• Home
  • »
  • News
  • »
  • coronavirus-latest-news
  • »
  • ಕೊರೋನಾ ಪರೀಕ್ಷೆಯ ಬಳಿಕ ತಕ್ಷಣ ಸಿಗುತ್ತಿಲ್ಲ ವರದಿ; ತುಮಕೂರಿನಲ್ಲಿ ಹೊಸ ತಲೆನೋವು

ಕೊರೋನಾ ಪರೀಕ್ಷೆಯ ಬಳಿಕ ತಕ್ಷಣ ಸಿಗುತ್ತಿಲ್ಲ ವರದಿ; ತುಮಕೂರಿನಲ್ಲಿ ಹೊಸ ತಲೆನೋವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ 12 ರಂದು ಸಾವನ್ನಪ್ಪಿದ್ದ ವ್ಯಕ್ತಿಯ ಅಂತ್ಯ ಸಂಸ್ಕಾರ ಕೊರೋನಾ ವರದಿ ವಿಳಂಬವಾಗಿ ಬಂದಿರುವುದರಿಂದ ಈವತ್ತಿನವರಗೂ ನಡೆದೇ ಇಲ್ಲ

  • Share this:

ತುಮಕೂರು(ಮೇ. 19): ರಾಜ್ಯದಲ್ಲಿ ಕೊರೋನಾ ಸೋಂಕು ಶಂಕಿತರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಗಳ ಪರೀಕ್ಷೆಗೆ ಪ್ರಯೋಗಾಲಯಗಳನ್ನು ಸ್ಥಾಪಿಸಿದರೂ ವರದಿಗಳು ಅಂದೇ ರೋಗಿಗಳ ಕೈಸೇರುತ್ತಿಲ್ಲ. ಈ ವಿಳಂಬದಿಂದಾಗಿ ಕೆಲವೊಂದು ಜಿಲ್ಲೆಗಳಲ್ಲಿ ಸಾಕಷ್ಟು ರೀತಿಯಲ್ಲಿ ಗೊಂದಲಗಳಾಗಿವೆ‌. ಅದರಲ್ಲೂ ಯಾವುದೇ ಕಾರಣದಿಂದ ಮೃತಪಟ್ಟಿದ್ದರೂ ಕೋವಿಡ್19 ಪರೀಕ್ಷೆ ಮಾಡಬೇಕಿರುವುದರಿಂದ ಶವಗಳ ಹಸ್ತಾಂತರಕ್ಕೂ‌ ಸಾಕಷ್ಟು ಅಡೆತಡೆಗಳು ಎದುರಾಗಿವೆ.


ಇಡೀ ರಾಜ್ಯದಲ್ಲಿ ಐದು ಪ್ರಯೋಗಾಲಯ ಹಾಗೂ ಎರಡು ಮಾದರಿಗಳ ಸಂಗ್ರಹ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಆಸ್ಪತ್ರೆಗಳಿಗೆ ದಾಖಲಾಗುವ ಶಂಕಿತರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಗಳನ್ನು ಪ್ರಯೋಗಾಲಯಗಳಿಗೆ ರವಾನೆ ಮಾಡಲಾಗುತ್ತದೆ. ಆದರೆ, ಶಂಕಿತರ ಸಂಖ್ಯೆ ಜಾಸ್ತಿ ಆಗುತ್ತಿರುವುದರಿಂದ ಪರೀಕ್ಷೆಗೆ ಕಳಿಸುವ ವರದಿಗಳೂ ಹೆಚ್ಚಿವೆ. ಹೀಗಾಗಿ ಸೋಂಕಿಲ್ಲದ ವ್ಯಕ್ತಿಯ ರಿಪೋರ್ಟ್ ಬರುವುದಕ್ಕೆ ಸಾಕಷ್ಟು ದಿನಗಳ ಸಮಯ ತೆಗೆದುಕೊಳ್ಳಲಾಗುತ್ತಿದೆ.


ಇನ್ನು ತುಮಕೂರು ಜಿಲ್ಲೆಯಲ್ಲಂತೂ ವರದಿಯ ವಿಳಂಬದಿಂದ ಅಲ್ಲೋಲ ಕಲ್ಲೋಲವೇ ಆಗಿದೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಕಳೆದ ತಿಂಗಳು ಸಾವನ್ನಪ್ಪಿದ್ದ ಕೊರೋನಾ ಸೋಂಕಿತ ವ್ಯಕ್ತಿ. ಆತನ ಮೃತ ದೇಹವನ್ನ ವರದಿ ಬರುವುದಕ್ಕೂ ಮುನ್ನ ಕೊಟ್ಟಿದ್ದಕ್ಕೆ ಹೇಗೆಲ್ಲಾ ಗೊಂದಲ ಆಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ತುಮಕೂರು ಜಿಲ್ಲಾಸ್ಪತ್ರೆಯಿಂದ ಹೊರ ಹೋಗುವ ಎಲ್ಲಾ ಮೃತ ದೇಹಕ್ಕೂ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ.


ಕಳೆದ 12 ರಂದು ಸಾವನ್ನಪ್ಪಿದ್ದ ವ್ಯಕ್ತಿಯ ಅಂತ್ಯ ಸಂಸ್ಕಾರ ಕೊರೋನಾ ವರದಿ ವಿಳಂಬವಾಗಿ ಬಂದಿರುವುದರಿಂದ ಈವತ್ತಿನವರಗೂ ನಡೆದೇ ಇಲ್ಲ. ತುಮಕೂರು ತಾಲೂಕಿನ ಹೆಗ್ಗೆರೆ ಗ್ರಾಮದ ಯುವಕನೊಬ್ಬ ಅತಿಯಾದ ಮದ್ಯ ಸೇವನೆಯಿಂದ ಕಳೆದ 12 ರಂದು ಸಾವನ್ನಪ್ಪಿದ್ದ. ಈತನ ಸ್ವ್ಯಾಬ್ ತೆಗೆದು ಪರೀಕ್ಷಗೆ ಕಳಿಸಲಾಗಿತ್ತು. ಆದರೆ, ವರದಿ ಬಂದಿರಲಿಲ್ಲ. ಇತ್ತ ವರದಿ ಬರದೇ ಮೃತ ದೇಹವನ್ನ ನೀಡುವ ಹಾಗಿಲ್ಲ.


ಒಂದು ವೇಳೆ ನೀಡಿದರೂ ಸರ್ಕಾರದ ಗೈಡ್ ಲೈನ್ಸ್ ಪ್ರಕಾರವೇ ಅಂತ್ಯಸಂಸ್ಕಾರ ಮಾಡಬೇಕು. ಅಂದ್ರೆ ಕೊರೋನಾ ರೋಗಿ ಅಂತಾನೆ ಅಂತ್ಯ ಸಂಸ್ಕರ ಮಾಡಬೇಕು. ಹಾಗೇನಾದರೂ ಮಾಡಿದರೆ ಮೃತನ ಸಂಬಂಧಿಕರಿಗೆ ಗ್ರಾಮಸ್ಥರಿಂದಲೇ ಕಿರುಕುಳ ಜಾಸ್ತಿಯಾಗುತ್ತವೆ. ಹೀಗಾಗಿ ನಮಗೆ ಆದಷ್ಟು ಬೇಗ ವರದಿ ಕೊಟ್ಟು ಮೃತ ದೇಹವನ್ನ ಕೊಡಿ ಅಂತ ಸಂಬಂಧಿಸಿಕರು ದುಂಬಾಲು ಬೀಳುತ್ತಾರೆ.


ಇನ್ನು ವೈದ್ಯರೇ ಹೇಳುವ ಪ್ರಕಾರ ಪರೀಕ್ಷೆಗೆ ಕಳಿಸಿದ ಕೋವಿಡ್19 ತುಂಬಾ ವಿಳಂಬವಾಗಿ ಕೈ ಸೇರುತ್ತಿದ್ದು, ನೆಗೆಟಿವ್ ಅಂತ ಮೃತ ದೇಹ ಕೊಡುವುದು ಕೂಡ ಕಷ್ಟ ಆಗುತ್ತಿದೆ ಹೇಳುತ್ತಿದ್ದಾರೆ. ಅಲ್ಲದೇ ಮೇ 5ರಂದು ಕಳಿಸಿರುವ ಸ್ಯಾಂಪಲ್ಸ್​ನ ವರದಿಗಳೂ ಇನ್ನೂ ಸಿಕ್ಕಿಲ್ಲ. ಹೀಗೇ ಆದರೆ, ತುಂಬಾ ಕಷ್ಟ ಆಗುತ್ತೆ ಅಂತ ಡಾ. ವೀರಭದ್ರಯ್ಯ ಹೇಳುತ್ತಾರೆ.


ಅಂದಹಾಗೆ‌ ಕಳೆದ 12 ರಂದು ಟೆಸ್ಟ್​ಗೆ ಕಳುಹಿಸಿದ್ದ ಮೃತ ವ್ಯಕ್ತಿಯ ವರದಿ ಬಂದಿದ್ದು ನೆಗೆಟಿವ್ ಅಂತ ನಮೂದಾಗಿದ್ದು ಮೃತ ದೇಹವನ್ನ ಸಂಬಂಧಿಕರಿಗೆ‌ ಹಸ್ತಾಂತರಿಸಲಾಗಿದೆ.


ಇದನ್ನೂ ಓದಿ : ಇಂದಿನಿಂದ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್ ಸಂಚಾರ ಆರಂಭ; ಷರತ್ತುಗಳು ಅನ್ವಯ


ಟೆಸ್ಟಿಂಗ್ ವಿಳಂಬವಾಗುತ್ತಿರುವುದರ ಬಗ್ಗೆ ಸರ್ಕಾರ ಕೂಡಲೇ ಗಮನ ಹರಿಸಬೇಕಿದೆ. ಇದು ಕೇವಲ ತುಮಕೂರು ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಈ ಸಮಸ್ಯೆ ವಕ್ಕರಿಸಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

Published by:G Hareeshkumar
First published: