HOME » NEWS » Coronavirus-latest-news » THE HIGH COURT INSTRUCTED THE CENTER TO GIVE 2 TONNES OF OXYGEN TO KARNATAKA BUT CENTER APPEALED TO THE SUPREME COURT MAK

ರಾಜ್ಯಕ್ಕೆ 1200 ಮೆ.ಟನ್ ಆಕ್ಸಿಜನ್ ನೀಡಿ ಎಂದ ಹೈಕೋರ್ಟ್​ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಕೇಂದ್ರ; ಸಿದ್ದರಾಮಯ್ಯ ಖಂಡನೆ

ಕರ್ನಾಟಕ ಹೈಕೋರ್ಟ್,​ ಕೂಡಲೇ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಗತ್ಯವಾದ 1200 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ನೀಡಬೇಕು ಎಂದು ಸೂಚನೆ ನೀಡಿತ್ತು. ಆದರೆ ಹೈಕೋರ್ಟ್​ ಸೂಚನೆ ವಿರುದ್ಧ ಕೇಂದ್ರ ಸರ್ಕಾರ ಇದೀಗ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ.

news18-kannada
Updated:May 6, 2021, 10:03 PM IST
ರಾಜ್ಯಕ್ಕೆ 1200 ಮೆ.ಟನ್ ಆಕ್ಸಿಜನ್ ನೀಡಿ ಎಂದ ಹೈಕೋರ್ಟ್​ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಕೇಂದ್ರ; ಸಿದ್ದರಾಮಯ್ಯ ಖಂಡನೆ
ಸಿದ್ದರಾಮಯ್ಯ.
  • Share this:
ಬೆಂಗಳೂರು (ಮೇ.06); ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಬೆಂಗಳೂರಿನಲ್ಲಂತೂ ಪರಿಸ್ಥಿತಿ ಸದ್ಯಕ್ಕೆ ನಿಯಂತ್ರಣದಲ್ಲಿ ಸಿಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಈ ನಡುವೆ ಸಾವಿನ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ. ಆಕ್ಸಿಜನ್ ಕೊರತೆ ಮತ್ತು ಐಸಿಯು ಬೆಡ್ ಇಲ್ಲದಿರುವುದೇ ಈ ಎಲ್ಲಾ ಸಾವಿಗೆ ಪ್ರಮುಖ ಕಾರಣವಾಗಿದೆ. ಈ ನಡುವೆ ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 24 ಜನ ಮೃತಪಟ್ಟ ಪ್ರಕರಣ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಪ್ರಕರಣದ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರಿರುವ ಕರ್ನಾಟಕ ಹೈಕೋರ್ಟ್,​ ಕೂಡಲೇ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಗತ್ಯವಾದ 1200 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ನೀಡಬೇಕು ಎಂದು ಸೂಚನೆ ನೀಡಿತ್ತು. ಆದರೆ ಹೈಕೋರ್ಟ್​ ಸೂಚನೆ ವಿರುದ್ಧ ಕೇಂದ್ರ ಸರ್ಕಾರ ಇದೀಗ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಈ ನಡೆಯನ್ನು ವಿಪಕ್ಷ ನಾಯಕ  ಸಿದ್ದರಾಮಯ್ಯ ಸರಣಿ ಟ್ವೀಟ್​ ಮೂಲಕ ಖಂಡಿಸಿದ್ದಾರೆ. ಹೈಕೋರ್ಟ್​ ತೀರ್ಪನ್ನು ವಿರೋಧಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ, "ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕೇಳಿ ನನಗೆ ಆಘಾತವಾಯಿತು. ಕರ್ನಾಟಕಕ್ಕೆ 1200 ಮೆಟ್ರಿಕ್ ಟನ್ ದ್ರವ ಆಮ್ಲಜನಕವನ್ನು ಹಂಚಿಕೆ ಮಾಡುವಂತೆ ಕರ್ನಾಟಕ ಹೈಕೋರ್ಟ್‌ನ ನಿರ್ದೇಶನದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನ್ನು ಸಂಪರ್ಕಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕರ್ನಾಟಕದ ಬಿಜೆಪಿ ಈ ನಿರ್ಧಾರದ ವಿರುದ್ಧ ಎಂದಾದರೂ ನೀವು ದ್ವನಿ ಎತ್ತುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ 25 ಜನ ಬಿಜೆಪಿ ಸಂಸದರ ವಿರುದ್ಧವೂ ಕಿಡಿಕಾರಿರುವ ಸಿದ್ದರಾಮಯ್ಯ, "ಕರ್ನಾಟಕಕ್ಕೆ 1600-1700 ಮೆ.ಟನ್ ಗಿಂತ ಹೆಚ್ಚಿನ ಆಮ್ಲಜನಕ ಬೇಕಾಗುತ್ತದೆ ಆದರೆ ಕೇಂದ್ರ ಸರ್ಕಾರವು ಕೇವಲ 675 ಮೆ.ಟನ್ ಆಮ್ಲಜನಕವನ್ನು ಮಾತ್ರ ಹಂಚಿಕೆ ಮಾಡಿದೆ. ಇದು ಬೇಡಿಕೆಯ ಶೇ.60 ಕ್ಕಿಂತ ಕಡಿಮೆ ಇದೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಅಗತ್ಯಕ್ಕೆ ಕುರುಡನಾ?.ಕರ್ನಾಟಕದ ಜನ 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳಿಸಿದ್ದಾರೆ. ಅವರು ಎಲ್ಲಿ ಅಡಗಿದ್ದಾರೆ? ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧವಾಗಿ ನಿಲ್ಲಲು ಅವರಿಗೆ ಬೆನ್ನುಮೂಳೆ ಇಲ್ಲವೇ?‘ಅವರಿಗೆ ನಾಚಿಕೆಯಾಗಬೇಕು. ಕರ್ನಾಟಕವನ್ನು ಪ್ರತಿನಿಧಿಸಲು ಈ ಸಂಸದರು ಅನರ್ಹರು ಮತ್ತು ಮಾನವಕುಲಕ್ಕೆ ಕಳಂಕ" ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ನಡುವೆ ರಾಜ್ಯದಲ್ಲಿ ರಾಜ್ಯದಲ್ಲಿ ಲಾಕ್​ಡೌನ್ ಹೇರುವ ಕುರಿತು ಚರ್ಚೆಗಳು ಆರಂಭವಾಗಿವೆ. ಕೊರೋನಾ ಕೇಕೆ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಲೇ ಇದೆ. ಈಗಾಗಲೇ ಜನತಾ ಕರ್ಫ್ಯೂ ಚಾಲ್ತಿಯಲ್ಲಿದೆ. ಆದರೂ ಕೊರೋನಾ ಸೋಂಕಿತರ ಸಂಖ್ಯೆ ಮಾತ್ರ ಇಳಿಮುಖವಾಗುವಂತೆ ಕಾಣುತ್ತಿಲ್ಲ. ಹೀಗಾಗಿ ರಾಜ್ಯಾದ್ಯಂತ ಲಾಕ್​ಡೌನ್ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಮೊನ್ನೆ ನಡೆದ ಕ್ಯಾಬಿನೆಟ್​ ಸಭೆಯಲ್ಲೂ ಸಹ ಈ ಬಗ್ಗೆ ಚರ್ಚೆ ಮಾಡಲಾಗಿತ್ತಾದರೂ ಸಿಎಂ ಯಡಿಯೂರಪ್ಪ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ.

ಆದರೆ, ಇದೀಗ ರಾಜ್ಯದಲ್ಲಿ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಮಿತಿ ಮೀರಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಸಂಜೆ 6 ಗಂಟೆಗೆ ಮಹತ್ವದ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕೋವಿಡ್ ಉಸ್ತುವಾರಿ ಸಚಿವರು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದು, ಚರ್ಚೆಯ ನಂತರ ಲಾಕ್​ಡೌನ್ ಅಥವಾ ಜನತಾ ಕರ್ಫ್ಯೂವನ್ನು ಮುಂದುವರೆಸುವುದಾ? ಎಂದು ಸಿಎಂ ತಿರ್ಮಾನಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: CoronaVirus: ಲಾಕ್​ಡೌನ್ ಅಥವಾ ಜನತಾ ಕರ್ಫ್ಯೂ?; ನಾಳೆ ಸಂಜೆ ನಿರ್ಧರಿಸಲಿರುವ ಸರ್ಕಾರ!

ತಜ್ಞರು ಈಗಾಗಲೇ ಕೊರೋನಾ ನಿಯಂತ್ರಣಕ್ಕೆ ಲಾಕ್​ಡೌನ್​ ಒಂದೇ ಪರಿಹಾರ ಎಂದು ವರದಿ ನೀಡಿದ್ದಾರೆ. ಲಾಕ್ ಡೌನ್ ನಿಂದ ಮಾತ್ರ ಕೋವಿಡ್ ಚೈನ್ ಲಿಂಕ್ ಕಟ್ ಮಾಡಬಹುದು. ಮುಂಬೈನಲ್ಲಿ ಲಾಕ್ ಡೌನ್ ನಿಂದ ಕೋವಿಡ್ ಕಂಟ್ರೋಲ್ ಗೆ ಬಂದಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಸಾವಿನ ಸಂಖ್ಯೆ ಮಿತಿ ಮೀರುತ್ತಿದೆ. ಹತ್ತು ಜಿಲ್ಲೆಗಳಲ್ಲಿ ಕೊರೋನಾ ಕಂಟ್ರೋಲ್ ಗೆ ಬರುತ್ತಿಲ್ಲ. ಈ ನಡುವೆ ಜನತಾ ಕರ್ಫ್ಯೂ ವರ್ಕೌಟ್ ಆಗಿಲ್ಲ.
Youtube Video

ಆಕ್ಸಿಜನ್ ಕೊರತೆಯಿಂದಲೆ ಹೆಚ್ಚು ಸಾವುಗಳಾಗುತ್ತಿವೆ. ಬೆಡ್ , ಐಸಿಯು, ವೆಂಟಿಲೇಟರ್ ಸಮಸ್ಯೆ ದಿನೇ ದಿನೇ ದ್ವಿಗುಣವಾಗುತ್ತಿದೆ. ಸಿಎಂ ಮನೆ ಮುಂದೆ , ವಿಧಾನಸೌಧದ ಮುಂದೆ ಕೋವಿಡ್ ಸೋಂಕಿತರು ಬೆಡ್ ವ್ಯವಸ್ಥೆ ಮಾಡಿ ಎಂದು ಬರುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆ ಇದೆ. ಹೀಗಾಗಿ ಈ ಎಲ್ಲಾ ಸಮಸ್ಯೆಗೆ ಲಾಕ್​ಡೌನ್ ಒಂದೇ ಪರಿಹಾರ ಎಂದು ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ ನಾಳೆ ಸಚಿವರ ಹಾಗೂ ಅಧಿಕಾರಿಗಳ ಸಭೆ ಕರೆದಿರುವ ಸಿಎಂ ಜನತಾ ಕರ್ಫ್ಯೂವನ್ನು ಮತ್ತಷ್ಟು ಬಿಗಿಗೊಳಿಸೋದಾ ? ಅಥವಾ 12 ನೇ ತಾರೀಖಿನ ಬಳಿಕ ಲಾಕ್ ಡೌನ್ ಘೋಷಣೆ ಮಾಡೋದಾ? ಎಂದು ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ.
Published by: MAshok Kumar
First published: May 6, 2021, 9:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories