ಬೆಂಗಳೂರು(ಮಾ.26): ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳನ್ನು ಗುಣಪಡಿಸಲು ಹಗಲು-ರಾತ್ರಿಯೆನ್ನದೇ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳನ್ನು ಮನೆ ಖಾಲಿ ಮಾಡುವಂತೆ ಒತ್ತಾಯಿಸುವ ಮನೆ ಮಾಲೀಕರ ವಿರುದ್ಧ ಕಠಿಣಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ಧಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೊರೋನಾ ಸೋಂಕಿತರ ಚಿತ್ಸೆಯಲ್ಲಿ ತೊಡಗಿರುವ ವೈದ್ಯರು ಮತ್ತು ಹೋಮ್ ಕ್ವಾರಂಟೀನ್ನಲ್ಲಿ ಇರುವವರನ್ನು ಮನೆ ಖಾಲಿ ಮಾಡುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗೆ ಕೊರೋನಾ ವಿರುದ್ಧ ಹೋರಾಡುತ್ತಿರುವವರ ಮನೆ ಖಾಲಿ ಮಾಡಲು ಮಾಲೀಕರು ಒತ್ತಾಯಿಸುವುದು ಅಮಾನವೀಯ. ಇದನ್ನು ಗಂಭೀರ ಸ್ವರೂಪದ ಅಪರಾಧ ಎಂದು ಪರಿಗಣಿಸಿ ಮನೆ ಮಾಲೀಕರ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನ್ ಮಾಡಿದ್ದಾರೆ.
ವೈದ್ಯಕೀಯ ಸಿಬ್ಬಂದಿಗಳನ್ನು ಮನೆ ಖಾಲಿ ಮಾಡುವಂತೆ ಮನೆ ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗಿ ಎಂದು ಸಚಿವ ಶ್ರೀರಾಮುಲು ಜಿಲ್ಲಾಧಿಕಾರಿಗಳು ಮತ್ತು ಪಾಲಿಕೆ ಆಯುಕ್ತರು, ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ.
ಕೊರೋನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ಆರೋಗ್ಯ ಇಲಾಖೆ ನೌಕರರನ್ನು ಮನೆ ಖಾಲಿ ಮಾಡಿ ಎಂದು ಮಾಲೀಕರು ಬಲವಂತ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಹೀಗೆ ಮಾಡುವುದು ಸಾರ್ವಜನಿಕ ಸೇವೆಯಲ್ಲಿರುವ ವೈದ್ಯಕೀಯ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದಾಗೇ. ಇಂತವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಲಿ ಎಂದು ನಿರ್ದೇಶನ ನೀಡಿದ್ಧಾರೆ.
ಜತೆಗೆ, ಪೊಲೀಸರು ಕೈಗೊಂಡ ಕ್ರಮಗಳ ಬಗ್ಗೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಿಂದ ವರದಿ ಪಡೆಯಲಾಗುವುದು. ಹಾಗಾಗಿ ಕಟ್ಟುನಿಟ್ಟಿನಿಂದ ಸರ್ಕಾರದ ಆದೇಶ ಪಾಲಿಸಬೇಕು ಎಂದು ಶ್ರೀರಾಮುಲು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕೊರೋನಾ ಹೆಸರಿನಲ್ಲಿ RSS ಕಾರ್ಯಕರ್ತರು ರಾಜಕೀಯ ಲಾಭ ಪಡೆದುಕೊಳ್ತಿದಾರೆ; ಡಿಕೆಶಿ ಆರೋಪ
ಕೊರೋನಾ ಶಂಕಿತರನ್ನು ತಪಾಸಣೆ ಮಾಡುವ ವೈದ್ಯರಿಗೆ ಕೂಡ ಕೊರೋನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈಗಾಗಲೇ ಹಲವು ವೈದ್ಯರಿಗೆ ಈ ಸೋಂಕು ತಗುಲಿದೆ. ಹಾಗಾಗಿ ಮನೆ ಮಾಲೀಕರು ತಮಗೂ ಈ ಸೋಂಕು ಬರಬಹುದು ಎಂದು ಭಾವಿಸಿ ಹೇಗೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಇನ್ನು, ವೈದ್ಯರಿಗೂ ಸಮಗ್ರವಾದ ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ ಮಾಡಬೇಕಿದೆ. ಅದಕ್ಕೆಂದಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ