ಬೆಂಗಳೂರು(ಜುಲೈ. 08): ಕೊರೋನಾದ ಸಂಕಷ್ಟದ ಸಮಯದಲ್ಲೂ ತಮ್ಮ ಸಮಸ್ಯೆಗೆ ಸ್ಪಂದಿಸದ ಸರ್ಕಾರ ಮತ್ತು ಸಾರಿಗೆ ಇಲಾಖೆಯ ಧೋರಣೆಯನ್ನು ಖಂಡಿಸಿ ನಾಳೆಯಿಂದ ಕೆಎಸ್ ಆರ್ ಟಿಸಿ ಸೇರಿದಂತೆ ನಾಲ್ಕು ನಿಗಮಗಳ ವ್ಯಾಪ್ತಿಯಲ್ಲಿನ ಬಸ್ ಬಸ್ ನಿಲ್ದಾಣಗಳಲ್ಲಿ ವ್ಯಾಪಾರ ಮಾಡುವ ಸ್ಟಾಲ್ ವ್ಯಾಪಾರಿಗಳು ಹಾಗೂ ಹೊಟೇಲ್ ಮಾಲೀಕರು ವ್ಯಾಪಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.
ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆಯ ವ್ಯಾಪ್ತಿಯ ಬಸ್ ನಿಲ್ದಾಣಗಳಲ್ಲಿ ಹೊಟೇಲ್ ಗಳನ್ನು ನಡೆಸುತ್ತಿರುವ ಮಾಲೀಕರು ಹಾಗೂ ಸ್ಟಾಲ್ ಗಳನ್ನು ಇಟ್ಟುಕೊಂಡು ವ್ಯಾಪಾರ ನಡೆ ಸುತ್ತಿರುವ ವ್ಯಾಪಾರಿಗಳು ನಾಳೆಯಿಂದ ಅನಿರ್ದಿಷ್ಟಾವಧಿ ವರೆಗೆ ತಮ್ಮ ವಹಿವಾಟನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದರಿಂದ ಗ್ರಾಹಕರಿಗೆ ಸರ್ವೇ ಸಾಮಾನ್ಯವಾಗಿ ತೊಂದರೆಯಾಗಲಿದೆ.
ಕೊರೋನಾ ಲಾಕ್ಡೌನ್ ಇದ್ದಂಥ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಬುಡ ಮೇಲಾದಾಗ ಸ್ಟಾಲ್ ಮಾಲೀಕರು ಮತ್ತು ಹೊಟೇಲ್ ಮಾಲೀಕರಿಗೆ ಮಾಲೀಕರ ಬಾಡಿಗೆಯನ್ನು ಮನ್ನಾ ಮಾಡಲಾಗಿತ್ತು. ಲಾಕ್ ಡೌನ್ ಸಡಲಿಕೆಯಾದ ನಂತರದಲ್ಲೂ ಬಸ್ ನಿಲ್ದಾಣಗಳಿಗೆ ಪ್ರಯಾಣಿಕರು ಬಾರದ ಹಿನ್ನೆಲೆಯಲ್ಲಿ ಸಾಕಷ್ಟು ತೊಂದರೆ ಉಂಟಾಗಿತ್ತು.
ಇಂಥ ಸಂದರ್ಭದಲ್ಲಿ ತಮ್ಮ ನೆರವಿಗೆ ಬರಬೇಕು. ಬಾಡಿಗೆಯನ್ನು ಮನ್ನಾ ಮಾಡಬೇಕು ಅಥವಾ ಮಾನವೀಯ ನೆಲೆಗಟ್ಟಿನಲ್ಲಿ ಇಂತಿಷ್ಟು ಎಂದು ನಿಗಧಿಪಡಿಸಬೇಕು. ಕಾಲಾವಕಾಶ ಕೊಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗಿತ್ತು. ಆದರೆ, ವ್ಯಾಪಾರಿಗಳು ಇಟ್ಟು ಬೇಡಿಕೆಗೆ ನಿಗಮದ ಅಧಿಕಾರಿಗಳು, ಈಗಾಗಲೇ ಸಂಕಷ್ಟದಲ್ಲಿರುವುದರಿಂದ ತಾವು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವುದು ಸಾಧ್ಯವಿಲ್ಲ ಹಾಗಾಗಿ ನಿಗಧಿತ ಬಾಡಿಗೆಯನ್ನು ಪಾವತಿಸಲೇಬೇಕು ಎನ್ನುವ ಮಾತನ್ನು ಹೇಳಿದರು.
ಇದರಿಂದ ಕೆಂಡಾಮಂಡಲವಾಗಿರುವ ಎಲ್ಲಾ ವ್ಯಾಪಾರಿಗಳು ಮತ್ತು ಹೊಟೇಲ್ ಮಾಲೀಕರು ನಾಳೆಯಿಂದ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವಂಥ ನಿರ್ಧಾರಕ್ಕೆ ಬಂದಿದ್ದಾರೆ. ಸ್ಟಾಲ್ ಗಳ ವ್ಯಾಪಾರಿಗಳು ಹಾಗೂ ಹೊಟೇಲ್ ಮಾಲೀಕರು ತಮ್ಮ ವಹಿವಾಟನ್ನು ಅನಿರ್ದಿಷ್ಟಾವಧಿಯವರೆಗೆ ಸ್ಥಗಿತಗೊಳಿಸುತ್ತಿರುವುದರಿಂದ ಬಸ್ ನಿಲ್ದಾಣಗಳಿಗೆ ಬರುವ ಅಲ್ಪಸ್ವಲ್ಪ ಪ್ರಯಾಣಿಕರಿಗೂ ತೊಂದರೆಯಾಗಲಿದೆ.
ಪ್ರಯಾಣಿಕರು ಕುಡಿಯಲು ಮತ್ತು ಆಹಾರ ಸೇವಿಸಲು ಸಾಕಷ್ಟು ತೊಂದರೆಯನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿವೆ. ಆದರೆ, ನಮ್ಮ ಸಮಸ್ಯೆ ಹಾಗೂ ನೋವನ್ನೂ ಪ್ರಯಾಣಿಕರು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ ದಯವಿಟ್ಟು ಕ್ಷಮೆಯಿರಲಿ ಎಂದು ಮಳಿಗೆಗಳ ಮುಂದೆ ಬ್ಯಾನರ್ ಹಾಕಿದ್ದಾರೆ ವ್ಯಾಪಾರಿಗಳು.
ಈಗಾಗಲೇ ಸ್ಟಾಲ್ ಗಳ ವ್ಯಾಪಾರಿಗಳು ಹಾಗೂ ಹೊಟೇಲ್ ಮಾಲೀಕರು ಸಾರಿಗೆ ಸಚಿವ ಸವದಿ ಅವರಿಗೆ ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ. ಹಾಗೆಯೇ ನಾಲ್ಕು ನಿಗಮಗಳ ಎಂಡಿಗಳ ಗಮನಕ್ಕೂ ಕೂಡ ತಮ್ಮ ಸಮಸ್ಯೆ ತಂದಿದ್ದಾರೆ.
ಯಾವುದೇ ರೀತಿಯಲ್ಲೂ ತಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಆದ್ದರಿಂದ ಇಂತಹ ಒಂದು ಅನಿವಾರ್ಯ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು ಎಂದು ನ್ಯೂಸ್ 18 ಕನ್ನಡಕ್ಕೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಸ್ಟಾಲ್ ವ್ಯಾಪಾರಿ ಮೋಹನ್ ತಿಳಿಸಿದ್ದಾರೆ.
ಇದನ್ನೂ ಓದಿ : ರಾಜ್ಯದ ಹಲವು ಕಾರಾಗೃಹಗಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ; ಶಿವಮೊಗ್ಗ ಕಾರಾಗೃಹ ಮಾತ್ರ ಕೊರೋನಾ ಮುಕ್ತ
ಲಾಕ್ ಡೌನ್ ಸಂದರ್ಭದಲ್ಲಿ ತೋರಿದ ಔದಾರ್ಯವನ್ನೇ ಲಾಕ್ ಡೌನ್ ಸಡಿಲಿಕೆ ಯಾದ ನಂತರವೂ ವ್ಯಾಪಾರವಿಲ್ಲದೆ ಕಂಗಾಲಾಗಿರುವ ವ್ಯಾಪಾರಿಗಳ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ಲಾಸ್ ಮಾಡಿಕೊಂಡಂತೂ ವ್ಯಾಪಾರ ಮಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ ತಮ್ಮ ಕಷ್ಟಕ್ಕೆ ಸ್ಪಂದಿಸುವಂತ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲೇಬೇಕು. ಅಲ್ಲಿವರೆಗೂ ವ್ಯಾಪಾರ ಪುನಾರಂಭಿಸುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ಕದಂಬ ಹೊಟೇಲ್ ಮಾಲೀಕರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ