ಕರವಸ್ತ್ರಕ್ಕೆ ನೀಲಗಿರಿ ತೈಲ ಹಾಕಿ ಮಾಸ್ಕ್​ನಂತೆ ಉಪಯೋಗಿಸಲು ಶ್ರೀರಾಮುಲು ಸಲಹೆ

ಕೊರೋನಾ ಸೋಂಕು ಹರಡುತ್ತಿರುವ ಈ ತುರ್ತು ಸಂದರ್ಭದಲ್ಲಿ ವೈದ್ಯರ ಸೇವೆ ಪ್ರಶಂಸನೀಯ. ಯುದ್ಧರಂಗದಲ್ಲಿ ಯೋಧರು ಹೋರಾಡುವ ರೀತಿ ವೈದ್ಯರು ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀರಾಮುಲು ಶ್ಲಾಘಿಸಿದರು.

ಸಚಿವ ಬಿ ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

  • Share this:
ಬೆಂಗಳೂರು(ಮಾ. 16): ಜಗತ್ತಿನೆಲ್ಲೆಡೆ ಆರ್ಭಟಿಸುತ್ತಿರುವ ಕೊರೋನಾ ವೈರಸ್ ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಬಲಿಪಡೆಯುವ ಕೆಲಸ ಪ್ರಾರಂಭಿಸಿದೆ. ಅನೇಕ ಕಡೆ ಸಮರೋಪಾದಿಯಲ್ಲಿ ಕೊರೊನಾ ತಡೆಗೆ ಪ್ರಯತ್ನಗಳು ನಡೆಯುತ್ತಿವೆ. ಕೊರೋನಾ ಸಂಭಾವ್ಯತೆ ಇಲ್ಲದ ಜನರೂ ಗಾಬರಿಯಿಂದ ಆಸ್ಪತ್ರೆಗೆ ಮುಗಿಬೀಳುತ್ತಿದ್ಧಾರೆ. ಮುಖಗವಚ ಅಥವಾ ಮಾಸ್ಕ್​ಗಳಿಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ. ಹೆಚ್ಚು ಸಂಗ್ರಹವಿಲ್ಲದ್ದರಿಂದ ಮಾಸ್ಕ್​ಗಳ ಬೆಲೆ ಗಗನಕ್ಕೇರಿದೆ. ಈ ಬಗ್ಗೆ ಇಂದು ವಿಧಾನಪರಿಷತ್​ನಲ್ಲಿ ಮಾತನಾಡಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಮಾಸ್ಕ್ ಅನ್ನು ಅಗತ್ಯ ಸ್ಥಿತಿಯಲ್ಲಿ ಮಾತ್ರ ಬಳಸುವಂತೆ ಜನರಿಗೆ ಕರೆ ನೀಡಿದ್ದಾರೆ.

ಕೊರೋನಾ ಬಗ್ಗೆ ಗಾಬರಿ ಪಡುವ ಅವಶ್ಯಕತೆ ಇಲ್ಲ. ಪ್ರಮುಖ ವಿಚಾರವೆಂದರೆ ಯಾರೂ ಕೂಡ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಯಾರು ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿರುವವರು ಮಾತ್ರ ಮಾಸ್ಕ್ ಧರಿಸಿದರೆ ಸಾಕು. ಎಲ್ಲರೂ ಮಾಸ್ಕ್ ಧರಿಸುವುದರಿಂದ ಉಳಿದವರು ಪ್ಯಾನಿಕ್ ಆಗುತ್ತಾರೆ ಎಂದು ಶ್ರೀರಾಮುಲು ಎಚ್ಚರಿಸಿದರು.

ಇದೇ ವೇಳೆ, ಶ್ರೀರಾಮುಲು ಅವರು ಮಾಸ್ಕ್​ಗೆ ಪರ್ಯಾಯವಾಗಿ ದೇಸೀ ಮಾಸ್ಕ್​ಗೆ ಸಲಹೆ ನೀಡಿದರು.

ಇದನ್ನೂ ಓದಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಕೊರೋನಾ ಬಂದಿಲ್ಲವೆಂದು ಎಸ್.ಆರ್. ಪಾಟೀಲ್ ನಿಟ್ಟುಸಿರು ಬಿಟ್ಟಿದ್ದು ಯಾಕೆ ಗೊತ್ತಾ?

ವೈದ್ಯಕೀಯ ಮಾಸ್ಕ್​ಗಳನ್ನೇ ಬಳಸಬೇಕು ಎಂದೇನಿಲ್ಲ. ಒಂದು ಕರವಸ್ತ್ರಕ್ಕೆ ನೀಲಗಿರಿ ತೈಲ ಬಳಸಿ ಉಪಯೋಗಿಸಿದರೂ ಸಾಕು ಎಂದು ಹೇಳಿದ ಅವರು, ಮಾಸ್ಕ್​ಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ದೊರಕುವ ಹಾಗೆ ಮಾಡುತ್ತೇವೆ. ಕನಿಷ್ಠ ಮೂರು ತಿಂಗಳಿಗೆ ಆಗುವಷ್ಟು ಮಾಸ್ಕ್ ಇದೆ. ಜೆನೆರಿಕ್ ಮೆಡಿಕಲ್ ಕೇಂದ್ರಗಳಲ್ಲಿ ಮಾಸ್ಕ್ ಸಿಗುತ್ತಿದೆ. ಹೆಚ್ಚು ಬೆಲೆಗೆ ಮಾರುವವರ ಮಾಹಿತಿ ನೀಡಿದರೆ ಅವರ ಪರವಾನಿಗೆ ರದ್ದು ಮಾಡುತ್ತೇವೆ ಎಂದು ವಾಗ್ದಾನ ನೀಡಿದರು.

ಕೊರೋನಾ ಸೋಂಕು ಹರಡುತ್ತಿರುವ ಈ ತುರ್ತು ಸಂದರ್ಭದಲ್ಲಿ ವೈದ್ಯರ ಸೇವೆ ಪ್ರಶಂಸನೀಯ. ಯುದ್ಧರಂಗದಲ್ಲಿ ಯೋಧರು ಹೋರಾಡುವ ರೀತಿ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಅವರು ರಜೆ ಕೂಡ ತೆಗೆದುಕೊಳ್ಳುವಂತಿಲ್ಲ. ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಗ್ಯ ಸಚಿವರು ವಿವರಿಸಿದರು.

ವಿಶ್ವಾದ್ಯಂತ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಜನರಿಗೆ ಕೊರೋನಾ ವೈರಸ್ ಸೋಂಕು ಹರಡಿದೆ. ಕರ್ನಾಟಕದಲ್ಲಿ ಒಬ್ಬನ ಸಾವಾಗಿದ್ದು, ಸೋಂಕಿತರ ಸಂಖ್ಯೆ 8ಕ್ಕೇರಿದೆ. ಸೋಂಕು ದಿನೇದಿನೇ ದ್ವಿಗುಣಗೊಳ್ಳುತ್ತಲೇ ಇರುವುದು ಗಮನಾರ್ಹ.

First published: