news18-kannada Updated:June 29, 2020, 8:21 AM IST
ಬಿಎಸ್ ಯಡಿಯೂರಪ್ಪ
ಬೆಂಗಳೂರು(ಜೂನ್ 28): ನಿನ್ನೆ ಸರ್ಕಾರದ ಉನ್ನತ ಮಟ್ಟದ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರದಂತೆ ಇಂದು ರಾಜ್ಯ ಸರ್ಕಾರ ಲಾಕ್ಡೌನ್ ನಿಯಮಾವಳಿಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ. ಮೂರು ಪ್ರಮುಖ ಅಂಶಗಳನ್ನ ಸೇರಿಸಿ ಕೊರೋನಾ ನಿಯಂತ್ರಣಕ್ಕೆ ಪ್ರಯತ್ನಿಸಿದೆ. ಮೊದಲ ಅಂಶವಾಗಿ, ಲಾಕ್ ಡೌನ್ ಅನ್ನು ಸಂಪೂರ್ಣ ತೆರವುಗೊಳಿಸುವುದರ ಬದಲು ಭಾನುವಾರ ಮಾತ್ರ ಲಾಕ್ಡೌನ್ ಮಾಡಲು ನಿರ್ಧರಿಸಿದೆ. ಜುಲೈ 5ರಿಂದ ಆಗಸ್ಟ್ 2ರವರೆಗೆ, ಅಂದರೆ ಮುಂಬರುವ 5 ಭಾನುವಾರಗಳಂದು ಇಡೀ ರಾಜ್ಯವನ್ನ ಸಂಪೂರ್ಣವಾಗಿ ದಿಗ್ಬಂಧನ ಮಾಡಲಾಗುತ್ತದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಈ ಆದೇಶ ಹೊರಡಿಸಿದ್ದಾರೆ.
ಭಾನುವಾರ ಸಂಪೂರ್ಣವಾಗಿ ಲಾಕ್ಡೌನ್ ಇರುತ್ತದೆಯಾದರೂ ಅಗತ್ಯ ಸರಕು ಸರಂಜಾಮುಗಳ ಸಾಗಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಅಗತ್ಯ ಸೇವೆಗಳನ್ನ ನೀಡುವ ಮೆಡಿಕಲ್ ಸ್ಟೋರ್ ಇತ್ಯಾದಿ ಅಂಗಡಿ, ಕಚೇರಿಗಳನ್ನ ತೆರೆಯಲು ಅವಕಾಶ ಇರುತ್ತದೆ. ಈ ಹಿಂದೆ ಒಮ್ಮೆ ಈ ಭಾನುವಾರದ ಲಾಕ್ಡೌನ್ ಪ್ರಯೋಗ ಮಾಡಲಾಗಿತ್ತು. ಈಗ ತಜ್ಞರ ಸಲಹೆ ಮೇರೆಗೆ ಮತ್ತೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸೇರ್ಪಡೆಯಾದ ಎರಡನೇ ಅಂಶ ಸರ್ಕಾರಿ ಕಚೇರಿಗಳನ್ನ ಬಂದ್ ಮಾಡುವುದು. ತುರ್ತು ಮತ್ತು ಅಗತ್ಯ ಸೇವೆ ಒದಗಿಸುವ ಕಚೇರಿ ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಕಚೇರಿಗಳು ಪ್ರತೀ ಶನಿವಾರ ಮತ್ತು ಭಾನುವಾರ ಬಂದ್ ಆಗಲಿವೆ. ಇದು ಜುಲೈ 10ರಿಂದ ಅನ್ವಯವಾಗಲಿದ್ದು ಆಗಸ್ಟ್ 8ರವರೆಗೆ ಚಾಲನೆಯಲ್ಲಿರುತ್ತದೆ.
ಇದನ್ನೂ ಓದಿ: ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
ಲಾಕ್ಡೌನ್ ತೆರವುಗೊಳಿಸುವ ಪ್ರಕ್ರಿಯೆ ಪ್ರಾರಂಭವಾದಾಗಿನಿಂದಲೂ ರಾಜ್ಯಾದ್ಯಂತ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿದೆ. ಈಗ ಈ ಅವಧಿಯಲ್ಲಿ ಒಂದು ಗಂಟೆ ವಿಸ್ತರಿಸಲಾಗಿದೆ. ರಾತ್ರಿ 9ರ ಬದಲು ರಾತ್ರಿ 8ರಿಂದಲೇ ಕರ್ಫ್ಯೂ ಪ್ರಾರಂಭವಾಗಲಿದೆ. ಇದು ನಿತ್ಯ ಇರುವ ನಿಷೇಧಾಜ್ಞೆಯಾಗಿದೆ. ಈ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆ ಹೊರತುಪಡಿಸಿ ಬೇರೆ ಯಾವ ಕಾರಣಕ್ಕೂ ವ್ಯಕ್ತಿಗಳು ಸಾರ್ವಜನಿಕವಾಗಿ ಓಡಾಡುವಂತಿಲ್ಲ.
First published:
June 28, 2020, 5:54 PM IST