news18 Updated:March 17, 2020, 6:54 PM IST
ಸೇಂಟ್ ಮೇರಿ ಆಸ್ಪತ್ರೆಯಲ್ಲಿರುವ ಪಾರ್ಶ್ವವಾಯು ಪೀಡಿತ ರೋಗಿ
- News18
- Last Updated:
March 17, 2020, 6:54 PM IST
ಕಾರವಾರ(ಮಾ. 17): ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಹಳಗಾ ಗ್ರಾಮದಲ್ಲಿರುವ ಆಸ್ಪತ್ರೆಯಲ್ಲಿ ಪಾರ್ಶ್ವವಾಯು ಪೀಡಿತ ರೋಗಿಗಳು ಪರದಾಡುವಂತಾಗಿದೆ. ವಿಶ್ವದೆಲ್ಲೆಡೆ ಭೀತಿಯನ್ನ ಸೃಷ್ಟಿಸಿರುವ ಕೊರೊನಾ ವೈರಸ್ನ ಆತಂಕದಿಂದಾಗಿ ಇವತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಬಂದ್ ಮಾಡಲಾಗಿತ್ತು. ತುರ್ತು ಚಿಕಿತ್ಸೆಯ ಅಗತ್ಯ ಇದ್ದ ರೋಗಿಗಳಿಗೂ ಸಂಕಷ್ಟ ಉಂಟಾಗಿತ್ತು.
ಹಳಗಾ ಗ್ರಾಮದಲ್ಲಿರುವ ಸೇಂಟ್ ಮೇರಿ ಆಸ್ಪತ್ರೆ ಪಾರ್ಶ್ವವಾಯು ಚಿಕಿತ್ಸೆಗೆ ಸಾಕಷ್ಟು ಪ್ರಸಿದ್ಧವಾಗಿದೆ. ಇಲ್ಲಿನ ಆಸ್ಪತ್ರೆಗೆ ಬೆಂಗಳೂರು, ಕೋಲಾರ, ಬೀದರ್ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದಲೂ ನೂರಾರು ರೋಗಿಗಳು ಆಗಮಿಸುತ್ತಾರೆ. ಆದ್ರೆ ಸದ್ಯ ಎಲ್ಲೆಡೆ ಕೊರೊನಾ ಸೋಂಕು ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಹೆಚ್ಚು ಜನರು ಒಂದೆಡೆ ಸೇರದಂತೆ ಮುನ್ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಂದ್ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರಿಂದ ಇವತ್ತು ಬೆಳಗ್ಗೆಯಿಂದಲೇ ಆಸ್ಪತ್ರೆಯನ್ನ ಬಂದ್ ಮಾಡಲಾಗಿತ್ತು. ಯಾವುದೇ ರೋಗಿಗಳನ್ನ ಒಳತೆಗೆದುಕೊಳ್ಳದೇ ವಾಪಸ್ ತೆರಳದಂತೆಯೂ ತಿಳಿಸಲಾಗಿತ್ತು. ಇದರಿಂದಾಗಿ ದೂರದ ಊರುಗಳಿಂದ ಬಂದಿದ್ದ ರೋಗಿಗಳು ಪರದಾಡುವಂತಾಯಿತು.
ಇದನ್ನೂ ಓದಿ: ಸರ್ಕಾರದ ಆದೇಶ ಉಲ್ಲಂಘಿಸಿ ಮದುವೆಯಲ್ಲಿ ಭಾಗಿಯಾದ ಸಿಎಂ ಬಿಎಸ್ವೈ ಸೇರಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು
ಇನ್ನು ಹಳಗಾ ಗ್ರಾಮ ಕಾರವಾರದಿಂದ ಸುಮಾರು 26 ಕಿಲೋ ಮೀಟರ್ ದೂರದಲ್ಲಿದ್ದು ಬೆಂಗಳೂರು, ಬೀದರ್, ದಾವಣಗೆರೆ ಭಾಗಗಳಿಂದ ಬರುವವರು 300 ರಿಂದ 600 ಕಿಲೋಮೀಟರ್ವರೆಗೆ ಪ್ರಯಾಣ ಮಾಡಿಕೊಂಡೇ ಬರಬೇಕು. ಅಲ್ಲದೇ ಬಹುತೇಕ ಎಲ್ಲರೂ ಬಾಡಿಗೆ ವಾಹನಗಳನ್ನ ಮಾಡಿಕೊಂಡು ಬರುವುದರಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆಗೆಂದು ಬರುತ್ತಾರೆ. ಆದರೆ ಏಕಾಏಕಿ ಚಿಕಿತ್ಸೆ ನೀಡದೇ ಆಸ್ಪತ್ರೆ ಬಂದ್ ಮಾಡಿದ್ದರಿಂದಾಗಿ ರೋಗಿಗಳು ಪರದಾಡುವಂತಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿದ್ದು ವ್ಯರ್ಥವಾಗುವಂತಾಗಿದೆ. ಆದ್ರೆ ಕೊನೆಯಲ್ಲಿ ರೋಗಿಗಳ ಹಿತದೃಷ್ಟಿಯಿಂದಾಗಿ ಸದ್ಯ ಬಂದಿರುವ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಒಟ್ಟಾರೆ ಕೊರೊನಾ ಆತಂಕದಿಂದಾಗಿ ಗ್ರಾಮಸ್ಥರು ಆಸ್ಪತ್ರೆಯನ್ನ ಬಂದ್ ಮಾಡಿಸಿದ್ದು ಇದರಿಂದ ಪಾರ್ಶ್ವವಾಯು ಪೀಡಿತರು ಚಿಕಿತ್ಸೆ ಪಡೆದುಕೊಳ್ಳಲು ಪರದಾಡುವಂತಾಗಿದ್ದಂತೂ ಸತ್ಯ.
First published:
March 17, 2020, 6:54 PM IST