ವಿಜಯಪುರ(ಮೇ 16): ಇದು ಕೊರೊನಾ ವಾರಿಯರ್ ತಾಯಿಯ ಹೃದಯ ವಿದ್ರಾವಕ ಸ್ಟೋರಿ. ಕೊರೊನಾದಿಂದ ಸೋಂಕಿತರಾದ ರೋಗಿಗಳ ಚಿಕಿತ್ಸೆ ನೀಡಿದ ಈ ತಾಯಿ ಈಗ 15 ತಿಂಗಳ ತಿಂಗಳ ಸ್ವಂತ ಮಗಳಿಗೆ ಆರೈಕೆ ಮಾಡುವ ಭಾಗ್ಯವಿಲ್ಲ. ಮೂರು ವರ್ಷದ ಮಗ ಹಾಗೂ ಎದೆ ಹಾಲು ಸೇವಿಸುವ 15 ತಿಂಗಳ ಮಗಳನ್ನು ಮನೆಯಲ್ಲಿಯೇ ಬಿಟ್ಟು ಕೊರೊನಾ ರೋಗಿಗಳ ಸೇವೆ ಮಾಡುತ್ತಿರುವ ಅಮ್ಮನ ವೇದನೆ ಎಂಥವರ ಕಣ್ಣಂಚಿನನಲ್ಲೂ ನೀರು ತರಿಸುತ್ತದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಕೊರೊನಾ ವಾರಿಯರ್ಸ್ ವೈಯಕ್ತಿಕ ಜೀವನವೂ ಅಷ್ಟೇ ಕಷ್ಟದಿಂದ ಕೂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಈ ಪ್ರಕರಣ.
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಸ್ಪಾಫ್ ನರ್ಸ್ ಆಗಿರುವ ಸವಿತಾರಾಣಿ ನಿಮಾದಾರ ಏ. 29 ರಿಂದ ಮೇ 4ರ ವರೆಗೆ ಕೊರೊನಾ ರೋಗಿಗಳ ಸೇವೆ ಮಾಡಿದ್ದು, ಈಗ 14 ದಿನಗಳ ಕಾಲ ನಿಯಮದಂತೆ ಖಾಸಗಿ ಹೋಟೇಲಿನಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ಸವಿತಾರಾಣಿ ನಿಮಾದಾರ ಅವರಿಗೆ ಪತಿ ಚಂದ್ರಶೇಖರ ಮತ್ತು 3 ವರ್ಷದ ಮಗ ಸಂಕಲ್ಪ ಸಾಯಿ ಮತ್ತು 15 ತಿಂಗಳ ಮಗಳು ಸಮೃದ್ಧಿ ಅವರನ್ನೊಳಗೊಂಡ ಸುಖಿ ಕುಟುಂಬವಿದೆ. ಆದರೆ, ಕೊರೊನಾದ ಈ ಸಂದರ್ಭದಲ್ಲಿ ಕರ್ತವ್ಯ ಪ್ರಜ್ಞೆ ಮೆರೆದ ಸವಿತಾರಾಣಿ ನಿಮಾದಾರ ಎಲ್ಲ ದಾದಿಯರಂತೆ ತಾವೂ ಕೊರೊನಾ ರೋಗಿಗಳ ಸೇವೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ವಿಶ್ವಪ್ರಸಿದ್ದ ಕಲ್ಲಿನರಥ ಸ್ಮಾರಕ ಬಳಿಯೇ ಕಾಮಗಾರಿ; ದೇವಾಲಯದ ಒಳಗೆ ಭಾರೀ ವಾಹನ ಒಳಗೆ ಬಿಟ್ಟಿದ್ದು ಯಾರು?
ಈಗ ಇವರ ಮಕ್ಕಳನ್ನು ಸವಿತಾರಾಣಿ ತಮ್ಮ ತಾಯಿಯ ಮನೆಯಲ್ಲಿ ಬಿಟ್ಟಿದ್ದಾರೆ. ಸವಿತಾರಾಣಿ ಮತ್ತು ಅವರ ತಾಯಿಯ ಮನೆ ಒಂದೇ ಏರಿಯಾದಲ್ಲಿವೆ. ಕಳೆದ 15 ದಿನಗಳಿಂದ ತಾಯಿಯನ್ನು ಕಾಣದೆ ಮಕ್ಕಳು ಕಂಗಾಲಾಗಿದ್ದಾರೆ. ಅದರಲ್ಲಿಯೂ ತಾಯಿಯ ಎದೆಹಾಲು ಸೇವಿಸುವ ಮಗಳು ಸಮೃದ್ಧಿ ಈಗ ಜ್ವರದಿಂದ ಬಳಲುತ್ತಿದ್ದು, ಗಂಜಿಯನ್ನೂ ಸೇವಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸವಿತಾರಾಣಿ ತಮ್ಮ ಪತಿ ಚಂದ್ರಶೇಖರ ಹಾಗೂ ಸಹೋದರ ವಿಜಯ ಅವರಿಗೆ ಹೇಳಿ ಮಕ್ಕಳನ್ನು ತಾವಿರುವ ಹೋಟೇಲ್ ಸಮೀಪ ಕರೆಯಿಸಿ ಮಗಳನ್ನು ದೂರದಿಂದಲೇ ನೋಡಿ ಕಣ್ತುಂಬಿಕೊಂಡು ಕಣ್ಣೀರು ಹಾಕಿದ್ದಾರೆ. ಕೊರೊನಾ ರೋಗಿಗಳ ಸೇವೆಯನ್ನು ಮಾಡಿರುವ ತನಗೆ ಈಗ ಮಗಳನ್ನು ಆರೈಕೆ ಮಾಡಲಾಗುತ್ತಿಲ್ಲ ಎಂದು ನೊಂದು ಅಲ್ಲಿಯೇ ಕಣ್ಣೀರು ಹಾಕಿದ್ದಾರೆ. ಮಗಳು ಹಾಗೂ ಮಗನನ್ನು ನೋಡಿ ಆನಂದಭಾಷ್ಪವನ್ನೂ ಹಾಕಿದ್ದಾರೆ. ಆಗಾಗ ಮೊಬೈಲ್ ಕರೆ ಮಾಡುವ ಮಗ, ಅಮ್ಮ ಮನೆಗೆ ಯಾಕೆ ಬರುತ್ತಿಲ್ಲ? ನಿನ್ನನ್ನು ಅಲ್ಲೇನು ಕಟ್ಟಿ ಹಾಕಿದ್ದಾರಾ? ನಾನು ಬಂದು ಅಲ್ಲಿರುವರಿಗೆ ಹೇಳಿ ನಿನ್ನನ್ನು ಅಲ್ಲಿಂದ ಬಿಡಿಸಿಕೊಂಡು ಬರಬೇಕಾ? ಎಂದು ಹೇಳುವ ಮಾತುಗಳು ಈ ತಾಯಿ ಕಣ್ಣೀರಿಡುವಂತೆ ಮಾಡಿವೆ.
ಆದರೆ, ಇಷ್ಟಪಟ್ಟು ಸೇರಿದ ಕೆಲಸ. ಇಂಥ ಕಷ್ಟದ ಕೆಲಸದಲ್ಲಿ ಸೇವೆ ಮಾಡಲೇಬೇಕು. ಅದು ತಮ್ಮ ಕರ್ತವ್ಯವೂ ಹೌದು ಎನ್ನುತ್ತಾರೆ ಸವಿತಾರಾಣಿ ನಿಮಾದಾರ. ಈಗ 14 ದಿನಗಳ ಕ್ವಾರಂಟೈನ್ನಲ್ಲಿರುವ ಸವಿತಾರಾಣಿ ನಿಮಾದಾರ ಅವರ ಕೊರೊನಾ ಮೊದಲ ಟೆಸ್ಟ್ ವರದಿ ನೆಗೆಟಿವ್ ಬಂದಿದ್ದು, ಮತ್ತೊಂದು ವರದಿ ನೆಗೆಟಿವ್ ಬಂದ ಮೇಲೆ ಮನೆಗೆ ತೆರಳಲಿದ್ದಾರೆ. ಆದರೆ, ಈಗ ಮಗಳು ಅನಾರೋಗ್ಯದಿಂದ ಇರುವುದು ಈ ತಾಯಿಯ ಕರುಳನ್ನು ಹಿಂಡುವಂತೆ ಮಾಡಿದೆ.
ಇದನ್ನೂ ಓದಿ: ಕೊರೋನಾ ಆರ್ಭಟದ ನಡುವೆ ಕಣ್ಣು ಕುಕ್ಕುತ್ತಿದೆ ಮಡ್ರಾಸ್ ಐ; ನಿರ್ಲಕ್ಷ್ಯ ಮಾಡಬೇಡಿ ಎನ್ನುತ್ತಾರೆ ವೈದ್ಯರು
ತಮ್ಮ ಕರ್ತವ್ಯದ ಬಗ್ಗೆ ಹೆಮ್ಮೆ ಪಡುತ್ತಿರುವ ಇವರು, ಎಲ್ಲರಂತೆ ನಾನೂ ಕೊರೊನಾ ವಾರಿಯರ್ ಆಗಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಅದು ನನ್ನ ಜವಾಬ್ದಾರಿಯೂ ಹೌದು. ನನ್ನಂತೆ ಸಾವಿರಾರು ವೈದ್ಯರು, ದಾದಿಯರು, ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಕೊರೊನಾ ವಿರುದ್ಧದ ಹೋರಾಟದಲ್ಲಿ ಪಾಲ್ಗೋಂಡಿದ್ದಾರೆ. ಆದರೆ, ಸದ್ಯಕ್ಕೆ ನನ್ನ ಮಗಳು ಜ್ವರದಿಂದ ಬಳಲುತ್ತಿರುವುದು ತಾಯಿಯಾದ ನನಗೆ ನೋವುಂಟು ಮಾಡಿದೆ. ಮಗಳ ಕಷ್ಟದ ಈ ಸಮಯದಲ್ಲಿ ಅವಳೊಂದಿಗೆ ಇರಬೇಕಿತ್ತು ಎಂದು ಅನಿಸಿದರೂ, ಈಗ ಕ್ವಾರಂಟೈನ್ನಲ್ಲಿರುವುದರಿಂದ ಆ ಅವಧಿ ಮುಗಿಯುವವರೆಗೆ ಕಾಯಲೇಬೇಕು ಎಂದು ತಾಯಿಯ ಜವಾಬ್ದಾರಿಯ ಜೊತೆಗೆ ಕರ್ತವ್ಯ ನಿಷ್ಠೆಯ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇಂಥ ಕೊರೊನಾ ವಾರಿಯರ್ಸ್ಗೊಂದು ಹ್ಯಾಟ್ಸಾಫ್ ಹೇಳಲೇಬೇಕು.
ವರದಿ: ಮಹೇಶ ವಿ. ಶಟಗಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ