ಕೊರೋನಾ ಎದುರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ಎಸ್ ​ಆರ್​ ಪಾಟೀಲ್

ಕೇರಳ ರಾಜ್ಯದಲ್ಲಿ ಕೊರೋನಾ ಎದುರಿಸಲು 20 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ  200 ಕೋಟಿ ಮಾತ್ರ ಹಣ ಕೊರೋನಾಗೆ ಮೀಸಲಿಡಲಾಗಿದೆ. ಈ ಹಣ ಯಾವುದಕ್ಕೆ ಸಾಕಾಗುತ್ತದೆ

ಎಸ್.ಆರ್. ಪಾಟೀಲ್

ಎಸ್.ಆರ್. ಪಾಟೀಲ್

  • Share this:
ಬೆಂಗಳೂರು(ಮಾ. 24): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಕೊರೋನಾ ಎದುರಿಸಲು ಸರ್ಕಾರ ಸಂಪೂರ್ಣವಾಗಿ ವಿಫಲ ಆಗಿದೆ. ಅಗತ್ಯ ಪ್ರಮಾಣದ ವೆಂಟಿಲೇಟರ್ ರಾಜ್ಯದಲ್ಲಿ ಇಲ್ಲ. ತಪಾಸಣೆಗೆ ಕಠಿಣ ಕ್ರಮವನ್ನು ಮಾಡುತ್ತಿಲ್ಲ ಎಂದು ಸರ್ಕಾರದ ವಿರುದ್ದ ವಿಧಾನಪರಿಷತ್​ ವಿಪಕ್ಷ ನಾಯಕ ಎಸ್ ಆರ್​ ಪಾಟೀಲ್​​​ ಕಿಡಿಕಾರಿದ್ದಾರೆ.

ವಿಧಾನ ಪರಿಷತ್​ನಲ್ಲಿ ಮಾತನಾಡಿದ ಅವರು, ಕೇರಳ ರಾಜ್ಯದಲ್ಲಿ ಕೊರೋನಾ ಎದುರಿಸಲು 20 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ  200 ಕೋಟಿ ಮಾತ್ರ ಹಣ ಕೊರೋನಾಗೆ ಮೀಸಲಿಡಲಾಗಿದೆ. ಈ ಹಣ ಯಾವುದಕ್ಕೆ ಸಾಕಾಗುತ್ತದೆ. ಕೊರೋನಾ ಎದುರಿಸಲು ವಿಶೇಷ ಪ್ಯಾಕೇಜ್​​​ ಘೋಷಣೆ ಮಾಡಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಸರ್ಕಾರವನ್ನು ಎಸ್ ಆರ್​ ಪಾಟೀಲ್ ಒತ್ತಾಯಿಸಿದರು.

ಎಸ್​ ಆರ್​ ಪಾಟೀಲ್ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಬಿ ಶ್ರೀರಾಮುಲು, ಇಡೀ ರಾಜ್ಯದಲ್ಲಿ 2,000 ಬೆಡ್​​ಗಳನ್ನು ಮೀಸಲಿಡಲಾಗಿದೆ. 10 ಸಾವಿರ ಮಂದಿ ಬಂದರೂ ಅದನ್ನು ನಿಯಂತ್ರಿಸುವ ಸಾಮರ್ಥ್ಯದ ಕೇಂದ್ರವನ್ನು ತೆರೆಯಲಾಗಿದೆ. ಹೋಮ್ ಕ್ವಾರಂಟೇನ್ ಮೇಲೆ ನಿಗಾ ವಹಿಸಿದ್ದೇವೆ. 1 ಲಕ್ಷ ಜನರಿಗೆ ಸಮಸ್ಯೆ ಆಗದ ರೀತಿಯಲ್ಲಿ ಮುಂಜಾಗ್ರತಾ ಕ್ರಮ ವಹಿಸಿದ್ದೇವೆ. ಖಾಸಗಿ ಆಸ್ಪತ್ರೆಗಳಿಂದ ವೆಂಟಿಲೇಟರ್ ಪಡೆಯಲಾಗುತ್ತಿದೆ.  1 ಸಾವಿರ ವೆಂಟಿಲೇಟರ್​ಗೆ ಈಗಾಗಲೇ ಆರ್ಡರ್ ಮಾಡಲಾಗಿದೆ ಎಂದು ತಿಳಿಸಿದರು.

ಇದಕ್ಕೆ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿ, ಇಷ್ಟು ಸಾಕಾಗದು, 17 ಸಾವಿರ ನಿಗಾ ಘಟಕ ಹಾಗೂ 12 ಸಾವಿರ ವೆಂಟಿಲೇಟರ್ ತರಿಸಿ ಎಂದು ಒತ್ತಾಯ ಮಾಡಿದರು. ಇವರ ಜೊತೆಗೆ ಪರಿಷತ್​ ಸದಸ್ಯ ಸಿಎಂ ಇಬ್ರಾಹಿಂ, ರಾಜ್ಯದ ಯಾವ ಯಾವ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ವಾರ್ಡ್​​ಗಳನ್ನು ತೆಗೆಯಲಾಗಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡಿ ಎಂದು ಸಚಿವರಿಗೆ ಕೇಳಿದರು.

ಕೊರೋನಾ ಎದುರಿಸಲು ಯಾವುದೇ ಹಣಕಾಸಿನ ತೊಂದರೆ ಇಲ್ಲ. ರಾಜ್ಯ ಸರಕಾರ 200 ಕೋಟಿ ಕೊರೋನಾಗೆ ಮೀಸಲು ಇಟ್ಟಿದೆ. ಕೇಂದ್ರ ಸರಕಾರ 186 ಕೋಟಿ ರೂಪಾಯಿ ನೀಡಿದೆ. ಹಾಗಾಗಿ ರಾಜ್ಯದಲ್ಲಿ ಕೊರೋನಾ ಎದುರಿಸಲು ರಾಜ್ಯ ಸರ್ಕಾರ ಸನ್ನದ್ದವಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು. ಸಚಿವರ ಉತ್ತರಕ್ಕೆ ಪರಿಷತ್​ನಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ನಾಯಕರ ನಡುವೆ ಗದ್ದಲ ಏರ್ಪಟ್ಟಿತು.

ಇದನ್ನೂ ಓದಿ : ಲಾಕ್‌ಡೌನ್ ಹಿನ್ನೆಲೆ; ಬೆಂಗಳೂರಿನಲ್ಲಿ ರಸ್ತೆಗಿಳಿದ ಮೂವರು ಅರೆಸ್ಟ್‌, ಮನೆಯಿಂದ ಹೊರಬಂದರೆ ನಿಮಗೂ ಅದೇ ಗತಿ ಹುಷಾರ್‌!

ಪ್ರತಿಪಕ್ಷದ ಪ್ರಶ್ನೆಗಳಿಗೆ ಆರೋಗ್ಯ ಸಚಿವ ಶ್ರೀರಾಮುಲು ತಬ್ಬಿಬ್ಬಾದರು. ಕೊನೆಗೆ ಉತ್ತರ ನೀಡಿದ ಡಿಸಿಎಂ ಅಶ್ವಥ್ ನಾರಾಯಣ, ಪೀವರ್ ಕ್ಲಿನಿಕ್ ಗಳನ್ನು ತೆರೆಯಲಾಗುತ್ತಿದೆ. 20 ಸಾವಿರ ಹೊಟೇಲ್ ರೂಂ ತೆಗೆದುಕೊಳ್ಳಲು ಸರ್ಕಾರ ನಿರ್ಧಾರ ಮಾಡಲಾಗಿದೆ. ಕೊರೋನಾಗೆ ಮೆಡಿಸನ್ ಇಲ್ಲ. ಔಷಧಿ ಕಂಡು ಹಿಡಿಯುವ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ವೆಂಟಿಲೇಟರ್ ಅಗತ್ಯಬಿದ್ದ ಕೊರೋನಾ ಸೋಂಕಿತರು ಯಾರೂ ಇಲ್ಲ. ಯಾರಿಗೂ ವೆಂಟಿಲೇಟರ್ ಹಾಕುವ ಅಗತ್ಯ ಈವರೆಗೆ ಬಂದಿಲ್ಲ. ಸೋಂಕಿತರು ಸಾಮಾನ್ಯ ಚಿಕಿತ್ಸೆ ಪಡೆದು ಗುಣವಾಗುತ್ತಾರೆ ಎಂದರು.

 
First published: