ಭಾರತದಲ್ಲಿ ಕೋವಿಡ್ - 19 ಎರಡನೇ ಅಲೆಗೆ ಲಕ್ಷಾಂತರ ಜನರು ಬಲಿಯಾಗಿದ್ದು, ಜತೆಗೆ ದೇಶದ ಜನತೆ ಲಸಿಕೆಯ ಕೊರತೆಯನ್ನೂ ತೀವ್ರತರವಾಗಿ ಎದುರಿಸುತ್ತಿದ್ದಾರೆ. ಈ ನಡುವೆ, ಅಮೆರಿಕ ಭಾರತಕ್ಕೆ ಲಸಿಕೆ ಹಂಚಿಕೆ ಮಾಡುವುದಾಗಿ ತಿಳಿಸಿದ್ದು, ಈ ಸಂಬಂಧ ಅಮೆರಿಕ ಉಪಾಧ್ಯಕ್ಷೆ ಭಾರತ ಮೂಲದ ಕಮಲಾ ಹ್ಯಾರಿಸ್ ಪ್ರಧಾನಿ ಮೋದಿ ಜತೆಗೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದಾರೆ. ಜಾಗತಿಕವಾಗಿ ಲಸಿಕೆಗಳನ್ನು ಹಂಚುವ ಅಮೆರಿಕದ ಯೋಜನೆಯಲ್ಲಿ ಭಾರತವೂ ಸೇರಿದ್ದು, ದೇಶಕ್ಕೆ ಈ ತಿಂಗಳ ಕೊನೆಯಲ್ಲಿ ಮೊದಲ ಬ್ಯಾಚ್ ಲಸಿಕೆ ಪ್ರಮಾಣ ಬರುವ ನಿರೀಕ್ಷೆ ಇದೆ. ಈ ಭರವಸೆಗಾಗಿ ಪ್ರಧಾನಿ ಮೋದಿ ಕಮಲಾ ಹ್ಯಾರಿಸ್‌ಗೆ ಧನ್ಯವಾದ ಅರ್ಪಿಸಿದ್ದು, ಮೆಚ್ಚುಗೆ ಸೂಚಿಸಿದ್ದಾರೆ. ಅಮೆರಿಕ ಸರ್ಕಾರ, ವ್ಯವಹಾರಗಳು ಹಾಗೂ ಭಾರತೀಯ ಮೂಲದವರು ಸೇರಿ ಎಲ್ಲರೂ ಕೊರೊನಾ ವಿರುದ್ಧ ಹೋರಾಡಲು ಬೆಂಬಲ ನೀಡುತ್ತಿರುವುದಕ್ಕೆ ಹಾಗೂ ದೇಶದ ಪರವಾಗಿ ಒಟ್ಟಾಗಿ ನಿಂತಿದ್ದಕ್ಕೆ ಕಮಲಾ ಹ್ಯಾರಿಸ್ ಅವರಿಗೆ ಧನ್ಯವಾದ ಅರ್ಪಿಸಿದ್ದೇನೆ ಎಂದು ಸರಣಿ ಟ್ವೀಟ್‌ಗಳ ಮೂಲಕ ಮೋದಿ ಹೇಳಿದ್ದಾರೆ.
ಅಮೆರಿಕವೇ ಲಸಿಕೆ ನೀಡುವ ತೀರ್ಮಾನವನ್ನು ತೆಗೆದುಕೊಂಡಿದೆ. ಕಮಲಾ ಹ್ಯಾರಿಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಜೋ ಬೈಡನ್ ಆಡಳಿತವು ''ವಿಶಾಲ ಜಾಗತಿಕ ವ್ಯಾಪ್ತಿಯನ್ನು ಸಾಧಿಸುವ ಪ್ರಯತ್ನಗಳು, ಉಲ್ಬಣಗಳು ಮತ್ತು ಇತರ ತುರ್ತು ಸಂದರ್ಭಗಳಿಗೆ ಸಾರ್ವಜನಿಕ ಆರೋಗ್ಯ ಅಗತ್ಯಗಳಿಗೆ ಸ್ಪಂದಿಸುವುದು ಮತ್ತು ಲಸಿಕೆಗಳನ್ನು ಕೋರಿದ ಸಾಧ್ಯವಾದಷ್ಟು ದೇಶಗಳಿಗೆ ಸಹಾಯ ಮಾಡುತ್ತಿದೆ'' ಎಂದು ಕಮಲಾ ಹ್ಯಾರಿಸ್ ಮೋದಿ ಜತೆಗೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದಾರೆ ಎಂದು ಹಿರಿಯ ಶ್ವೇತಭವನದ ಸಲಹೆಗಾರ ಮತ್ತು ಮುಖ್ಯ ವಕ್ತಾರ ಸಿಮೋನ್ ಸ್ಯಾಂಡರ್ಸ್ ಹೇಳಿದರು.
ಜೋ ಬೈಡನ್ ಆಡಳಿತವು ಕೋವಿಡ್ -19 ಲಸಿಕೆಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವ ಯೋಜನೆಯನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಇದರಲ್ಲಿ ಯುಎನ್ ಬೆಂಬಲಿತ ಕೋವಾಕ್ಸ್ ಜಾಗತಿಕ ಲಸಿಕೆ ಹಂಚಿಕೆ ಕಾರ್ಯಕ್ರಮದ ಮೂಲಕ ಶೇಕಡಾ 75 ರಷ್ಟು ಹೆಚ್ಚುವರಿ ಪ್ರಮಾಣವನ್ನು ನಿರ್ದೇಶಿಸುವ ಉದ್ದೇಶವಿದೆ. ಈ ಪೈಕಿ ಭಾರತಕ್ಕೂ ಹೆಚ್ಚು ಲಸಿಕೆಯ ಪ್ರಮಾಣ ಸಿಗಲಿದೆ ಎಂದು ಭಾರತ ನಿರೀಕ್ಷಿಸುತ್ತಿದೆ.
“ಜಾಗತಿಕ ಲಸಿಕೆ ಹಂಚಿಕೆಗಾಗಿ ಅಮೆರಿಕದ ಸ್ಟ್ರಾಟಜಿ ಭಾಗವಾಗಿ ಭಾರತಕ್ಕೆ ಲಸಿಕೆ ಸರಬರಾಜು ನೀಡುವ ಭರವಸೆಯನ್ನು ನಾನು ಅತ್ಮೀಯವಾಗಿ ಪ್ರಶಂಸೆ ವ್ಯಕ್ತಪಡಿಸುತ್ತೇನೆ. ಯುಎಸ್ ಸರ್ಕಾರ, ವ್ಯವಹಾರಗಳು ಮತ್ತು ಭಾರತೀಯ ವಲಸೆಗಾರರ ಎಲ್ಲ ಬೆಂಬಲ ಮತ್ತು ಒಗ್ಗಟ್ಟಿಗೆ ನಾನು ಅವರಿಗೆ ಧನ್ಯವಾದ ಅರ್ಪಿಸಿದೆ. " ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಮೋದಿ ಮತ್ತು ಕಮಲಾ ಹ್ಯಾರಿಸ್ ಭಾರತ-ಯುಎಸ್ ಲಸಿಕೆ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನಗಳ ಬಗ್ಗೆ ಚರ್ಚಿಸಿದರು ಎಂದು ತಿಳಿದುಬಂದಿದ್ದು, ಮತ್ತು "ಕೋವಿಡ್ ನಂತರದ ಜಾಗತಿಕ ಆರೋಗ್ಯ ಮತ್ತು ಆರ್ಥಿಕ ಚೇತರಿಕೆಗೆ ನಮ್ಮ ಪಾಲುದಾರಿಕೆಯ ಸಾಮರ್ಥ್ಯ"ದ ಬಗ್ಗೆ ಪ್ರಧಾನಿ ತಮ್ಮ ಟ್ವೀಟ್‌ನಲ್ಲಿ ಸೇರಿಸಿದ್ದಾರೆ.
ಅಲ್ಲದೆ, ಜಾಗತಿಕ ಆರೋಗ್ಯ ಪರಿಸ್ಥಿತಿ ಸಾಮಾನ್ಯವಾದ ಕೂಡಲೇ ಭಾರತಕ್ಕೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಸ್ವಾಗತಿಸುವ ಭರವಸೆಯನ್ನು ಪ್ರಧಾನಿ ವ್ಯಕ್ತಪಡಿಸಿದರು.
ಮೋದಿಯ ಹೊರತಾಗಿ, ಕಮಲಾ ಹ್ಯಾರಿಸ್ ಮೆಕ್ಸಿಕೋ ಅಧ್ಯಕ್ಷ ಆ್ಯಂ ಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್, ಗ್ವಾಟೆಮಾಲಾದ ಅಧ್ಯಕ್ಷ ಅಲೆಜಾಂಡ್ರೊ ಜಿಯಮ್ಮಟ್ಟೆ ಮತ್ತು ಕೆರಿಬಿಯನ್ ಸಮುದಾಯದ ಮುಖ್ಯಸ್ಥ (CARICOM) ಪ್ರಧಾನಿ ಕೀತ್ ರೌಲಿ ಅವರಿಗೂ ಕರೆ ಮಾಡಿದ್ದರು.
"ಬಿಡೆನ್-ಹ್ಯಾರಿಸ್ ಆಡಳಿತವು ಮೊದಲ ಬ್ಯಾಚ್‌ನಲ್ಲಿ 25 ಮಿಲಿಯನ್ ಡೋಸ್ ಕೋವಿಡ್ ಲಸಿಕೆಗಳನ್ನು ಆಯಾ ದೇಶಗಳಿಗೆ ಮತ್ತು ಇತರರಿಗೆ ಹಂಚಿಕೊಳ್ಳಲು ಪ್ರಾರಂಭಿಸುತ್ತದೆ ಎಂದು ಕಮಲಾ ಹ್ಯಾರಿಸ್ ಹಲವು ನಾಯಕರಿಗೆ ಸೂಚಿಸಿದರು. ಜಾಗತಿಕವಾಗಿ ಕನಿಷ್ಠ 80 ಮಿಲಿಯನ್ ಲಸಿಕೆಗಳನ್ನು ಜೂನ್ ಅಂತ್ಯದ ವೇಳೆಗೆ ಹಂಚಿಕೊಳ್ಳುವ ಬಿಡೆನ್-ಹ್ಯಾರಿಸ್ ಆಡಳಿತದ ಚೌಕಟ್ಟಿನ ಭಾಗವಾಗಿ ಆರಂಭದಲ್ಲಿ ಈ ಲಸಿಕೆಗಳನ್ನು ನೀಡಲಿದೆ'' ಎಂದು ಶ್ವೇತಭವನ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ತಿಂಗಳು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ಮೂಲಕ ಬಿಡೆನ್ ಅಧ್ಯಕ್ಷರಾದ ಬಳಿಕ ಯುಎಸ್‌ಗೆ ತೆರಳಿದ ಮೊದಲ ಭಾರತೀಯ ಕ್ಯಾಬಿನೆಟ್ ಮಂತ್ರಿ ಎನಿಸಿಕೊಂಡಿದ್ದರು. ಕೋವಿಡ್ -19 ಸಾಂಕ್ರಾಮಿಕ ಮತ್ತು ಲಸಿಕೆಗಳು ಉನ್ನತ ಅಧಿಕಾರಿಗಳೊಂದಿಗೆ ಅವರು ನಡೆಸಿದ ಚರ್ಚೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಜೈಶಂಕರ್ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ