HOME » NEWS » Coronavirus-latest-news » SUPREME COURT ALLOWS CONDUCT OF PURI JAGANNATH RATH YATRA WITH VARIOUS RESTRICTIONS SNVS

ಐತಿಹಾಸಿಕ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ಅನುಮತಿ; ಪುರಿ ನಗರದಲ್ಲಿ ರಾತ್ರಿ 8 ರಿಂದಲೇ ಕರ್ಫ್ಯೂ ಜಾರಿ

ಒಂದೊಂದು ರಥವನ್ನೂ 500ಕ್ಕೂ ಹೆಚ್ಚು ಭಕ್ತರು ಎಳೆಯುವಂತಿಲ್ಲ. ಎರಡು ರಥಗಳ ಯಾತ್ರೆ ಮಧ್ಯೆ ಒಂದು ಗಂಟೆಯಾದರೂ ಅಂತರವಿರಬೇಕು. ಸಾಮಾಜಿಕ ಅಂತರವನ್ನೂ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸೂಚಿಸಿದೆ.

news18
Updated:June 22, 2020, 9:30 PM IST
ಐತಿಹಾಸಿಕ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ಅನುಮತಿ; ಪುರಿ ನಗರದಲ್ಲಿ ರಾತ್ರಿ 8 ರಿಂದಲೇ ಕರ್ಫ್ಯೂ ಜಾರಿ
ಪುರಿ ಜಗನ್ನಾಥ ರಥ ಯಾತ್ರೆಯ ಒಂದು ದೃಶ್ಯ
  • News18
  • Last Updated: June 22, 2020, 9:30 PM IST
  • Share this:
ನವದೆಹಲಿ(ಜೂನ್ 22): ಒಡಿಶಾದ ಐತಿಹಾಸಿಕ ಪುರಿ ರಥ ಯಾತ್ರೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಜೂನ್ 18ರಂದು ತಾನು ರಥಯಾತ್ರೆಗೆ ನೀಡಿದ್ದ ತಡೆಯನ್ನು ಕೋರ್ಟ್ ಇವತ್ತು ಕೆಲ ನಿರ್ಬಂಧಗಳೊಂದಿಗೆ ಹಿಂಪಡೆದುಕೊಂಡಿದೆ. ರಥ ಯಾತ್ರೆಯನ್ನು ಆಯೋಜಿಸುವ ನಿರ್ಧಾರವನ್ನು ಒಡಿಶಾ ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟಿದೆ. ಪುರಿಯ ಜಗನ್ನಾಥ ಮಂದಿರದಲ್ಲಿ ಮಾತ್ರ ರಥ ಯಾತ್ರೆ ನಡೆಸಬಹುದು. ರಾಜ್ಯದ ಬೇರೆಲ್ಲೂ ರಥಯಾತ್ರೆ ನಡೆಸುವಂತಿಲ್ಲ ಎಂದು ಕೋರ್ಟ್ ಆದೇಶಿಸಿದೆ.

ಪುರಿಯಲ್ಲಿ ಎರಡು ತೇರುಗಳಿದ್ದು ಎರಡು ಯಾತ್ರೆ ನಡೆಯುತ್ತವೆ. ಪ್ರತಿಯೊಂದು ರಥ ಯಾತ್ರೆಯಲ್ಲಿ ಭಕ್ತರ ಸಂಖ್ಯೆ 500 ದಾಟಬಾರದು. ಎರಡು ರಥ ಯಾತ್ರೆಯ ಮಧ್ಯೆ ಕನಿಷ್ಠ 1 ಗಂಟೆ ಅಂತರ ಇರಬೇಕು. ರಥ ಎಳೆಯಲು ಬರುವ ಪ್ರತಿಯೊಬ್ಬ ಭಕ್ತರಿಗೂ ಕೊರೋನಾ ಪರೀಕ್ಷೆ ನಡೆಸಿಯೇ ಬಿಡಬೇಕು. ಸಾಮಾಜಿಕ ಅಂತರ ಪಾಲನೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಭಾರತೀಯ ಮುಖ್ಯನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ತ್ರಿಸದಸ್ಯ ಸುಪ್ರೀಂ ನ್ಯಾಯಪೀಠ ಈ ತೀರ್ಪು ನೀಡಿದೆ. ನಾಳೆ ಅಂದರೆ ಜೂನ್ 23ರಂದು ರಥ ಯಾತ್ರೆ ಇದ್ದು, ಇವತ್ತು ರಾತ್ರಿ 8ಗಂಟೆಯಿಂದಲೇ ಸುಪ್ರೀಂ ಸೂಚನೆಯಂತೆ ಒಡಿಶಾ ಸರ್ಕಾರವು ಪುರಿ ನಗರದಾದ್ಯಂತ ಕರ್ಫ್ಯೂ ಜಾರಿಗೊಳಿಸಿದೆ. ಎಲ್ಲೆಡೆ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.

ಇದನ್ನೂ ಓದಿ: ಅಮೆರಿಕದ ಹೆಚ್-1ಬಿ ವೀಸಾಗೆ 6 ತಿಂಗಳು ನಿರ್ಬಂಧ? ಶೀಘ್ರದಲ್ಲೇ ಡೊನಾಲ್ಡ್ ಟ್ರಂಪ್ ನಿರ್ಧಾರ ಪ್ರಕಟ

ಇದೇ ವೇಳೆ, ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರು ಸುಪ್ರೀಂ ಕೋರ್ಟ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಹಾಗೆಯೇ, ಕೇಂದ್ರ ಸರ್ಕಾರದ ಸಹಕಾರಕ್ಕೂ ಧನ್ಯವಾದ ಹೇಳಿದ್ದಾರೆ. ಕೋವಿಡ್-19 ಬಿಕ್ಕಟ್ಟಿನಲ್ಲಿ ಜಗನ್ನಾಥ ರಥ ಯಾತ್ರೆ ನಡೆಸುವುದು ಬಹಳ ಸವಾಲಿನ ಕೆಲಸ. ಆದರೆ, ರಾಜ್ಯ ಸರ್ಕಾರ ಇದಕ್ಕೆ ಸಜ್ಜಾಗಿದೆ. ರಥ ಯಾತ್ರೆ ಸುಗಮವಾಗಿ ನಡೆಯಲು ಸಾಧ್ಯವಾಗುವಂತೆ ಮೂವರು ಸಚಿವರು ಪುರಿಯಲ್ಲಿ ಇರಲಿದ್ದಾರೆ ಎಂದು ನವೀನ್ ಪಾಟ್ನಾಯಕ್ ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಸ್ವಾಗತಿಸಿದ್ಧಾರೆ. ಕೋರ್ಟ್ ತೀರ್ಪಿನಿಂದ ಇಡೀ ದೇಶವೇ ಆನಂದಗೊಂಡಿದೆ. ಇವತ್ತು ನಮ್ಮೆಲ್ಲರಿಗೂ ವಿಶೇಷ ದಿನವಾಗಿದೆ. ಒಡಿಶಾದ ಜನರು ಹಾಗೂ ಜಗನ್ನಾಥನ ಭಕ್ತರಿಗೆ ಬಹಳ ವಿಶೇಷ ದಿನವಾಗಿದೆ ಎಂದು ಶಾ ಹೇಳಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ನಿನ್ನೆ ಸಂಜೆ ನಾನು ಪುರಿಯ ಮಹಾರಾಜರು ಮತ್ತು ಪುರಿಯ ಶಂಕರಾಚಾರ್ಯರನ್ನ ಭೇಟಿ ಮಾಡಿ ರಥ ಯಾತ್ರೆ ಬಗ್ಗೆ ಅಭಿಪ್ರಾಯ ಕೇಳಿದೆ. ಇವತ್ತು ಸಾಲಿಸಿಟರ್ ಜನರಲ್ ಅವರೊಂದಿಗೆ ಮಾತನಾಡಿದೆ. ತುರ್ತು ವಿಚಾರವಾದ್ದರಿಂದ ಸುಪ್ರೀಂ ಕೋರ್ಟ್​ನ ರಜಾದಿನದ ಪೀಠದ ಮುಂದೆ ಅರ್ಜಿ ಇಟ್ಟೆವು. ಇವತ್ತು ಮಧ್ಯಾಹ್ನ ಇದರ ವಿಚಾರಣೆಯಾಗಿ ಕೋರ್ಟ್ ಮಹತ್ವದ ತೀರ್ಪು ಬರಲು ಸಾಧ್ಯವಾಯಿತು” ಎಂದು ಅಮಿತ್ ಶಾ ವಿವರಿಸಿದ್ಧಾರೆ.ಇದನ್ನೂ ಓದಿ: ತಮಿಳುನಾಡು ದಲಿತ ಮರ್ಯಾದಾ ಹತ್ಯೆ ಪ್ರಕರಣ: ಮುಖ್ಯ ಆರೋಪಿ ಖುಲಾಸೆ; ಐವರ ಶಿಕ್ಷೆ ಪ್ರಮಾಣ ಇಳಿಕೆಪುರಿಯಲ್ಲಿ ನಡೆಯುವ ಜಗನ್ನಾಥ ರಥ ಯಾತ್ರೆ ಐತಿಹಾಸಿಕವಾದುದು. ಇಲ್ಲಿಯವರೆಗೂ ಯಾವ ವರ್ಷವೂ ರಥ ಯಾತ್ರೆ ತಪ್ಪಿದ್ದಿಲ್ಲ. ಆದರೆ, ಈ ವರ್ಷ ಕೊರೋನಾ ವೈರಸ್ ಸೋಂಕಿನ ಭೀತಿಯ ಕಾರಣದಿಂದ ಸುಪ್ರೀಂ ಕೋರ್ಟ್ ಈ ಯಾತ್ರೆಗೆ ತಡೆ ನೀಡಿ ಜೂನ್ 18ರಂದು ತೀರ್ಪು ನೀಡಿತ್ತು. ಇದಕ್ಕೆ ಪುರಿ ಶಂಕರಾಚಾರ್ಯರು ಮತ್ತು ಪುರಿ ಮಹಾರಾಜರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ತೀರ್ಪು ಮರುಪರಿಶೀಲಿಸುವಂತೆ ಕೋರಿ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಬದಲಾವಣೆ ಮಾಡಿ ಹೊಸ ತೀರ್ಪು ನೀಡಿದೆ.
First published: June 22, 2020, 9:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading