HOME » NEWS » Coronavirus-latest-news » TAMILNADU LABOURS STRUCK IN CHIKKAMAGALURU AND REQUEST TO SEND THEM VILLAGE RH

ಕೈಯಲ್ಲಿ ಕಾಸಿಲ್ಲದೆ ಕಾರ್ಮಿಕರ ಪರದಾಟ; ದಯವಿಟ್ಟು ನಮ್ಮನ್ನು ತಮಿಳುನಾಡಿಗೆ ಕಳುಹಿಸಿಕೊಡಿ ಎಂದು ಮನವಿ

ಕಾರ್ಮಿಕರು ತಮ್ಮ ಊರುಗಳಿಗೂ ಹಿಂದಿರುಗಲಾರದೇ, ಇಲ್ಲೂ ಇರಲಾರದೇ ಸಂಕಟ ಅನುಭವಿಸುತ್ತಾ ಇದ್ದಾರೆ. ಕೊನೆಪಕ್ಷ ಜಿಲ್ಲಾಡಳಿತ ಕೂಡ ಅವರಿಗೆ ಆಶ್ರಯ ನೀಡೋದಕ್ಕೆ ಮುಂದಾಗ್ತಿಲ್ಲ. ಹೀಗಾಗಿ ಪರಿಸ್ಥಿತಿಯ ಕೈಗೊಂಬೆಯಾಗಿರುವ ಜನರು ಅಡಕತ್ತರಿಯಲ್ಲಿ ಸಿಲುಕಿ ಪರದಾಡುವಂತಾಗಿದೆ. 

news18-kannada
Updated:May 4, 2020, 4:47 PM IST
ಕೈಯಲ್ಲಿ ಕಾಸಿಲ್ಲದೆ ಕಾರ್ಮಿಕರ ಪರದಾಟ; ದಯವಿಟ್ಟು ನಮ್ಮನ್ನು ತಮಿಳುನಾಡಿಗೆ ಕಳುಹಿಸಿಕೊಡಿ ಎಂದು ಮನವಿ
ಚಿಕ್ಕಮಗಳೂರಿನಲ್ಲಿ ಸಿಲುಕಿಕೊಂಡಿರುವ ತಮಿಳುನಾಡಿನ ಕಾರ್ಮಿಕರು.
  • Share this:
ಚಿಕ್ಕಮಗಳೂರು: ಕೆಲಸ ಅರಸಿಕೊಂಡು ದೂರದ ತಮಿಳುನಾಡಿನಿಂದ ಕಾಫಿನಾಡು ಚಿಕ್ಕಮಗಳೂರಿಗೆ ಸಾವಿರಾರು ಕೂಲಿ ಕಾರ್ಮಿಕರು ಬಂದಿದ್ದರು. ಆದರೆ, ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದೆ, ಸಂಪಾದನೆಯನ್ನೆಲ್ಲಾ ಖಾಲಿ ಮಾಡಿಕೊಂಡು ಈಗ ಬರಿಗೈಯಾಗಿದ್ದು, ಊರಿಗೆ ಹೋಗಲು ಪರದಾಡುತ್ತಿದ್ದಾರೆ.

ಇದು ಕೇವಲ ಒಂದಷ್ಟು ಮಂದಿಯ ಸಮಸ್ಯೆಯಲ್ಲ, ಬದಲಾಗಿ ಕಾಫಿನಾಡಲ್ಲಿ ಸಿಲುಕಿಕೊಂಡಿರುವ ಸಾವಿರಾರು ಮಂದಿಯ ಸಂಕಟ. ಡಿಸೆಂಬರ್, ಜನವರಿ ತಿಂಗಳಲ್ಲಿ ಕಾಫಿನಾಡು ಚಿಕ್ಕಮಗಳೂರಿಗೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಕಾರ್ಮಿಕರು ಬರುತ್ತಾರೆ. ಹೀಗೆ ಬಂದ ಸಾವಿರಾರು ಕಾರ್ಮಿಕರು ಲಾಕ್​ಡೌನ್​ನಿಂದ ಕಾಫಿನಾಡಲ್ಲೇ ಲಾಕ್ ಆಗುವಂತಾಗಿದೆ. ಲಾಕ್​ಡೌನ್​ನಿಂದ ಈಗಾಗಲೇ ಕೆಲಸವಿಲ್ಲದೇ ಒಂದೂವರೆ ತಿಂಗಳು ಖಾಲಿ ಕೈಯಲ್ಲಿ ಕೂತಿದ್ದಾರೆ. ಹಿಂದೆ ಸಂಪಾದನೆ ಮಾಡಿದ್ದ ಹಣವನ್ನೆಲ್ಲ ಊಟ- ತಿಂಡಿಗೆ ಖರ್ಚಾಗಿದೆ. ಈಗ ಒಂದು ಹೊತ್ತಿನ ಊಟಕ್ಕೂ ಕಾರ್ಮಿಕರು ಪರದಾಟ ನಡೆಸುವಂತಾಗಿದೆ.

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಕಂಡ್ರಕಸ್ಕೆ ಗ್ರಾಮದಲ್ಲೂ ತಮಿಳುನಾಡಿನ 20 ಮಂದಿ ಕಳೆದ ಒಂದೂವರೆ ತಿಂಗಳಿನಿಂದ ಲಾಕ್ ಆಗಿ ಸಂಕಷ್ಟ ಅನುಭವಿಸ್ತಿದ್ದಾರೆ. ಮಹಾಮಾರಿ ಕೊರೋನಾದಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಬಂದವರಿಗೆ ಲಾಕ್​ಡೌನ್ ಕಾಫಿ ತೋಟಗಳಲ್ಲೇ ಲಾಕ್ ಮಾಡಿಸಿದೆ. ಕೆಲಸ ಮಾಡಿಸಿಕೊಂಡ ಕಾಫಿ ತೋಟದ ಮಾಲೀಕರು ಸಂಬಳ ನೀಡಿ ಕೈ ತೊಳೆದುಕೊಂಡಿದ್ದಾರೆ. ಸಡನ್ ಆಗಿ ಲಾಕ್ ಡೌನ್ ಘೋಷಣೆಯಾದ್ದರಿಂದ ಕಾರ್ಮಿಕರಿಗೆ ಇರಲು ಆಶ್ರಯ ಮಾತ್ರ ನೀಡಿದ್ದಾರೆ. ಇನ್ನೂ ಈ ಕುರಿತು ಅಧಿಕಾರಿಗಳಂತೂ ತಲೆಯನ್ನೇ ಕೆಡಿಸಿಕೊಂಡಿಲ್ಲ. ಸಹಾಯ ಬೇಡಿ ಪೊಲೀಸ್ ಠಾಣೆ ಹಾಗೂ ತಹಸೀಲ್ದಾರ್ ಕಚೇರಿಗೆ ಹೋದರೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಅಂತಿದ್ದಾರೆ ಕಾರ್ಮಿಕರು.

ಇದನ್ನು ಓದಿ: ಲಕ್ಷಗಟ್ಟಲೆ ಕಾರ್ಮಿಕರು ವಾಪಸ್ ಹೋಗಿಬಿಟ್ಟರೆ ಬೆಂಗಳೂರು ಕಥೆ ಏನು? ಸರ್ಕಾರಕ್ಕೀಗ ಹೊಸ ಚಿಂತೆ

ಕಾರ್ಮಿಕರು ತಮ್ಮ ಊರುಗಳಿಗೂ ಹಿಂದಿರುಗಲಾರದೇ, ಇಲ್ಲೂ ಇರಲಾರದೇ ಸಂಕಟ ಅನುಭವಿಸುತ್ತಾ ಇದ್ದಾರೆ. ಕೊನೆಪಕ್ಷ ಜಿಲ್ಲಾಡಳಿತ ಕೂಡ ಅವರಿಗೆ ಆಶ್ರಯ ನೀಡೋದಕ್ಕೆ ಮುಂದಾಗ್ತಿಲ್ಲ. ಹೀಗಾಗಿ ಪರಿಸ್ಥಿತಿಯ ಕೈಗೊಂಬೆಯಾಗಿರುವ ಜನರು ಅಡಕತ್ತರಿಯಲ್ಲಿ ಸಿಲುಕಿ ಪರದಾಡುವಂತಾಗಿದೆ.
Youtube Video
First published: May 4, 2020, 4:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories