ಕೋವಿಡ್-19 ಚಿಕಿತ್ಸಾ ಸಲಕರಣೆ ಖರೀದಿಯಲ್ಲಿ ರಾಜ್ಯ ಸರ್ಕಾರ 2,200 ಕೋಟಿ ಲೂಟಿ ಹೊಡೆದಿದೆ: ಸಿದ್ದರಾಮಯ್ಯ ಗಂಭೀರ ಆರೋಪ

ಈಗ ಲಾಕ್‌ಡೌನ್ ಮಾಡಿದರೆ ಪ್ರಯೋಜನ ಇಲ್ಲ. ಲಾಕ್‌ಡೌನ್ ಮಾಡುವುದಿದ್ದರೆ ಸ್ವಲ್ಪ ಮೊದಲೇ ಮಾಡಬೇಕಾಗಿತ್ತು. ಈಗ ಪರಿಸ್ಥಿತಿ ಕೈ ಮೀರಿ ಹೋಗಿದೆ. ಸಮುದಾಯ ಮಟ್ಟಕ್ಕೆ ಕೊರೋನಾ ಹೋಗಿದೆ. ಟ್ರಂಪ್‌ ಕರೆಸಿ ಮೆರವಣಿಗೆ ಮಾಡದೇ ಇದ್ದಿದ್ದರೆ ಈ ದುಸ್ಥಿತಿ ಬರುತ್ತಿರಲಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಅವರು ಹರಿಹಾಯ್ದರು.

ಸಿದ್ದರಾಮಯ್ಯ.

ಸಿದ್ದರಾಮಯ್ಯ.

  • Share this:
ಬೆಂಗಳೂರು; ಕೋವಿಡ್-19 ಚಿಕಿತ್ಸಾ ಪರಿಕರ ಖರೀದಿಯಲ್ಲಿ ರಾಜ್ಯ ಸರ್ಕಾರ 2200 ಕೋಟಿ ರೂ.‌ ಲೂಟಿ ಹೊಡೆದಿದೆ ಎಂದು ಪ್ರತಿಪಕ್ಷ ‌ನಾಯಕ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಕೋವಿಡ್- 19 ವಿವಿಧ ಪರಿಕರ ಖರೀದಿಯ ಮಾರುಕಟ್ಟೆ ಬೆಲೆ 1163.65 ಕೋಟಿ ರೂ., ಆದರೆ ಸರ್ಕಾರ 3,392 ಕೋಟಿ ರೂ. ಖರ್ಚು ಮಾಡಿ ಪರಿಕರಗಳನ್ನು ಖರೀದಿ‌ ಮಾಡಿದೆ. ಆ ಮೂಲಕ ಸರ್ಕಾರ 2,200 ಕೋಟಿ ರೂ. ‌ಲಪಟಾಯಿಸಿದೆ ಎಂದು ಗಂಭೀರ ಆರೋಪ ಮಾಡಿದರು.

1000 ವೆಂಟಿಲೇಟರ್ ಖರೀದಿ ಮಾಡಿದ್ದು, ಮಾರುಕಟ್ಟೆ ಬೆಲೆ ಒಂದಕ್ಕೆ 4 ಲಕ್ಷ ರೂ. ಇದೆ. ಅದರ ಪ್ರಕಾರ ಒಟ್ಟು 40 ಕೋಟಿ ಖರ್ಚಾಗಬೇಕು. ಆದರೆ, ಸರ್ಕಾರ 120 ಕೋಟಿ ರೂ. ಖರ್ಚು ಮಾಡಿದೆ. 4 ಲಕ್ಷ 89 ಸಾವಿರ ಪಿಪಿಇ ಕಿಟ್ ಖರೀದಿ ಮಾಡಿದೆ. ಅದರ ಮಾರುಕಟ್ಟೆ ಬೆಲೆ ಒಂದಕ್ಕೆ 995 ರೂ.‌ಆಗುತ್ತದೆ. ಅದರಂತೆ 48.65 ಕೋಟಿ ರೂ. ಖರ್ಚಾಗಬೇಕು. ಆದರೆ 150 ಕೋಟಿ ರೂ. ಸರ್ಕಾರ ಲೆಕ್ಕ ನೀಡಿ ಖರೀದಿ ಮಾಡಿದೆ ಒಂದು ಎಂದು ಆರೋಪಿಸಿದರು.

10 ಲಕ್ಷ ಮಾಸ್ಕ್ ಖರೀದಿ ಮಾಡಲಾಗಿದ್ದು, ಅದರ ಮಾರುಕಟ್ಟೆ ಬೆಲೆ ಒಂದು ಮಾಸ್ಕ್ ಗೆ 200 ರೂ. ಅದರಂತೆ ಒಟ್ಟು 20 ಕೋಟಿ ಖರ್ಚಾಗಬೇಕು. ಆದರೆ ಸರ್ಕಾರ ತೋರಿಸಿರುವ ಲೆಕ್ಕ 40 ಕೋಟಿ ರೂ.‌ ಇತ್ತ 10 ಲಕ್ಷ  ಸರ್ಜಿಕಲ್ ಗ್ಲೋಸ್ ಖರೀದಿ ಮಾಡಿದೆ. ಅದರ ಮಾರುಕಟ್ಟೆ ಬೆಲೆ ಒಂದಕ್ಕೆ 200 ರೂ. ಅದರಂತೆ ಒಟ್ಟು 20 ಕೋಟಿ ರೂ. ತಗುಲಬೇಕಿತ್ತು. ಆದರೆ ಸರ್ಕಾರ ತೋರಿಸಿದ ಲೆಕ್ಕ 40 ಕೋಟಿ ರೂ. 20 ಲಕ್ಷ ಕೋವಿಡ್ ಟೆಸ್ಟ್ ಗ್ಲೋಸ್ ಖರೀದಿ ಮಾಡಲಾಗಿದ್ದು, ಅದರ ಮಾರುಕಟ್ಟೆ ಬೆಲೆ ಒಟ್ಟು 40 ಕೋಟಿ ರೂ., ಆದರೆ ಸರ್ಕಾರ ತೋರಿಸಿರುವ ಲೆಕ್ಕ 65 ಕೋಟಿ ರೂಪಾಯಿ. ಇನ್ನು 5000 ಆಮ್ಲಜನಕ ಸಿಲೆಂಡರ್ ಖರೀದಿ ಮಾಡಿದ್ದು, ಅದರ ಮಾರುಕಟ್ಟೆ ಬೆಲೆ ಒಂದಕ್ಕೆ 14 ಸಾವಿರ ರೂಪಾಯಿಯಂತೆ ಒಟ್ಟು 43  ಕೋಟಿ ರೂ. ಖರ್ಚಾಗುತ್ತಿತ್ತು. ಆದರೆ, ಸರ್ಕಾರದ ತೋರಿಸಿರುವ ಲೆಕ್ಕ 80 ಕೋಟಿ ರೂ. ಎಂದು ಆರೋಪಿಸಿದರು.

ಇನ್ನು 6.2 ಲಕ್ಷ ಜನರಿಗೆ ಕೋವಿಡ್ 19 ಟೆಸ್ಟ್ ಮಾಡಲಾಗಿದೆ. ಒಬ್ಬರಿಗೆ ತಲಾ ನಾಲ್ಕು ಸಾವಿರ ‌ರೂ. ಖರ್ಚಾಗಿದೆ. ಅದರಂತೆ ಒಟ್ಟು 248 ಕೋಟಿ ಖರ್ಚಾಗಬೇಕು. ಆದರೆ, ಸರ್ಕಾರ ತೋರಿಸಿರೋದು ಬರೋಬ್ಬರಿ 530 ಕೋಟಿ ರೂಪಾಯಿ. ಇನ್ನು ಸೋಂಕಿತರ ದಿನದ ಖರ್ಚು 15 ಸಾವಿರ ಜನರಿಗೆ 14 ದಿನದ ಕ್ವಾರಂಟೇನ್ ಗೆ 100 ಕೋಟಿ ಆಗಬೇಕು. ಆದರೆ ಸರ್ಕಾರ 525 ಕೋಟಿ ರೂ. ಖರ್ಚು ತೋರಿಸಿದೆ. ಇನ್ನು ಹ್ಯಾಂಡ್ ಸ್ಯಾನಿಟೈಸರ್ ಗೆ 80 ಕೋಟಿ ರೂ, 10 ಕೋಟಿ ಮೊತ್ತದ ಸೋಪು ಖರೀದಿ ಮಾಡಿದೆ. ಇತರ ಖರ್ಚು 1732 ಕೋಟಿ ರೂ. ಎಂದು ಸರ್ಕಾರ ತೋರಿಸಿದೆ. ಒಟ್ಟು ವಿವಿಧ ಪರಿಕರಗಳ ಮಾರುಕಟ್ಟೆ ಬೆಲೆ 1163.65 ಕೋಟಿ ರೂ. ಆಗಬೇಕಿತ್ತು. ಆದರೆ, ಸರ್ಕಾರ ಒಟ್ಟು 3392. ಕೋಟಿ ರೂ. ಲೆಕ್ಕ ತೋರಿಸಿದೆ. ಆ ಮೂಲಕ ಸರ್ಕಾರ 2229 ಕೋಟಿ ರೂ. ಮೊತ್ತದ ಭ್ರಷ್ಟಾಚಾರ ನಡೆಸಿದೆ.‌ ಸರ್ಕಾರ ಇದರಲ್ಲಿ ಭಾಗಿಯಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕೊರೋನಾ ನಿಯಂತ್ರಣಕ್ಕೆ ನಮಗೆ ಸಿದ್ಧತೆ ಮಾಡಲು ಬಹಳ ಸಮಯ ಇತ್ತು. ಆಸ್ಪತ್ರೆ, ಸ್ಯಾನಿಟೈಸರ್, ಹಾಸಿಗೆ, ವೆಂಟಿಲೇಟರ್ ಸಿದ್ಧಗೊಳಿಸಲು ಸಮಯ ಇತ್ತು. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ತಪ್ಪು ನಿರ್ಧಾರದಿಂದ ಇಂದು ಭಾರತ ಕೊರೋನಾ ಪೀಡಿತ ರಾಷ್ಟ್ರಗಳ ಪಟ್ಟಿನಲ್ಲಿ ನಾಲ್ಕನೇ ಸ್ಥಾನದಲ್ಲಿ ಇದೆ. ಕೇಂದ್ರ ಹಾಗೂ ರಾಜ್ಯ ಸರಿಯಾದ ಸಿದ್ಧತೆ ಮಾಡಿದ್ದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗುತ್ತಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಶವಸಂಸ್ಕಾರ ವಿಚಾರದಲ್ಲಿ ಸರ್ಕಾರ ಅಮಾನುಶವಾಗಿ, ಮನಕುಲಕ್ಕೆ ಅಗೌರವ ಆಗುವ ರೀತಿಯಲ್ಲಿ ವರ್ತಿಸುತ್ತಿದೆ. ಸರ್ಕಾರದ ಬೇಜವಾಬ್ದಾರಿಯಿಂದ ಇದು ಆಗಿದೆ. ಆರೋಗ್ಯ ಸಚಿವರು ಬಳ್ಳಾರಿ ಜಿಲ್ಲೆಯವರೇ ಆಗಿದ್ದಾರೆ. ತಿಪ್ಪೆಗೆ ಎಸೆದಂತೆ ಶವವನ್ನು ಎಸೆದರೆ ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುದು‌ ಗೊತ್ತಾಗುತ್ತಿದೆ. ಸಚಿವ ಶ್ರೀರಾಮುಲು ಈ ಬಗ್ಗೆ ಹೊಣೆ ಹೊರ್ತಾರಾ? ಸಿಬ್ಬಂದಿ ಅಮಾನತು ಮಾಡಿದರೆ ಅದಕ್ಕೆ ಪರಿಹಾರನಾ? ಈ ಸರ್ಕಾರಕ್ಕೆ ಯಾವುದೇ ಬದ್ಧತೆ ಇಲ್ಲ. ಇದು ಬೇಜವಾಬ್ದಾರಿತನದ ಸರ್ಕಾರ ಆಗಿದೆ ಎಂದು ಕಿಡಿ‌ಕಾರಿದರು.

ಸಿಎಂ ಯಡಿಯೂರಪ್ಪ ಕೈಯ್ಯಲ್ಲಿ ಏನೂ ಆಗಲ್ಲ. ಅವರ ಮಾತನ್ನು ಸಚಿವರು ಕೇಳುತ್ತಾರೋ ಇಲ್ಲವೋ ಗೊತ್ತಿಲ್ಲ. ಸಚಿವರೇ ಕಿತ್ತಾಡುತ್ತಿದ್ದಾರೆ. ಬೆಂಗಳೂರು ಕೊರೋನಾ ಉಸ್ತುವಾರಿ ಸಂಬಂಧ ಸಚಿವರೇ ಜಗಳವಾಡ್ತಾ ಇದ್ದಾರೆ. ಅವರಲ್ಲೇ ಸಮನ್ವಯತೇ ಇಲ್ಲ.  ಟೆಸ್ಟ್ ಮಾಡುವುದು ಬೇರೆ ರಾಜ್ಯ ಗಳಲ್ಲಿ, ಬೇರೆ ದೇಶಗಳಲ್ಲಿ ಹೆಚ್ಚು ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ದಿನಕ್ಕೆ ಸುಮಾರು  9741 ಮಾತ್ರ ಪರೀಕ್ಷೆ ಮಾಡುತ್ತಿದ್ದಾರೆ. ಸರ್ಕಾರ ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿದೆ. ಒಂದು ತಿಂಗಳಲ್ಲಿ ಬೆಂಗಳೂರಲ್ಲೇ 40,000 ಸೋಂಕಿತರ ಸಂಖ್ಯೆ ಏರಿಕೆ ಆಗುತ್ತದೆ ಎಂದು ವೈದ್ಯರೇ ಅಂದಾಜಿಸಿದ್ದಾರೆ. ಇದೆಲ್ಲಾ ಸರ್ಕಾರಕ್ಕೆ ಮುಂಚೆನೇ ಗೊತ್ತಿದೆ. ಈ ಮಾಹಿತಿ ಇದ್ದರೂ ನೀವು ಸಿದ್ಧವಾಗಿಲ್ಲಾ? ರಾಜ್ಯ ಸರ್ಕಾರ ಇದೆಯಾ? ಎಂದು ಕಿಡಿ ಕಾರಿದರು.

ಕೊರೋನಾ ಸಂಬಂಧ ಪ್ರತಿಪಕ್ಷ ನಾಯಕನಾದ ನನಗೆ ಸರ್ಕಾರ ಯಾವುದೇ ಮಾಹಿತಿ ನೀಡುತ್ತಿಲ್ಲ. ಆ ಮೂಲಕ ನನ್ನ ಹಕ್ಕುಚ್ಯುತಿ ಆಗಿದೆ. ಪಿಎಂ, ಸಿಎಂ ಕೇರ್ ಫಂಡ್​ಗೆ ಎಷ್ಟು ಹಣ ಬಂದಿದೆ ಎಂದು ಕೇಳಿದ್ದೆ. ಅದರ ಬಗ್ಗೆ ‌ಮಾಹಿತಿ ಕೊಡುತ್ತಿಲ್ಲ. ಸಿಎಂ ಫಂಡ್‌ನಿಂದ 291 ಕೋಟಿ ರೂ. ಸಂಗ್ರಹ ಆಗಿದೆ. ಆ ಪೈಕಿ ನಯಾ ಪೈಸೆ  ಇಲ್ಲಿವರೆಗೆ ಖರ್ಚಾಗಿಲ್ಲ. ಈ ಬಗ್ಗೆ ಸಿಎಂ ಬಹಿರಂಗಪಡಿಸಬೇಕು. ಇತ್ತ ಪಿಎಂ ಕೇರ್ ಫಂಡ್ ಗೆ  60,000 ಕೋಟಿ ಹಣ ಬಂದಿದೆ. ಇದರಲ್ಲಿ ಕರ್ನಾಟಕ ಸರ್ಕಾರಕ್ಕೆ ಎಷ್ಟು ಬಂದಿದೆ. ಅದನ್ನು ಗೌಪ್ಯವಾಗಿ ಏಕೆ ಇಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು. ಹಾಗೆಯೇ ಹಾಸಿಗೆ, ವೆಂಟಿಲೇಟರ್, ಎಷ್ಟು ರೋಗಿಗಳು ದಾಖಲಾಗಿದ್ದಾರೆ, ಎಷ್ಟು ಮಂದಿ ಐಸಿಯುನಲ್ಲಿ ಇದ್ದಾರೆ, ಆಂಬುಲೆನ್ಸ್ ಎಷ್ಟಿದೆ? ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಆಸ್ಪತ್ರೆಗಳ ನಿರ್ಲಕ್ಷ್ಯ; ಸರಿಯಾದ ಸಮಯಕ್ಕೆ ವೈದ್ಯಕೀಯ ನೆರವು ಸಿಗದೆ ಮೂವರು ಅಮಾಯಕರ ಸಾವು

ಬಡವರಿಗೆ ಪರಿಹಾರ ಘೋಷಣೆ ಮಾಡಿ ಸುಮಾರು ಎರಡು ತಿಂಗಳು ಆಗಿದೆ. ಇಲ್ಲಿಯವರೆಗೆ ಫಲಾನುಭವಿಗಳ ಕೈಗೆ ಪರಿಹಾರ ಮೊತ್ತ ಸೇರಿಲ್ಲ. ಸರ್ಕಾರ ಸುಮಾರು 7.5 ಲಕ್ಷ ಆಟೋ, ಟ್ಯಾಕ್ಸಿ ಚಾಲಕರಿಗೆ ಪರಿಹಾರ ಘೋಷಿಸಿತ್ತು. ಇಲ್ಲಿಯವರೆಗೆ ಎಷ್ಟು ಜನಕ್ಕೆ ಇದು ತಲುಪಿದೆ. 1.2 ಲಕ್ಷ ಜನಕ್ಕೆ ಮಾತ್ರ ತಲುಪಿದೆ ಎಂಬುದು ನಮ್ಮ ಮಾಹಿತಿ. ನಾವು ಮೂರು ನಾಲ್ಕು ಬಾರಿ ಭೇಟಿ ಮಾಡಿ ಪ್ರಕರಣ ಹೆಚ್ಚಾಗುತ್ತಿದೆ ಎಂದು ಹೇಳಿದ್ದೇವೆ. ಆದರೆ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಈಗ ಲಾಕ್‌ಡೌನ್ ಮಾಡಿದರೆ ಪ್ರಯೋಜನ ಇಲ್ಲ. ಲಾಕ್‌ಡೌನ್ ಮಾಡುವುದಿದ್ದರೆ ಸ್ವಲ್ಪ ಮೊದಲೇ ಮಾಡಬೇಕಾಗಿತ್ತು. ಈಗ ಪರಿಸ್ಥಿತಿ ಕೈ ಮೀರಿ ಹೋಗಿದೆ. ಸಮುದಾಯ ಮಟ್ಟಕ್ಕೆ ಕೊರೋನಾ ಹೋಗಿದೆ. ಟ್ರಂಪ್‌ ಕರೆಸಿ ಮೆರವಣಿಗೆ ಮಾಡದೇ ಇದ್ದಿದ್ದರೆ ಈ ದುಸ್ಥಿತಿ ಬರುತ್ತಿರಲಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಅವರು ಹರಿಹಾಯ್ದರು.
First published: