Unlock| ಎಲ್ಲಾ ರಾಜ್ಯಗಳಲ್ಲೂ ಆರಂಭವಾದ ಅನ್​ಲಾಕ್ ಪ್ರಕ್ರಿಯೆ; ಎಚ್ಚರಿಕೆಯಿಂದಿರಲು ಕೇಂದ್ರದ ಸೂಚನೆ

ಅನ್‌ಲಾಕ್ ಪ್ರಕ್ರಿಯೆಗಳ ನಡುವೆಯೇ ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ , ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಮಾರ್ಗಸೂಚಿಯನ್ನು ನೀಡಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ನವ ದೆಹಲಿ (ಜೂನ್ 20); ದೇಶದಲ್ಲಿ ಕೊರೋನಾ ಎರಡನೇ ಅಲೆ ತಗ್ಗುತ್ತಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅತಿಹೆಚ್ಚು ಸೋಂಕಿಗೆ ಒಳಗಾಗಿದ್ದ ಕರ್ನಾಟಕ, ಮಹರಾಷ್ಟ್ರ, ತಮಿಳುನಾಡು, ದೆಹಲಿ, ಪಂಜಾಬ್ ಸೇರಿದಂತೆ ದೇಶದ ಅನೇಕ ರಾಜ್ಯಗಳು ಈಗಾಗಲೇ ಎರಡನೇ ಹಂತದ ಅನ್‌ಲಾಕ್‌ ಪ್ರಕ್ರಿಯೆಯನ್ನು ಆರಂಭಿಸಿವೆ. ಕೊರೋನಅ ಲಾಕ್‌ಡೌನ್‌ನಿಂದ 2 ತಿಂಗಳುಗಳ ಕಾಲ ಬಂದಾಗಿದ್ದ ಅಂಗಡಿ ಮುಂಗಟ್ಟುಗಳು, ವ್ಯಾಪಾರೋದ್ಯಮ, ವಾಣಿಜ್ಯ ಚಟುವಟಿಕೆಗಳು ಮತ್ತೆ ಗರಿಗೆದರಲಾರಂಭಿಸಿವೆ. ಈ ನಡುವೆ ಜನ ಸಂದಣಿ ಅಧಿಕವಾಗುವ ಕಾರಣ ಮತ್ತೆ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಸರ್ಕಾರಗಳು ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಸರ್ಕಾರ ಇಂದು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.

  ಅನ್​ಲಾಕ್ ಪ್ರಕ್ರಿಯೆ ಈಗಾಗಲೇ ವ್ಯಾಪಕವಾಗಿ ಆರಂಭವಾಗಿದ್ದು, ಬೆಂಗಳೂರು, ಮುಂಬೈ, ದೆಹಲಿಯಂತರ ಮಹಾನಗರಗಳಿಂದ ತಮ್ಮ ತಮ್ಮ ಊರಿಗೆ ತೆರಳಿದ್ದ ಜನರು ಮತ್ತೆ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಸಾವಿರಾರು ಸಂಖ್ಯೆಯ ಜನರು ಏಕಾಏಕಿ ನಗರಗಳನ್ನು ಪ್ರವೇಶಿಸುತ್ತಿದ್ದಾರೆ. ಮಾರುಕಟ್ಟೆಗಳು, ಬಸ್‌ ನಿಲ್ಧಾಣ, ರೈಲ್ವೆ ನಿಲ್ದಾಣಗಳು ಜನ ಜಂಗುಳಿಯಿಂದ ತುಂಬಿ ಹೋಗಿದ್ದು, ಅನ್‌ಲಾಕ್‌ ಪ್ರಕ್ರಿಯೆಯೇ ಕೊರೋನಾ ಮೂರನೇ ಅಲೆಗೆ ಆಹ್ವಾನ ನೀಡುತ್ತಿರುವಂತೆ ಭಾಸವಾಗುತ್ತಿದೆ ಎಂದಿರುವ ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೆಲವೊಂದಿಷ್ಟು ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಯಾವ ಹಂತದಲ್ಲಿ ಯಾವ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಬಹುದು ಎಂದು ತಜ್ಞರ ವರದಿಯನ್ನು ಪಾಲಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.

  ಅನ್‌ಲಾಕ್ ಪ್ರಕ್ರಿಯೆಯಿಂದ ನಗರಗಳಲ್ಲಿ ಉಂಟಾಗುತ್ತಿರುವ ಜನ ದಟ್ಟಣೆಯನ್ನು ತಡೆಯಲು ಸೂಕ್ತ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ಕೆಲಸದ ಸ್ಥಳಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್‌, ಸ್ಯಾನಿಟೈಜರ್ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳುವುದು ರಾಜ್ಯಗಳ ಜವಾಬ್ದಾರಿ ಎಂದಿರುವ ಕೇಂದ್ರ ಸರ್ಕಾರ ಅವಸರದ ಅನ್‌ಲಾಕ್ ಬೇಡ ಎಂಬ ಸಲಹೆಯನ್ನು ನೀಡಿದೆ.

  ಇದನ್ನೂ ಓದಿ: ಕೋವಿಡ್​ ಸಂತ್ರಸ್ತರಿಗೆ 4 ಲಕ್ಷ ಪರಿಹಾರ ನೀಡಲು ಸಾಧ್ಯವಿಲ್ಲ; ಸುಪ್ರೀಂ ಕೋರ್ಟ್​ಗೆ ಮಾಹಿತಿ ನೀಡಿದ ಕೇಂದ್ರ

  ರಾಜ್ಯಗಳು 5 ಕೋವಿಡ್ ಅಪ್ರಾಪ್ರಿಯೇಟ್ ಬಿಹೇವಿಯರ್‌ಗಳಾದ (CAB) ಟೆಸ್ಟಿಂಗ್, ಟ್ರ್ಯಾಕಿಂಗ್, ಟ್ರೀಟ್‌ಮೆಂಟ್, ವ್ಯಾಕ್ಸಿನೇಶನ್, ಪ್ರಿವೆನ್ಶನ್‌ಗಳನ್ನು ತಪ್ಪದೇ ಪಾಲಿಸಬೇಕು. ವ್ಯಾಕ್ಸಿನೇಶನ್ ಪ್ರಕ್ರಿಯೆಗೆ ಚುರುಕು ನೀಡಬೇಕು. ಎಲ್ಲ ರೀತಿಯ ಅಗತ್ಯ ಸುರಕ್ಷಾಕ್ರಮಗಳನ್ನು ಕೈಗೊಂಡು ಹಂತ ಹಂತವಾಗಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಳ್ಳಿ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.

  ಅನ್‌ಲಾಕ್ ಪ್ರಕ್ರಿಯೆಗಳ ನಡುವೆಯೇ ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ , ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಮಾರ್ಗಸೂಚಿಯನ್ನು ನೀಡಿದೆ.

  ಇದನ್ನೂ ಓದಿ: Exclusive: ಜಮ್ಮು-ಕಾಶ್ಮೀರಕ್ಕೆ ಮತ್ತೆ ಸಿಗಲಿದೆಯೇ ರಾಜ್ಯ ಸ್ಥಾನಮಾನ; ಜೂನ್.24ರ ಸರ್ವಪಕ್ಷ ಸಭೆಯಲ್ಲಿ ಚರ್ಚೆ ಸಾಧ್ಯತೆ!

  ದೆಹಲಿಯ ಏಮ್ಸ್‌ ಆಸ್ಪತ್ರೆಯ ನಿರ್ದೇಶಕ ರಂದೀಪ್ ಗುಲೇರಿಯಾ, ಭಾರತದಲ್ಲಿ ಇನ್ನು 6 ರಿಂದ 8 ವಾರಗಳಲ್ಲಿ ಕೊರೋನಾ ಮೂರನೇ ಅಲೆಯು ದೇಶದಲ್ಲಿ ಅಪ್ಪಳಿಸಲಿದೆ. ಒಂದು ವೇಳೆ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಮೂರನೇ ಅಲೆಯು ಎರಡನೇ ಅಲೆಗಿಂತ ತೀವ್ರವಾಗಿರಲಿದೆ. ಮುಂದಿನ ಮೂರು ತಿಂಗಳು ಕೋವಿಡ್ ಸುರಕ್ಷತಾ ಕ್ರಮಗಳ ಪಾಲನೆ ಮತ್ತು ಜನದಟ್ಟಣೆ ನಿಯಂತ್ರಣ ಅತ್ಯಂತ ಅಗತ್ಯವಾಗಿದೆ ಎಂದು ರಾಜ್ಯಗಳಿಗೆ ಎಚ್ಚರಿಸಿದ್ದಾರೆ.

  ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸಂಬಂಧ ಪತ್ರ ಬರೆದಿರುವ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ವ್ಯಾಕ್ಸಿನೇಶನ್ ಪ್ರಕ್ರಿಯೆಗೆ ತೀವ್ರ ವೇಗವನ್ನು ನೀಡುವಂತೆ ಸೂಚಿಸಿದ್ದಾರೆ. ಕೊರೊನಾ ವಿರುದ್ಧ ದೇಶವು ಒಟ್ಟಾಗಿ ಹೋರಾಡುವ ಸಂದರ್ಭದಲ್ಲಿ ಇದ್ದೇವೆ. ವ್ಯಾಕ್ಸೀನ್ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ರಾಜ್ಯ ರಾಜ್ಯಗಳು ಸಮನ್ವಯವನ್ನು ಸಾಧಿಸಿ ಜನಸಾಮಾನ್ಯರ ಆರೋಗ್ಯದ ಕಾಳಜಿ ಮಾಡಬೇಕು ಕೇಂದ್ರ ಸೂಚಿಸಿದೆ.
  Published by:MAshok Kumar
  First published: