ಆಟವಾಡುವುದನ್ನು ಕಂಡಿದ್ದಾರೆ‌. ಪ್ರಾರಂಭದಲ್ಲಿ ಹುಲಿ ಮರಿಗಳನ್ನು ಕಂಡು ಬೆಕ್ಕುಗಳು ಎಂದುಕೊಂಡಿದ್ದಾರೆ. ಮರಿಗಳನ್ನು ಹಿಂಬಾಲಿಸಿ ಬರುತ್ತಿದ್ದ ದೈತ್ಯ ಗಾತ್ರದ ಹುಲಿಯನ್ನು ಕಂಡು ಹೌಹಾರಿದ್ದಾರೆ. ಈ ವಿಚಾರ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆ ಹುಲಿ ಮತ್ತು ಮರಿಗಳನ್ನು ನೋಡಲು ಗುಡ್ಡದ ಬಳಿ ಜಮಾಯಿಸಿದ್ದಾರೆ. ಹುಲಿ ಮತ್ತು ಮರಿಗಳು ಗುಡ್ಡದ ಕಲ್ಲು ಬಂಡೆಗಳ ಮೇಲೆ ಓಡಾಡುವುದು, ಆಟವಾಡುವುದನ್ನು ಮೊಬೈಲ್ನಲ್ಲಿ ಸ್ಥಳೀಯರು ಸೆರೆಹಿಡಿದಿದ್ದಾರೆ.

ಇನ್ನೂ ಹಲವು ವರ್ಷಗಳ ಹಿಂದೆಯೇ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯ ಹಕ್ಕಿಪಿಕ್ಕಿ ಕಾಲೋನಿ, ರಾಗಿಹಳ್ಳಿ ಬಳಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿತ್ತು. ಜೊತೆಗೆ ಹಲವು ಬಾರಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಹುಲಿ ಸಫಾರಿ ಬಳಿ ಕಾಣಿಸಿಕೊಂಡಿದ್ದ ಹುಲಿ ಸಫಾರಿ ಹುಲಿಗಳ ಮೇಲೆ ಕಾದಾಟಕ್ಕು ಮುಂದಾಗಿತ್ತು. ಇದೀಗ ಮರಿಗಳೊಂದಿಗೆ ಹುಲಿ ಕಾಣಿಸಿಕೊಂಡಿದ್ದು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹುಲಿಯೊಂದು ತನ್ನ ಹದ್ದುಬಸ್ತು(ಗಡಿ)  ಗುರುತಿಸಿಕೊಂಡು ವಾಸ ಮಾಡುತ್ತಿರುವುದು ಖಾತ್ರಿಯಾಗಿದೆ.

ಇದನ್ನೂ ಓದಿ: ಜಗದೀಶ್ ಶೆಟ್ಟರ್ ಸಿಎಂ ಮಾಡಲು ಬಿಜೆಪಿಯ ಒಂದು ಬಣ ಯತ್ನ: ಸತೀಶ್ ಜಾರಕಿಹೊಳಿ ಬಾಂಬ್

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಅಪರೂಪದ ವನ್ಯಜೀವಿಗಳು ಇದ್ದು, ಅವುಗಳ ರಕ್ಷಣೆಗಾಗಿ ಅತಿ ಸೂಕ್ಷ್ಮ ಪರಿಸರ ವಲಯವನ್ನು(Eco sensitive zone) ಕಡಿತಗೊಳಿಸಬಾರದು. ಈ ಹಿಂದೆ ಕೇಂದ್ರ ಪರಿಸರ ಸಚಿವಾಲಯ ಹೊರಡಿಸಿದ್ದ ಕರಡು ಅದಿ ಸೂಚನೆಯಂತೆ ಅರಣ್ಯದಂಚಿನಿಂದ 10 ಕಿ.ಮಿ ವ್ಯಾಪ್ತಿಯನ್ನು ಅತೀ ಸೂಕ್ಷ್ಮ ಪರಿಸರ ವಲಯ ಎಂದು ಘೋಷಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದ್ರೆ ರಾಜ್ಯ ಸರ್ಕಾರ ಮಾತ್ರ ಈ ಹಿಂದೆ ಇದ್ದಂತಹ 1 ಕಿ.ಮಿ ಬಫರ್ ಜೋನ್ ಉಳಿಸಿಕೊಂಡಿತ್ತು.  ಇದೀಗ ಹುಲಿ ಮತ್ತು ಮರಿಗಳು ಕಾಣಿಸಿಕೊಂಡಿದ್ದರಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಮೃದ್ಧ ಕಾಡಾಗಿ ಪರಿವರ್ತನೆಯಾಗಿದೆ ಎಂಬುದು ಸ್ಪಷ್ಟವಾಗಿದ್ದು, ಪರಿಸರ ಪ್ರೇಮಿಗಳಿಂದ ಮತ್ತೆ ಅತಿ ಸೂಕ್ಷ್ಮ ವಲಯ ಕೂಗು ಕೇಳಿ ಬರುವ ಸಾಧ್ಯತೆ ಇದೆ.

ಅಂದಹಾಗೆ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಸಂತತಿ ಕಂಡು ಬಂದಿರುವುದು ಪ್ರಾಣಿ ಪ್ರಿಯರಲ್ಲಿ ಸಂತಸ ಮೂಡಿಸಿದ್ರೆ ಬನ್ನೇರುಘಟ್ಟ ಅರಣ್ಯದಂಚಿನ ಗ್ರಾಮ ವಾಸಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ. ಸದ್ಯ ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ದೌಡಾಯಿಸಿದ್ದು, ಹುಲಿಯ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ.

(ವರದಿ: ಆದೂರು ಚಂದ್ರು)
First published: