ತೆಲಂಗಾಣ (ಮಾರ್ಚ್ 03); ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೈದ್ರಾಬಾದ್ ಮೂಲದ ಟೆಕ್ಕಿಯಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಪತ್ತೆಯಾಗಿದ್ದು ಅವರಿಗೆ ಹೈದ್ರಾಬಾದ್ ಗಾಂಧಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿಗಳು ಇದೀಗ ಲಭ್ಯವಾಗುತ್ತಿವೆ.
ಆರಂಭದಲ್ಲೇ ಈ ಸೋಂಕು ಪತ್ತೆಯಾದಾಗ ಸಂಪೂರ್ಣ ಗುಣಮುಖವಾಗುತ್ತದೆ, ಈ ಪ್ರಕರಣದಲ್ಲೂ ರೋಗಿ ಆರಂಭಿಕ ಹಂತದಲ್ಲೇ ಆಸ್ಪತ್ರೆಗೆ ಬಂದಿದ್ದು ಈತ ಸಂಪೂರ್ಣವಾಗಿ ಗುಣಮುಖವಾಗುವ ಸಾಧ್ಯತೆ ಹೆಚ್ಚಿದೆ ಎಂದು ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿದಿನ ಕೊರೊನಾ ಪರೀಕ್ಷೆ ಮಾಡಲಾಗುತ್ತದೆ. ಆದರೆ ಈ ವ್ಯಕ್ತಿ ಏರ್ಪೊರ್ಟಿಗೆ ಬರುವ ವೇಳೆ ಆತನಿಗೆ ರೋಗದ ಯಾವುದೇ ಲಕ್ಷಣಗಳಾದ ಜ್ವರ, ನೆಗಡಿ, ಕೆಮ್ಮು ಇರಲಿಲ್ಲ. ಹಾಗಾಗಿ, ಏರ್ಪೋರ್ಟ್ ಸ್ಕ್ರೀನಿಂಗ್ ವೇಳೆ ಆತನ ಆರೋಗ್ಯದ ಮೇಲೆ ಅನುಮಾನ ಹುಟ್ಟಲಿಲ್ಲ.
ಹೈದರಾಬಾದ್ ತಲುಪಿ ಎರಡು ದಿನಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಂಡಿವೆ. ಎಲ್ಲೆಡೆ ಕೊರೊನಾ ಬಗ್ಗೆ ಸಾಕಷ್ಟು ಮಾಹಿತಿ ಇರೋದ್ರಿಂದ ಕೂಡಲೇ ರೋಗಿ ಆಸ್ಪತ್ರೆಗೆ ತೆರಳಿದ್ದಾನೆ. ಇದು ಆತನಿಗೆ ಅನುಕೂಲವಾಗಿದೆ. ಆತನ ಜೊತೆ ಈ ಎರಡು ದಿನ ಸಂಪರ್ಕದಲ್ಲಿದ್ದ ಎಲ್ಲರನ್ನೂ ಪತ್ತೆ ಮಾಡುವ ಕೆಲಸ ಆರೋಗ್ಯ ಇಲಾಖೆಯಿಂದ ತುರ್ತಾಗಿ ನಡೆಯುತ್ತಿದೆ ಎಂಬ ಮಾಹಿತಿಗಳು ಆರೋಗ್ಯ ಇಲಾಖೆ ಉನ್ನತ ಮೂಲಗಳಿಂದ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.
ಇದನ್ನೂ ಓದಿ : ರಾಜ್ಯಕ್ಕೂ ಕಾಲಿಟ್ಟ ಕೊರೊನ ವೈರಸ್?; ಮಗಳ ಮದುವೆ ಬದಿಗಿಟ್ಟು ಆರೋಗ್ಯ ಸಚಿವ ಶ್ರೀರಾಮುಲು ತುರ್ತು ಸಭೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ