ಬೆಂಗಳೂರು(ಮಾ.24): ಕೊರೋನಾ ಎದುರಿಸಲು ರಾಜ್ಯ ಸರ್ಕಾರ ಸನ್ನದ್ದವಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ. ಇಂದು ವಿಧಾನ ಪರಿಷತ್ ಕಲಾಪದಲ್ಲಿ ವಿರೋಧ ಪಕ್ಷದ ನಾಯಕರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಸಚಿವ ಶ್ರೀರಾಮುಲು, ಕೊರೋನಾ ವಿರುದ್ಧ ಹೋರಾಟಕ್ಕೆ ರಾಜ್ಯ ಸರ್ಕಾರ ಸಿದ್ದವಿದೆ. ಅದಕ್ಕಾಗಿ ಈಗಾಗಲೇ 200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ 186 ಕೋಟಿ ರೂ. ಹಣ ಬಂದಿದೆ ಎಂದರು.
ಇನ್ನು, ಇಡೀ ರಾಜ್ಯದಲ್ಲಿ ಕೊರೋನಾ ಪೀಡಿತರಿಗಾಗಿ 2 ಸಾವಿರ ಬೆಡ್ ಮೀಸಲಿಡಲಾಗಿದೆ. 10 ಸಾವಿರ ಜನಕ್ಕೆ ಕೊರೋನಾ ಬಂದರೂ ಅದನ್ನು ನಿಯಂತ್ರಿಸಲು ಬೇಕಾದಷ್ಟು ಸಾಮರ್ಥ್ಯ ಹೊಂದಿರುವ ಕೇಂದ್ರಗಳನ್ನು ತೆರೆದಿದ್ದೇವೆ. ಹೋಮ್ ಕ್ವಾರಂಟೇನ್ ಮೇಲೂ ನಿಗಾ ವಹಿಸಿದ್ದೇವೆ. 1 ಲಕ್ಷ ಜನರಿಗೆ ಸಮಸ್ಯೆ ಆಗದ ರೀತಿಯಲ್ಲಿ ಮುಂಜಾಗೃತ ಕ್ರಮ ತೆಗೆದುಕೊಂಡಿದ್ದೇವೆ. ಹಾಗಾಗಿ ಯಾರು ಕೊರೋನಾಗೆ ಹೆದರಬೇಕಿಲ್ಲ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ವಿರುದ್ಧ ಸೆಣಸಾಡಲು ಖಾಸಗಿ ಆಸ್ಪತ್ರೆಗಳು ನಮ್ಮೊಂದಿಗೆ ಕೈಜೋಡಿಸಲಿದ್ದಾರೆ. ಹಾಗಾಗಿ ಶೇ.30ರಷ್ಟು ವೆಂಟಿಲೇಟರ್ಗಳನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ. ಒಂದು ಸಾವಿರ ವೆಂಟಿಲೇಟರ್ಗಳನ್ನು ಈಗಾಗಲೇ ಆರ್ಡರ್ ಮಾಡಿದ್ದೇವೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 700 ವೆಂಟಿಲೇಟರ್ಗಳು ಇವೆ. ಇನ್ನೊಂದಷ್ಟು ಆರ್ಡರ್ ಮಾಡಿದ್ದೇವೆ ಎಂದರು ಸಚಿವ ಶ್ರೀರಾಮುಲು.
ಇದನ್ನೂ ಓದಿ: ಭಟ್ಕಳ, ಬೆಂಗಳೂರು, ಮಂಗಳೂರು, ಚಿಕ್ಕಬಳ್ಳಾಪುರದಲ್ಲಿ 5 ಕೊರೋನಾ ಕೇಸ್ ಪತ್ತೆ; ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆ
ಸೋಮವಾರ ಮಧ್ಯಾಹ್ನದಿಂದ ಇಂದು ಮಧ್ಯಾಹ್ನದೊಳಗೆ ಕರ್ನಾಟಕದ ಐವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.
ಈಗಾಗಲೇ ಕಲಬುರ್ಗಿಯಲ್ಲಿ ವೃದ್ಧರೊಬ್ಬರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಭಾನುವಾರದಿಂದ ಸೋಮವಾರದವರೆಗೆ 7 ಹೊಸ ಸೋಂಕಿತ ಪ್ರಕರಣಗಳು ದಾಖಲಾಗಿದ್ದವು. ದುಬೈನಿಂದ ಬೆಂಗಳೂರಿಗೆ ವಾಪಸ್ಸಾಗಿದ್ದ ಕೇರಳ ಮೂಲದ 46 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು. ದುಬೈನಿಂದ ವಾಪಸ್ಸಾಗಿದ್ದ 38 ವರ್ಷದ ವ್ಯಕ್ತಿಯಲ್ಲೂ ಕೊರೊನಾ ವೈರಸ್ ಸೋಂಕಿರುವುದು ದೃಢಪಟ್ಟಿದ್ದು, ಬೆಂಗಳೂರಿನಲ್ಲೇ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರೊಂದರಲ್ಲೇ ಒಟ್ಟು 24 ಪ್ರಕರಣಗಳು ಪತ್ತೆಯಾಗಿದೆ. ಸೋಂಕು ತಗುಲಿದ್ದ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಕಲಬುರ್ಗಿಯಲ್ಲಿ 3, ಕೊಡಗಿನಲ್ಲಿ 1, ಚಿಕ್ಕಬಳ್ಳಾಪುರದಲ್ಲಿ 3, ಮೈಸೂರಿನಲ್ಲಿ 2, ಧಾರವಾಡದಲ್ಲಿ 1 ಮತ್ತು ದಕ್ಷಿಣ ಕನ್ನಡದಲ್ಲಿ 1, ಉತ್ತರ ಕನ್ನಡದಲ್ಲಿ 2 ಪ್ರಕರಣ ಪತ್ತೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ