ಮನೆ ಬಾಗಿಲಿಗೆ ಬೈಕ್ ಹೆಲ್ತ್ ಸರ್ವೀಸ್; ಶಿರಸಿಯಲ್ಲೊಂದು ಟೀಮ್ ಸಂಜೀವಿನಿ

ಬೆಳಿಗ್ಗೆ 8 ಗಂಟೆಯಿಂದ 5 ಗಂಟೆಯವರಿಗೆ ಕರೆಮಾಡಿ ಹೆಸರು ನೋಂದಾಯಿಸಿದರೆ ಈ ಟೀಮ್ ಸಂಜೀವಿನಿ ಸದ್ಯಸ್ಯರು ನೇರವಾಗಿ ಅವರ ಮನೆಗೆ ಭೇಟಿ ಮಾಡಿ ಸೇವೆ ಒದಗಿಸುತ್ತಾರೆ

ಟೀಮ್ ಸಂಜೀವಿನಿ ಬೈಕ್​​ ಸಂಚಾರಿ ಘಟಕ್ಕೆ ವಿಧಾನಸಭಾಧ್ಯಕ್ಷ ಕಾಗೇರಿ ಉದ್ಘಾಟಿಸಿದರು

ಟೀಮ್ ಸಂಜೀವಿನಿ ಬೈಕ್​​ ಸಂಚಾರಿ ಘಟಕ್ಕೆ ವಿಧಾನಸಭಾಧ್ಯಕ್ಷ ಕಾಗೇರಿ ಉದ್ಘಾಟಿಸಿದರು

  • Share this:
    ಕಾರವಾರ(ಏ. 16): ಕೊರೋನಾ ವೈರಸ್ ನಿಂದ ಇಡೀ ಭಾರತ ಲಾಕ್ ಡೌನ್ ಆಗಿದ್ದು ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಸರ್ಕಾರ ಹೊರಡಿಸಿರುವ ನಿಷೇಧಾಜ್ಞೆ ಪಾಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜನ ಆರೋಗ್ಯ ಸೇವೆಗಾಗಿ ಪರದಾಟ ನಡೆಸುತ್ತಿದ್ದಾರೆ. ಜೊತೆಗೆ ಮೆಡಿಕಲ್ ಸರ್ವೀಸ್ ಕೂಡಾ ಅಷ್ಟೇ ಅವಶ್ಯಕ‌. ಈ ಸಮಸ್ಯೆ ಅರಿತ ಒಂದು ಸಂಸ್ಥೆ ವಿಶೇಷವಾಗಿ ಆರೋಗ್ಯ ಸಮಸ್ಯೆಗೆ ಒಳಗಾದ ಅಸಹಾಯಕರಿಗೆ ಹಾಗೂ ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಉಚಿತ ಆರೋಗ್ಯ ಸೇವೆ ನೀಡಲು ಮುಂದಾಗಿದೆ.

    ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸ್ಕೋಡ್ ವೆಸ್ ಸಂಸ್ಥೆ 'ಟೀಮ್ ಸಂಜೀವಿನಿ' ಎಂಬ ವಿನೂತನ ಬೈಕ್ ಸಂಚಾರಿ ಆರೋಗ್ಯ ಘಟಕವನ್ನು ಸ್ಥಾಪಿಸಿದೆ. ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಸಿರು ಬಾವುಟ ತೋರಿಸುವ ಮೂಲಕ ಟೀಮ್ ಸಂಜೀವಿನಿ ಆರೋಗ್ಯ ಘಟಕಕ್ಕೆ ಚಾಲನೆ ನೀಡಿದ್ದಾರೆ. ಟೀಮ್ ಸಂಜೀವಿನಿಯಲ್ಲಿ 5 ಬೈಕ್, 3 ಆ್ಯಂಬ್ಯುಲೆನ್ಸ್ ಗಳಿದ್ದು ಪ್ರತಿ ಬೈಕ್ ನಲ್ಲಿ ಮೆಡಿಸಿನ್ ಕಿಟ್ ಗಳು ಇರಲಿವೆ.



    ನಿಷೇಧಾಜ್ಞೆ ವೇಳೆ ಆಸ್ಪತ್ರೆಗೆ ಹೋಗಲಾಗದ ಬಡ ಅಸಹಾಯಕ ಕುಟುಂಬದ ವೃದ್ಧರು, ಮಹಿಳೆಯರು, ಮಕ್ಕಳು ವಿಶೇಷ ಚೇತನರಿಗಾಗಿ ಸಹಾಯವಾಣಿ ಹೆಲ್ಪ್ ಡೆಸ್ಕ್ ಕೂಡಾ ಲಭ್ಯವಿದೆ. ಬೆಳಿಗ್ಗೆ 8 ಗಂಟೆಯಿಂದ 5 ಗಂಟೆಯವರಿಗೆ ಕರೆಮಾಡಿ ಹೆಸರು ನೋಂದಾಯಿಸಿದರೆ ಈ ಟೀಮ್ ಸಂಜೀವಿನಿ ಸದ್ಯಸ್ಯರು ನೇರವಾಗಿ ಅವರ ಮನೆಗೆ ಭೇಟಿ ಮಾಡಿ ಸೇವೆ ಒದಗಿಸುತ್ತಾರೆ. ಈ ಟೀಮ್ ನಲ್ಲಿ  ವೈದ್ಯರು, ನರ್ಸ್ ಗಳು  ಪಾರ್ಮಸಿಸ್ಟ್ ಗಳು, ಲ್ಯಾಬ್ ಟೆಕ್ನಿಷಿಯನ್ , ಆರೋಗ್ಯ ಸಹಾಯಕರು ಹಾಗೂ ಸ್ವಯಂ ಸೇವಕರು ಸೇವೆ ಸಲ್ಲಿಸುತ್ತಿದ್ದಾರೆ.



    ಸಂಜೀವಿನಿ ತಂಡ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಧುಮೇಹ, ರಕ್ತದೊತ್ತಡ ಪರೀಕ್ಷೆ ಜೊತೆಗೆ ಕೋವಿಡ್ 19 ನಿಯಂತ್ರಣ ದ ಕುರಿತು ಜಾಗ್ರತಿ ಮೂಡಿಸಿ ತೀವ್ರ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಆಸ್ಪತ್ರೆಗೆ ಸಾಗಿಸಲು ಕೂಡಾ ಸಹಾಯ ಮಾಡುತ್ತಿದೆ. ಜೊತೆಗೆ ದೂರವಾಣಿ ಮೂಲಕ ತಜ್ಞ ವೈದ್ಯರ  ಸಲಹೆಗಳನ್ನ ನೀಡಲಾಗುತ್ತಿದ್ದು ಈ ಎಲ್ಲಾ ಸೇವೆಗಳೂ ಸಂಪೂರ್ಣ ಉಚಿತವಾಗಿದೆ.



    ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗಾಗಿ ಸಂಚಾರಿ ಆರೋಗ್ಯ ಘಟಕಗಳನ್ನು ನಡೆಸುತ್ತಿರುವ, ಸೋಡ್​ ವೆಸ್ ಸಂಸ್ಥೆ ಟೀಮ್ ವಿನೂತನ ಯೋಜನೆ ರೂಪಿಸಿದೆ.

    ಇದನ್ನೂ ಓದಿ : ಅತ್ತ ಗಂಡ ಜೈಲುಪಾಲು; ಇತ್ತ ಹೆಂಡತಿಗೆ ಹೆರಿಗೆ – ಪರಪ್ಪನ ಅಗ್ರಹಾರ ಪೊಲೀಸರಿಂದಲೇ ಮಹಿಳೆಗೆ ನೆರವು

    ಒಟ್ಟಾರೆ ರಾಜ್ಯದಲ್ಲೇ ಮೊದಲ ಬಾರಿಗೆ ಸ್ಕೋಡ್ ವೆಸ್ ಸಂಸ್ಥೆ ಇಂಥದ್ದೊಂದು ವಿಶೇಷ ಪ್ರಯತ್ನಕ್ಕೆ ಕೈ ಹಾಕಿದ್ದು ಸದ್ಯಕ್ಕೆ ಶಿರಸಿ ನಗರ ಪ್ರದೇಶದ ವ್ಯಾಪ್ತಿಗೆ ಈ ಉಚಿತ ಸೇವೆಯನ್ನು ಆರಂಭಿಸಿದೆ. ಅಲ್ಲದೇ ಜನರಿಂದ ಉತ್ತರ ಪ್ರತಿಕ್ರಿಯೆ ವ್ಯಕ್ತವಾದಲ್ಲಿ ಅಥವಾ ತೀರಾ ಅವಶ್ಯಕತೆಯಿದ್ದಲ್ಲಿ  ಬೇರೆ ಬೇರೆ ತಾಲೂಕುಗಳಿಗೂ ಉಚಿತ ಸೇವೆ ಸಲ್ಲಿಸುವ ಚಿಂತನೆ ನಡೆಸಿದೆ.

    (ವರದಿ : ದರ್ಶನ್​ ನಾಯ್ಕ)
    First published: