ಬೆಂಗಳೂರು; ಬೆಂಗಳೂರಲ್ಲಿ ಮಹಾಮಾರಿ ಕೊರೋನಾಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬೆಂಗಳೂರನ್ನು ಎಂಟು ವಲಯಗಳನ್ನಾಗಿ ವಿಂಗಡಿಸಿ ಒಂದೊಂದು ವಲಯಕ್ಕೆ ಒಬ್ಬೊಬ್ಬ ಸಚಿವರನ್ನು ಉಸ್ತುವಾರಿಗಳನ್ನಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇಮಕ ಮಾಡಿದ್ದಾರೆ.
ಬೆಂಗಳೂರು ಪೂರ್ವ ವಲಯದ ಉಸ್ತುವಾರಿ ಹಾಗೂ ವಸತಿ ಸಚಿವ ಇಂದು ವಲಯದಲ್ಲಿನ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದರು. ಹೆಬ್ಬಾಳ, ಪುಲಿಕೇಶಿನಗರ ಹಾಗೂ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೋವಿಡ್ ವಾರ್ ರೂಂ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಅಧಿಕಾರಿಗಳಿಗೂ ಕೆಲ ಸೂಚನೆಗಳನ್ನು ನೀಡಿದ್ದಾರೆ. ಬುಧವಾರದ ಒಳಗೆ ಬೆಡ್ ಸಮಸ್ಯೆ ಆಗಲಿ, ಚಿಕಿತ್ಸೆ ವಿಚಾರ, ಆ್ಯಂಬುಲೆನ್ಸ್ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಸೂಚನೆ ನೀಡಿ,
ಕ್ವಾರಂಟೈನ್ಗೆ ಸಮಸ್ಯೆ ಆಗದಂತೆ ಸಿದ್ಧತೆ ಮಾಡಿಕೊಳ್ಳಿ ಅಂತಾ ಹೇಳಿದ್ದಾರೆ.
ಸಂಜಯನಗರ ಫಿವರ್ ಸೆಂಟರ್, ಆರ್ ಟಿ ನಗರ ಸರ್ಕಾರಿ ಆಸ್ಪತ್ರೆ, ಹೆಬ್ಬಾಳ ಸರ್ಕಾರಿ ಆಸ್ಪತ, ಪಶು ವೈದ್ಯಕೀಯ ಕಾಲೇಜು , ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆ ಹಾಗೂ ಗಂಗಾನಗರದ ಸರ್ಕಾರಿ ಆಸ್ಪತ್ರೆ ಮತ್ತು ಸಿವಿ ರಾಮನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಹಾಗೂ ಸಿದ್ಧತೆ ಬಗ್ಗೆ ಅವಲೋಕನ ನಡೆಸಿದರು. ಬಳಿಕ ಮಾತನಾಡಿದ ಅವರು, ಕೊರೋನಾ ಬಗ್ಗೆ ಭಯ ಬೇಡ ಮತ್ತು ಭಯ ಬೀಳಿಸೋದು ಬೇಡ. ಜನರಲ್ಲೂ ಅರಿವು ಮೂಡುತ್ತಿದೆ. ಸರ್ಕಾರ ಕೂಡ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಇದನ್ನು ಓದಿ: ಬೆಂಗಳೂರಿನಲ್ಲಿ ಕೊರೋನಾದಿಂದ ಮೃತಪಡುವವರ ಸಂಖ್ಯೆ ಏರಿಕೆ; ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೂ ಪರದಾಟ
ಬೆಡ್ ,ಆಸ್ಪತ್ರೆ, ಆ್ಯಂಬುಲೆನ್ಸ್, ಚಿಕಿತ್ಸೆ ಸೇರಿ ಎಲ್ಲ ಸಮಸ್ಯೆಗಳಿಗೆ ಬುಧವಾರದ ಒಳಗೆ ಪರಿಹಾರ ಸಿಗಲಿದೆ ಎಂದ ಸಚಿವ ಸೋಮಣ್ಣ, ಸರ್ಕಾರ ಲಾಕ್ ಡೌನ್ ಮಾಡಿದ್ದೇ ಈ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು. ಸೋಮಣ್ಣ ಭೇಟಿ ವೇಳೆ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಭೈರತಿ ಬಸವರಾಜ, ಅಖಂಡ ಶ್ರೀನಿವಾಸಮೂರ್ತಿ ಹಾಗೂ ಎಸ್ ರಘು ಮತ್ತು ಸಂಸದ ಪಿ ಸಿ ಮೋಹನ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಬಿಜೆಪಿ ಮುಖಂಡ ಪದ್ಮನಾಭರೆಡ್ಡಿ ಮತ್ತು ಅಧಿಕಾರಿಗಳು ಹಾಜರಿದ್ದರು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ