ಲಂಡನ್: ಕಳೆದ ವರ್ಷ ಚೀನಾದಲ್ಲಿ ಪತ್ತೆಯಾದ ಕೊರೋನಾ ವೈರಸ್ ಇದೀಗ ಇಡೀ ವಿಶ್ವವನ್ನು ಬಿಟ್ಟೂ ಬಿಡದೆ ಕಾಡುತ್ತಿದೆ. ಜಗತ್ತಿನಾದ್ಯಂತ ಮಿಂಚಿನ ವೇಗದಲ್ಲಿ ಹರಡಿದ್ದ ಈ ವೈರಸ್ ಲಕ್ಷಾಂತರ ಜನರ ಪ್ರಾಣಕ್ಕೆ ಕುತ್ತಾಗಿದೆ. ಭಾರತದಲ್ಲೂ ಸಹ 1.5 ಲಕ್ಷಕ್ಕೂ ಅಧಿಕ ಜನ ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈ ಸೋಂಕಿಗೆ ಲಸಿಕೆಯನ್ನು ಸಂಶೋಧಿಸುವ ಕೆಲಸವೂ ನಡೆಯುತ್ತಿದೆಯಾದರೂ ಈ ವರೆಗೆ ಲಸಿಕೆಗಳು ಕ್ಲಿನಿಕಲ್ ಟ್ರಯಲ್ ಹಂತವನ್ನು ದಾಟಿಲ್ಲ. ಇನ್ನೂ ಭಾರತದಲ್ಲಿ ಲಸಿಕೆ ಡ್ರೈ ರನ್ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ನಡುವೆ ಇಂಗ್ಲೆಂಡ್ನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರ ಪ್ರಭೇದದ ಕೊರೋನಾ ವೈರಸ್ ಇಡೀ ಜಗತ್ತಿಗೆ ಮತ್ತಷ್ಟು ಮಾರಕವಾಗುವ ಸಾಧ್ಯತೆಗಳನ್ನು ಮುಂದಿಟ್ಟಿದೆ. Covid-19 ಗಿಂತಲೂ ವೇಗವಾಗಿ ಹರಡುತ್ತಿರುವ ಈ ವೈರಸ್ ಇಂಗ್ಲೆಂಡ್ ದೇಶಕ್ಕೆ ಸವಾಲಾಗಿ ಪರಿಣಮಿಸಿದೆ. ಪರಿಣಾಮ ಅಲ್ಲಿನ ಸರ್ಕಾರ ಇಡೀ ದೇಶದಲ್ಲಿ ಮತ್ತೊಂದು ಸುತ್ತಿನ ಲಾಕ್ಡೌನ್ ಘೋಷಿಸಲು ಮುಂದಾಗಿದೆ.
ರೂಪಾಂತರಿ ಕೊರೋನಾ ವೈರಸ್ ಪ್ರಕರಣಗಳು ಉಲ್ಬಣವಾಗುತ್ತಿದೆ. ಹೀಗೆ ಮುಂದುವರೆದರೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತವೆ. ಪರಿಣಾಮ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗೆ ಸ್ಥಳಾವಕಾಶವೂ ಇರುವುದಿಲ್ಲ ಎಂಬ ತಜ್ಞರ ಎಚ್ಚರಿಕೆಯ ನಂತರ ತುರ್ತು ಕ್ರಮಕ್ಕೆ ಮುಂದಾಗಿರುವ ಬ್ರಿಟನ್ ಸರ್ಕಾರ ಲಂಡನ್ನಲ್ಲಿ ಇಂದಿನಿಂದ ಆರು ವಾರಗಳ ಲಾಕ್ಡೌನ್ ಘೋಷಿಸಿ ಆದೇಶಿಸಿದೆ.
ಸೋಮವಾರ ಈ ಕುರಿತ ಆದೇಶವನ್ನು ಪ್ರಕಟಿಸಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, "ಬ್ರಿಟನ್ನಲ್ಲಿ ಉಲ್ಭಣಿಸುತ್ತಿರುವ ರೂಪಾಂತರಿ ಕೊರೋನಾ ವೈರಸ್ ವೇಗವಾಗಿ ಹರಡುವುದನ್ನು ತಡೆಯುವ ಸಲುವಾಗಿ ಬ್ರಿಟನ್ನಲ್ಲಿ 6 ವಾರಗಳ ಕಾಲ ಮತ್ತೊಂದು ಸುತ್ತಿನ ಲಾಕ್ಡೌನ್ ಅನ್ನು ಹೇರಲಾಗುತ್ತಿದೆ. ಶಾಲಾ ಕಾಲೇಜು ಹಾಗೂ ಎಲ್ಲಾ ರಂಗಗಳು ಮುಂದಿನ ಆರು ವಾರಗಳ ಕಾಲ ಸಂಪೂರ್ಣವಾಗಿ ಮುಚ್ಚಲಿವೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಸ್ಟ್ರಾಜೆನೆಕಾ ಸೇರಿದಂತೆ ಎರಡು ಲಸಿಕೆಗಳನ್ನು ಪರಿಚಯಿಸುವುದರೊಂದಿಗೆ ಬ್ರಿಟನ್ ಕೊರೋನಾ ಲಸಿಕೆ ಸಂಶೋಧನೆಯಲ್ಲಿ ಮುನ್ನಡೆ ಸಾಧಿಸುತ್ತಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಲಾಕ್ಡೌನ್ ಅಗತ್ಯವಾಗಿದೆ. ಫೆಬ್ರವರಿ ಮಧ್ಯಂತರದ ವೇಳೆಗೆ ಎಲ್ಲರೂ ಮುಕ್ತವಾಗಿ ಓಡಾಡಬಹುದು ತಮ್ಮ ಆದ್ಯತೆಯ ಕೆಲಸಗಳಿಗೆ ಮರಳಬಹುದು. ಪ್ರಸ್ತುತ ಜನರ ಜೀವವನ್ನು ಉಳಿಸುವ ರಕ್ಷಿಸುವ ಸಲುವಾಗಿ ನಾವು ಇನ್ನೂ ಆರು ವಾರಗಳ ಕಾಲ ಮನೆಯಲ್ಲೇ ಇರಬೇಕಾಗುತ್ತದೆ" ಎಂದು ದೂರದರ್ಶನದಲ್ಲಿ ಮಾಡಿದ ಭಾಷಣದ ಮೂಲಕ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ