ಕಲಬುರ್ಗಿ(ಏ.28): ಕಲಬುರ್ಗಿಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಡುವೆ ಕಲ್ಬುರ್ಗಿ ಜಿಲ್ಲಾಧಿಕಾರಿ ಬಿ ಶರತ್ರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ಅದಾದ ಕೆಲವೇ ಗಂಟೆಗಳಲ್ಲಿ ಆದೇಶವನ್ನು ಹಿಂಪಡೆದಿದೆ.
ಕಲಬುರ್ಗಿಯ ಜಿಲ್ಲಾಧಿಕಾರಿ ಬಿ ಶರತ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿ ಆದೇಶ ಹೊರಡಿಸಲಾಗಿತ್ತು. ಇವರ ಜಾಗಕ್ಕೆ ಸುರಾಲ್ಕರ್ ವಿಕಾಸ್ ಕಿಶೋರ್ ಎಂಬುವರನ್ನು ನೇಮಿಸಲಾಗಿತ್ತು. ಇದಕ್ಕೆ ವ್ಯಾಪಕ ಠೀಕೆಗಳು ವ್ಯಕ್ತವಾಗಿದ್ದವು. ಕೊರೋನಾ ಅಟ್ಟಹಾಸ ಹೆಚ್ಚಾಗಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ವರ್ಗಾವಣೆ ಬೇಕಿತ್ತಾ ಎಂದು ಕಾಂಗ್ರೆಸ್ ನಾಯಕರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತಕ್ಷಣ ವರ್ಗಾವಣೆ ಆದೇಶವನ್ನು ರದ್ದುಪಡಿಸಲಾಗಿದೆ.
ಇದುವರೆಗೂ ಕಲಬುರ್ಗಿಯಲ್ಲಿ 33 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಈ ಜಿಲ್ಲೆಯನ್ನು ರೆಡ್ ಜೋನ್ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಕರ್ನಾಟಕದಲ್ಲೇ ಕೊರೋನಾಗೆ ಬಲಿಯಾದ ವ್ಯಕ್ತಿ ಕಲಬುರ್ಗಿಗೆ ಸೇರಿದ್ದರು. ಈ ಸೋಮವಾರವಷ್ಟೇ ಮತ್ತೋರ್ವ ವ್ಯಕ್ತಿಗೆ ಕೋವಿಡ್-19ಗೆ ಬಲಿಯಾಗಿದ್ದು, ಈಗ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 5ಕ್ಕೇರಿದೆ.
ನಮ್ಮಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿದೆ. ಇಲ್ಲಿ ಕೊರೋನಾ ವೈರಸ್ ತಹಬದಿಗೆ ಬರುತ್ತಿಲ್ಲ. ನಾವು ಹೇಳಿದ ಮಾತನ್ನು ಜಿಲ್ಲಾಧಿಕಾರಿ ಬಿ ಶರತ್ ಕೇಳುತ್ತಿಲ್ಲ. ಹಾಗಾಗಿ ಇವರನ್ನು ಎತ್ತಂಗಡಿ ಮಾಡಿ ಎಂದು ಸಂಸದ ಉಮೇಶ್ ಜಾಧವ್ ಮತ್ತು ಶಾಸಕ ದತ್ತಾತ್ರೇಯ ಪಾಟೀಲ್ ಸಿಎಂ ಬಳಿ ಪಟ್ಟು ಹಿಡಿದಿದ್ದರು. ಈ ಬೆನ್ನಲ್ಲೇ ಹೀಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿ ಬಿ ಶರತ್ರನ್ನು ವರ್ಗಾವಣೆ ಮಾಡಲಾಗಿತ್ತು.
ಇದನ್ನೂ ಓದಿ: ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಕೇಂದ್ರದಿಂದ ಸಿಹಿಸುದ್ದಿ; 2 ಸಾವಿರ ವಿಶೇಷ ಭತ್ಯೆ ಘೋಷಣೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ