SSLC Exam Date – ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕದ ಬಗ್ಗೆ ಸೋಮವಾರ ನಿರ್ಧಾರ: ಶಿಕ್ಷಣ ಸಚಿವ

Suresh Kumar - ತಜ್ಞರ ಜೊತೆ ಹಾಗೂ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರಗಳ ಪರಿಷತ್ ಸದಸ್ಯರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಪರೀಕ್ಷಾ ದಿನಾಂಕಗಳನ್ನು ತಿಳಿಸಲಾಗುವುದು ಎಂದಿದ್ಧಾರೆ ಸುರೇಶ್ ಕುಮಾರ್.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚಾಮರಾಜನಗರ(ಮೇ 15): ಕೊರೋನಾ ಲಾಕ್​ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯದೇ ವಿದ್ಯಾರ್ಥಿಗಳು ವ್ಯಾಕುಲಗೊಂಡಿದ್ಧಾರೆ. ಲಾಕ್​ಡೌನ್ ಈಗಲೇ ಸಂಪೂರ್ಣ ಅಂತ್ಯಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಗೊಂದಲದಲ್ಲಿದ್ದಾರೆ. ಇವತ್ತು ಚಾಮರಾಜನಗದಲ್ಲಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ಎಸ್.ಎಸ್.ಎಲ್.ಸಿ. ಪರೀಕ್ಷೆ ದಿನಾಂಕದ ಬಗ್ಗೆ ಮೇ 18, ಸೋಮವಾರದಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

  ಕೊರೊನಾ ಪರಿಣಾಮದಿಂದ ಶಿಕ್ಷಣ ಕ್ಷೇತ್ರದ ಮೇಲೆ ತೊಂದರೆಯಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ತರಗತಿಗಳು ಹೇಗಿರಬೇಕು, ಬೋಧನೆ ಹೇಗಿರಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಈಗಾಗಲೇ ಬರಗೂರು ರಾಮಚಂದ್ರಪ್ಪ, ಎಲ್. ಹನುಮಂತಯ್ಯ, ಎಸ್.ಜಿ. ಸಿದ್ದರಾಮಯ್ಯ, ಬಿ.ಕೆ. ಚಂದ್ರಶೇಖರ್, ಬಿ.ಎಲ್. ಶಂಕರ್ ಸೇರಿದಂತೆ ನಾಡಿನ ಹಿರಿಯ ತಜ್ಷರ ಜೊತೆ ಚರ್ಚೆನಡೆಸಿ ಸಲಹೆ ಪಡೆದಿದ್ದೇನೆ. ಅಲ್ಲದೆ, ಶಿಕ್ಷಕರ ಕೇತ್ರ ಹಾಗೂ ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರ ಜೊತೆ ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಲಾಗುವುದು. ಈ ಎಲ್ಲ ಹಿನ್ನೆಲೆಯಲ್ಲಿ ಪರೀಕ್ಷಾ ದಿನಾಂಕದ ಬಗ್ಗೆ ಸೋಮವಾರ ಅಧಿಕಾರಿಗಳ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

  ಇದನ್ನೂ ಓದಿ: ಆಂಧ್ರ ಮೂಲದ ಕೊರೋನಾ ಸೋಂಕಿತ ಸತ್ತಿದ್ದು ಪ್ಲಾಸ್ಮಾ ಥೆರಪಿ ವೈಫಲ್ಯದಿಂದಲ್ಲ: ಸಚಿವ ಸುರೇಶ್ ಕುಮಾರ್

  ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಕಡ್ಡಾಯ ಮಾಡಲು ಹಾಗು ಸಾಮಾಜಿಕ ಅಂತರ ಕಾಪಾಡಲು ಪರೀಕ್ಷಾ ಕೊಠಡಿಗಳಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಕೂರಿಸಲು ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳ ಕಲಿಕೆಗೆ ಧಕ್ಕೆಯಾಗದಂತೆ ಪಠ್ಯಕ್ರಮಗಳಲ್ಲಿ ಕಡಿತ ಮಾಡುವ ಬಗ್ಗೆಯು ಚಿಂತನೆ ನಡೆಸಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

  ವರದಿ: ಎಸ್.ಎಂ. ನಂದೀಶ್

  First published: