ಅಮೆರಿಕ ಅಧ್ಯಕ್ಷ ಟ್ರಂಪ್​ಗೆ ಕೊರೋನಾ ಬಂದಿಲ್ಲವೆಂದು ಎಸ್.ಆರ್. ಪಾಟೀಲ್ ನಿಟ್ಟುಸಿರು ಬಿಟ್ಟಿದ್ದು ಯಾಕೆ ಗೊತ್ತಾ?

ರಾಜ್ಯದ ಹಲವು ಜಿಲ್ಲೆಯಲ್ಲಿ ವಿಶೇಷ ವಾರ್ಡ್ ಮಾಡಿದ್ದಾರೆ. ಆದರೆ, ಕೊರೋನಾ ತಪಾಸಣೆ ಮಾಡುವ ಸೂಕ್ತ ಲ್ಯಾಬ್ ಇಲ್ಲ ಎಂದು ಎಸ್.ಆರ್. ಪಾಟೀಲ್ ವಿಷಾದಿಸಿದ್ದಾರೆ.,

ವಿಧಾನಸೌಧ.

ವಿಧಾನಸೌಧ.

  • Share this:
ಬೆಂಗಳೂರು(ಮಾ. 16): ಇವತ್ತು ವಿಧಾನಪರಿಷತ್ ಕಲಾಪದಲ್ಲಿ ಕೊರೋನಾ ವೈರಸ್ ಚರ್ಚೆಯೇ ಪ್ರಮುಖವಾಗಿತ್ತು. ದೇಶದಲ್ಲಿ ಕೋವಿಡ್-19 ವೈರಸ್​ಗೆ ಮೊದಲ ಬಲಿಯಾಗಿದ್ದು ರಾಜ್ಯದ ವ್ಯಕ್ತಿಯೇ ಎಂಬುದು ಜನಪ್ರತಿನಿಧಿಗಳಿಗೆ ಆತಂಕ ಹೆಚ್ಚಿಸಿದೆ. ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಅವರು ಈ ಬೆಳವಣಿಗೆಗೆ ಶಾಕ್ ಆಗಿದ್ದು, ಇದು ಆರೋಗ್ಯ ಇಲಾಖೆಗೆ ಒಂದು ಕಪ್ಪು ಚುಕ್ಕೆ ಎಂದು ಬಣ್ಣಿಸಿದರು. ಹಾಗೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊರೋನಾ ಸೋಂಕು ತಗುಲಿಲ್ಲ ಎಂಬ ಸುದ್ದಿಗೆ ನಿಟ್ಟುಸಿರುಬಿಟ್ಟರು.

ಟ್ರಂಪ್​ಗೆ ಸೋಂಕು ತಗುಲಿಲ್ಲವೆಂದು ಪಾಟೀಲರು ನಿಟ್ಟುಸಿರು ಬಿಡಲು ಕಾರಣವಿದೆ. “ಟ್ರಂಪ್ ಭಾರತಕ್ಕೆ ಬಂದ ಸಂದರ್ಭದಲ್ಲಿ ಇಲ್ಲಿ ಅವರು ಅನೇಕ ಜನರಿಗೆ ಹ್ಯಾಂಡ್ ಶೇಕ್ ಮಾಡಿ ಹೋಗಿದ್ದರು. ಅವರಿಗೆ ಕೊರೋನಾ ಬಂದೇ ಬಿಟ್ಟಿದ್ದರೆ ಏನಪ್ಪಾ ಕತೆ ಎಂದುಕೊಂಡಿದ್ದೆ. ಆದರೆ, ಅವರಿಗೆ ಸೋಂಕು ತಗುಲಿಲ್ಲ ಎನ್ನುವುದು ಸಮಾಧಾನ ತಂದಿದೆ” ಎಂದು ಪರಿಷತ್ ಚರ್ಚೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರೂ ಆದ ಎಸ್.ಆರ್. ಪಾಟೀಲ್ ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಎಂದಿಗೂ ದೇಶದಿಂದ ಮುಕ್ತವಾಗಲ್ಲ, ಗಾಂಧಿ ಕುಟುಂಬ ನಾಶವಾಗಲ್ಲ; ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​

ಅಮೆರಿಕ ಮೊದಲಾದ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಮೆರಿದಲ್ಲಿ ಕೊರೋನಾ ನಿಯಂತ್ರಣಕ್ಕೆ 5 ಸಾವಿರ ಕೋಟಿ ಡಾಲರ್, ಅಂದರೆ 3.5 ಲಕ್ಷ ಕೋಟಿ ರೂಪಾಯಿ ಹಣವನ್ನು ವಿನಿಯೋಗ ಮಾಡಿದ್ದಾರೆ. ವಿಶ್ವಸಂಸ್ಥೆ ಕೂಡ ಕೊರೋನಾವನ್ನು ಪ್ಯಾಂಡೆಮಿಕ್ (Pandemic) ಎಂದು ಘೋಷಿಸಿದೆ. ಪ್ರಪಂಚದ 150 ರಾಷ್ಟ್ರಗಳಲ್ಲಿ 1.5 ಲಕ್ಷ ಮಂದಿ ರೋಗಕ್ಕೆ ತುತ್ತಾಗಿದ್ದಾರೆ. 6 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆದರೆ, ನಮ್ಮ ರಾಜ್ಯದಲ್ಇ ಮತ್ತು ರಾಷ್ಟ್ರದಲ್ಲಿ ಕೊರೋನಾವನ್ನು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ನಮ್ಮದು ವಿಶ್ವದಲ್ಲೇ ಎರಡನೇ ಅತಿಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರ. ಇಲ್ಲಿ ಕೊರೋನಾ ಸೋಂಕು ಮೂರು ಮತ್ತು ನಾಲ್ಕನೇ ಹಂತಕ್ಕೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಎಸ್.ಆರ್. ಪಾಟೀಲ್ ಎಚ್ಚರಿಸಿದರು.

ಸರ್ಕಾರ ಸೂಕ್ತ ತಪಾಸಣೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೆ ಮೊದಲ ಹಂತರ ರೋಗಿಗಳಿಂದ ರೋಗ ಹರಡುತ್ತಲೇ ಇರಲಿಲ್ಲ. ಸೌದಿ ಅರೇಬಿಯಾದಿಂದ ಬಂದ ಸಂದರ್ಭದಲ್ಲಿ ಆತನಿಗೆ (ಕಲಬುರ್ಗಿಯ ವ್ಯಕ್ತಿ) ಸೂಕ್ತ ತಪಾಸಣೆ ಆಗಿದ್ದರೆ ಬೇರೆಯವರಿಗೆ ಹರಡುತ್ತಿರಲಿಲ್ಲ. ವಿದೇಶದಿಂದ ಬಂದ ನಾಗರಿಕರನ್ನು ವೈಜ್ಞಾನಿಕವಾಗಿ ತಪಾಸಣೆಗೆ ಒಳಪಡಿಸಿದ್ದರೆ ಸಮಸ್ಯೆ ಇಷ್ಟು ಉಲ್ಬಣಗೊಳ್ಳುತ್ತಿರಲಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬಫರ್​ ಜೋನ್​ ಲೆಕ್ಕಿಸದೆ, ಬೆಂಗಳೂರು ಕೆರೆಗಳಿಗೆ ಮಣ್ಣು ಸುರಿದು ಅಕ್ರಮವಾಗಿ ಒತ್ತುವರಿ; ಶಾಸಕ ಆರಗ ಜ್ಞಾನೇಂದ್ರ ಆರೋಪ

ರಾಜ್ಯದ ಹಲವು ಜಿಲ್ಲೆಯಲ್ಲಿ ವಿಶೇಷ ವಾರ್ಡ್ ಮಾಡಿದ್ದಾರೆ. ಆದರೆ, ಸೂಕ್ತ ಲ್ಯಾಬ್ ಇಲ್ಲ. ಕೊರೋನಾ ತಪಾಸಣೆ ಮಾಡುವ ಸೂಕ್ತ ಪ್ರಯೋಗಾಲಯ ಇಲ್ಲ ಎಂದರೆ ಹೇಗೆ? ಎಂದು ವಿಷಾದಿಸಿದ ಎಸ್.ಆರ್. ಪಾಟೀಲ್, ತಾವೆಲ್ಲಾ ಒಂದೇ ಕುಟುಂಬದ ಸದಸ್ಯರಂತೆ ಒಟ್ಟಾಗಿ ಶ್ರಮಿಸಿ ಕೊರೋನಾವನ್ನು ತೊಲಗಿಸೋಣ ಎಂದು ಕರೆ ನೀಡಿದರು.

ಇದೇ ವೇಳೆ, ಕೈಕೊಟ್ಟಿದ್ದರಿಂದ ಕೊರೋನಾ ವೈರಸ್ ಹರಡಿದೆ ಎಂದು ಎಸ್.ಆರ್. ಪಾಟೀಲ್ ಹೇಳಿದ್ದು ವಿಧಾನಪರಿಷತ್​ನಲ್ಲಿ ಒಂದಷ್ಟು ಸ್ವಾರಸ್ಯಕರ ಚರ್ಚೆಗೂ ಕಾರಣವಾಯಿತು. ಕೈಕೊಟ್ಟರೆ ಕೊರೋನಾ ಹುಟ್ಟುತ್ತದೆ ಎಂದು ಪಾಟೀಲರು ಹೇಳಿದಾಗ ಮಧ್ಯೆ ಎದ್ದು ನಿಂತ ಬಿಜೆಪಿ ಸದಸ್ಯ ರವಿಕುಮಾರ್, ಇದು’ಕೈ’ ನಿಂದಲೇ ಬಂದಿದ್ದು ಎಂದು ಕಿಚಾಯಿಸಿದರು. ಅದಕ್ಕೆ ತಿರುಗೇಟು ನೀಡಿದ ಎಸ್.ಆರ್. ಪಾಟೀಲ್, ಹೌದು ನಮಗೆ ಮತ್ತು ಹೊರಟ್ಟಿಯವರಿಗೆ ಕೆಲವರು ಕೈಕೊಟ್ಟಿದ್ದರಿಂದಲೇ ಚೀನಾದಲ್ಲಿ ಕೊರೋನಾ ಹುಟ್ಟಿತು ಎನ್ನುವ ಅನುಮಾನವಿದೆ ಎಂದು ಪರೋಕ್ಷವಾಗಿ ಆರಪೇಷನ್ ಕಮಲವನ್ನು ಪ್ರಸ್ತಾಪಿಸಿ ಕುಟುಕಿದರು.

First published: