ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ; ಭಾರತೀಯ ಷೇರುಪೇಟೆಯಲ್ಲಿ ಗೂಳಿ ನಾಗಾಲೋಟದ ಮುನ್ಸೂಚನೆ

ಪ್ರಮುಖ ಕಂಪನಿಗಳ ಉತ್ತಮ ಸಾಧನೆ, ಕೋವಿಡ್–19ಕ್ಕೆ ಲಸಿಕೆ ಲಭ್ಯವಾಗುವ ನಿರೀಕ್ಷೆ ಮತ್ತು ಅರ್ಥ ವ್ಯವಸ್ಥೆಯ ಚೇತರಿಕೆಯ ಕಾರಣಗಳಿಂದ ಮಾರುಕಟ್ಟೆಯಲ್ಲಿ ಉತ್ಸಾಹ ಕಂಡು ಬಂದಿದೆ.

ಸೆನ್ಸೆಕ್ಸ್

ಸೆನ್ಸೆಕ್ಸ್

 • Share this:
  ಕೊರೋನಾದಿಂದಾಗಿ ತಲ್ಲಣಕ್ಕೆ ಕಾರಣವಾಗಿದ್ದ ಷೇರುಪೇಟೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆದಿವೆ. ಭಾರತೀಯ ಷೇರುಪೇಟೆಯ ಸೂಚ್ಯಂಕಗಳು ಸತತ ಆರನೇ ವಾರವೂ ಏರಿಕೆ ಕಂಡಿವೆ. 38,128 ಅಂಶಗಳೊಂದಿಗೆ ಸೆನ್ಸೆಕ್ಸ್ ವಹಿವಾಟು ಕೊನೆಗೊಳಿಸಿದೆ. ವಾರದ ಅವಧಿಯಲ್ಲಿ ಶೇಕಡ 3 ರಷ್ಟು ಗಳಿಕೆ ಕಂಡಿದೆ. 11,194 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2.6ರಷ್ಟು ಏರಿಕೆ ದಾಖಲಿಸಿದೆ. ಇನ್ನು ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 1.4 ರಷ್ಟು ಮತ್ತು ಶೇ 1.2 ರಷ್ಟು ಜಿಗಿತ ಕಂಡಿವೆ.

  ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬರುತ್ತಿರುವ ಸಕಾರಾತ್ಮಕ ವಾತಾವರಣ ಪರಿಣಾಮ ಭಾರತೀಯ ಷೇರುಮಾರುಕಟ್ಟೆಯ ಮೇಲೂ ಬೀರಿದೆ. ಪ್ರಮುಖ ಕಂಪನಿಗಳ ಉತ್ತಮ ಸಾಧನೆ, ಕೋವಿಡ್–19ಕ್ಕೆ ಲಸಿಕೆ ಲಭ್ಯವಾಗುವ ನಿರೀಕ್ಷೆ ಮತ್ತು ಅರ್ಥ ವ್ಯವಸ್ಥೆಯ ಚೇತರಿಕೆಯ ಕಾರಣಗಳಿಂದ ಮಾರುಕಟ್ಟೆಯಲ್ಲಿ ಉತ್ಸಾಹ ಕಂಡು ಬಂದಿದೆ.

  ಹಿಂದೂಸ್ಥಾನ್ ಯುನಿಲಿವರ್, ಬಜಾಜ್ ಆಟೋ, ಏಷಿಯನ್ ಪೇಂಟ್ಸ್ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಮಾರುಕಟ್ಟೆ ತಜ್ಞರ ಲೆಕ್ಕಾಚಾರ ಮೀರಿ ಆಶಾದಾಯಕವಾಗಿ ಏರುಗತಿ ಕಂಡಿವೆ.

  ವಲಯವಾರು ಪ್ರಗತಿಯಲ್ಲಿ ನಿಫ್ಟಿ ತೈಲೋತ್ಪನ್ನ (ಎನರ್ಜಿ) ಸೂಚ್ಯಂಕವು ಶೇ 6ರಷ್ಟು ಗಳಿಕೆ ಕಂಡಿದೆ. ಐ.ಟಿ. ಸೂಚ್ಯಂಕ ಶೇ 2.8ರಷ್ಟು ಹೆಚ್ಚಳವಾಗಿದೆ. ಆದರೆ, ನಿಫ್ಟಿ ಫಾರ್ಮಾ ಸೂಚ್ಯಂಕ ಶೇ 2.2ರಷ್ಟು ಕುಸಿತ ಕಂಡಿದೆ. ಒಟ್ಟಾರೆ ಷೇರು ಪೇಟೆಯಲ್ಲಿ ಗೂಳಿಯ ನಾಗಾಲೋಟ ಆರಂಭಗೊಳ್ಳುವ ಲಕ್ಷಣಗಳು ಕಾಣಿಸಲು ಆರಂಭಿಸಿವೆ.

  ಇದನ್ನೂ ಓದಿ :  ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದು ಅವಮಾನಕಾರಿ ಕ್ರಮ: ಒಮರ್ ಅಬ್ದುಲ್ಲಾ

  ಸೆನ್ಸೆಕ್ಸ್–500ರಲ್ಲಿರುವ ಸುಮಾರು 33 ಕಂಪನಿಗಳ ಷೇರುಗಳು ಶೇ 10ರಷ್ಟರಿಂದ ಶೇ 30ರಷ್ಟು ಜಿಗಿದಿವೆ. ಟೈಡೆಂಟ್, ಫೆಡರಲ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಐಷರ್ ಮೋಟರ್ಸ್, ಗ್ರ್ಯಾನೂಯಲ್ಸ್ ಇಂಡಿಯಾ, ಎಂಫಸಿಸ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪ್ರಮುಖ ಕಂಪನಿಗಳಾಗಿವೆ. ಯೆಸ್ ಬ್ಯಾಂಕ್ ಶೇ 31, ಫ್ಯೂಚರ್ ರಿಟೇಲ್ ಶೇ 31, ಸ್ಟೆರಿಲೈಟ್ ಟೆಕ್ ಶೇ 12ರಷ್ಟು ಕುಸಿದಿವೆ. ನಿಫ್ಟಿಯಲ್ಲಿ ರಿಲಯನ್ಸ್ ಶೇ 12, ಪವರ್ ಗ್ರಿಡ್ ಶೇ 11, ಐಷರ್ ಮೋಟರ್ಸ್ ಶೇ 10.5, ಎಚ್‌ಸಿಎಲ್ ಶೇ 9, ಟೆಕ್ ಮಹೀಂದ್ರ ಶೇ 9 ಮತ್ತು ಐಸಿಐಸಿಐ ಬ್ಯಾಂಕ್ ಶೇ 8ರಷ್ಟು ಹೆಚ್ಚಳ ಕಂಡಿವೆ.

  ಹಿಂದೂಸ್ಥಾನ್ ಯುನಿಲಿವರ್ ಶೇ 5, ಶ್ರೀ ಸಿಮೆಂಟ್ ಶೇ 4 , ಜೀ ಎಂಟರ್‌ಟೇನ್​ಮೆಂಟ್ ಶೇ 3.7, ಸಿಪ್ಲಾ ಶೇ 3.7, ಹಿಂಡಾಲ್ಕೋ ಶೇ 3.7ರಷ್ಟು ಕುಸಿದಿವೆ.
  Published by:G Hareeshkumar
  First published: