ಕೊರೋನಾ ವೈರಸ್ನ ಎರಡನೇ ಅಲೆಯಿಂದ ತತ್ತರಿಸಿರುವ ಭಾರತದಲ್ಲಿ, ಕೋವಿಡ್ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ತಮ್ಮ ರೋಗಿಗಳನ್ನು ಮತ್ತು ಆತ್ಮೀಯರನ್ನು ಉಳಿಸಿಕೊಳ್ಳಲು, ವೈದ್ಯರು ಮತ್ತು ಕುಟುಂಬದವರು ಪೋಸ್ಟ್ ಮಾಡುವ ಹೃದಯ ವಿದ್ರಾವಕ ವಿಡಿಯೋಗಳು ಮತ್ತು ತುರ್ತು ಕರೆಯ ಸಂದೇಶಗಳು (ಎಸ್ಓಎಸ್) ಸಾಮಾಜಿಕ ಮಾಧ್ಯಮವನ್ನು ಆವರಿಸಿಕೊಂಡುಬಿಟ್ಟಿವೆ. ಈ ನಡುವೆ ಮಂಗಳವಾರ, ಕೋವಿಡ್ ತುರ್ತು ವಾರ್ಡ್ನ ಸೋಂಕಿತೆಯೊಬ್ಬರು “ಲವ್ ಯೂ ಜಿಂದಗಿ” ಬಾಲಿವುಡ್ ಹಾಡನ್ನು ಕೇಳುವ ಮೂಲಕ ಮಾರಣಾಂತಿಕ ಕಾಯಿಲೆಯ ನೋವನ್ನು ಮರೆಯಲು ಪ್ರಯತ್ನಿಸುತ್ತಾ, ತನ್ನನ್ನು ತಾನು ಹುರಿದುಂಬಿಸಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆದರೆ, ಶುಕ್ರವಾರ ಮೂವತ್ತು ವರ್ಷದ ಆ ಮಹಿಳೆಯನ್ನು ಕೊನೆಗೂ ಕೊರೋನಾ ಬಲಿ ತೆಗೆದುಕೊಂಡಿದ್ದು, ಈ ಸುದ್ದಿ ಹಲವಾರು ಮಂದಿಯನ್ನು ಬೆಚ್ಚಿಬೀಳಿಸಿದೆ. ಆಕೆಯ ಸಾವಿಗೆ, ಸಾವಿರಾರು ಮಂದಿ ಸೇರಿದಂತೆ, ಬಾಲಿವುಡ್ ನಟ ಮತ್ತು ಸಮಾಜ ಸೇವಕ ಸೋನು ಸೂದ್ ಕೂಡ ಸಂತಾಪ ಸೂಚಿಸಿದ್ದಾರೆ.
“ತಾನು ಮತ್ತೆ ತನ್ನ ಕುಟುಂಬದವರನ್ನು ನೋಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ಆಕೆ ಯಾವತ್ತೂ ಊಹಿಸಿರಲಿಕ್ಕಿಲ್ಲ. ಇದು ಬದುಕು ಮಾಡಿರುವ ಬಹು ದೊಡ್ಡ ಅನ್ಯಾಯ. ಬದುಕಿ ಬಾಳಬೇಕಿದ್ದ ಎಷ್ಟೋ ಜೀವಗಳು ಸಾವನ್ನಪ್ಪಿವೆ. ಮುಂದೆ ನಮ್ಮ ಜೀವನ ಎಷ್ಟೇ ಸಹಜ ಸ್ಥಿತಿಗೆ ಮರಳಿದರೂ, ಈ ದಿನಗಳನ್ನು ನಾವು ಮರೆಯಲು ಖಂಡಿತಾ ಸಾಧ್ಯವಾಗುವುದಿಲ್ಲ” ಎಂದು ಸೋನು ಸೂದ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಆಕೆಯ ಪುಟ್ಟ ಮಗು ಈಗ ತಾಯಿಯನ್ನು ಕಳೆದುಕೊಂಡು ಅನಾಥವಾಗಿದೆ.
ಆ ಮಹಿಳೆ ಐಸಿಯು ಬೆಡ್ ಸಿಗದೆ, ಕೋವಿಡ್ ತುರ್ತು ವಾರ್ಡ್ನಲ್ಲಿ ಹತ್ತು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ವೈರಲ್ ಆಗಿದ್ದ ಈ ವಿಡಿಯೋವನ್ನು ಚಿತ್ರೀಕರಿಸಲಾಗಿತ್ತು. ಆಕೆ ವೈದ್ಯರಲ್ಲಿ ತನಗಾಗಿ ಯಾವುದಾದರೂ ಹಾಡನ್ನು ಹಾಕಲು ಸಾಧ್ಯವೇ ಎಂದು ಕೇಳಿಕೊಂಡಾಗ, ಆರೋಗ್ಯ ಸಿಬ್ಬಂದಿ “ಲವ್ ಯೂ ಜಿಂದಗಿ” ಹಾಡನ್ನು ಹಾಕಿದ್ದರು. ಮೂಲ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ, ಡಾ. ಮೋನಿಕಾ ಲಂಗೇ, “ಆಕೆಗೆ ಕೇವಲ 30 ವರ್ಷ ವಯಸ್ಸು, ಐಸಿಯು ಬೆಡ್ ಸಿಗದ ಕಾರಣ, ನಾವು ಕಳೆದ ಹತ್ತು ದಿನಗಳಿಂದ ಕೋವಿಡ್ ತುರ್ತು ವಾರ್ಡ್ನಲ್ಲಿ ಆಕೆಗೆ ಚಿಕಿತ್ಸೆ ನೀಡುತ್ತಿದ್ದೆವು. ಎನ್ಐವಿ ಆಸರೆಯಲ್ಲಿದ್ದ ಆಕೆಗೆ ರೆಮ್ಡಿಸಿವಿರ್, ಪ್ಲಾಸ್ಮಾ ಥೆರಪಿ ಇತ್ಯಾದಿಗಳನ್ನು ನೀಡಲಾಗಿತ್ತು. ಆಕೆ ಇಚ್ಚಾ ಶಕ್ತಿಯುಳ್ಳ ಗಟ್ಟಿ ಹುಡುಗಿಯಾಗಿದ್ದಳು. ಆಕೆ ತಾನು ಹಾಡು ಕೇಳಬೇಕೆಂದು ವಿನಂತಿಸಿಕೊಂಡಿದ್ದಾಗ ನಾನು ಅನುಮತಿ ನೀಡಿದ್ದೆ” ಎಂದು ತನ್ನ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನು ಓದಿ: ಇವರಷ್ಟು ಖುಷಿಯಾಗಿರುವ ಸೋಂಕಿತೆಯನ್ನು ನೋಡೇ ಇಲ್ಲ; ವಿಡಿಯೋ ವೈರಲ್ ಬೆನ್ನಲ್ಲೇ ಶಾಕಿಂಗ್ ನ್ಯೂಸ್!
ಮತ್ತೊಂದು ಪೋಸ್ಟ್ನಲ್ಲಿ, ಆಕೆಗೆ ಎರಡು ದಿನಗಳ ನಂತರ ಐಸಿಯು ಬೆಡ್ ಸಿಕ್ಕಿದೆ. ಆದರೆ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಆ ವೈದ್ಯೆ ಹೆಚ್ಚಿನ ಮಾಹಿತಿ ನೀಡಿದ್ದರು. “ಆಕೆಗೆ ಐಸಿಯು ಬೆಡ್ ಸಿಕ್ಕಿದೆ, ಆದರೆ ಆಕೆಯ ಆರೋಗ್ಯ ಸ್ಥಿರವಾಗಿಲ್ಲ. ಕೆಲವೊಮ್ಮೆ ನಾನೆಷ್ಟು ಅಸಹಾಯಕಳು ಎನಿಸಿಬಿಡುತ್ತದೆ, ಈ ದಿಟ್ಟ ಹುಡುಗಿಗಾಗಿ ದಯವಿಟ್ಟು ಎಲ್ಲರೂ ದೇವರಲ್ಲಿ ಪ್ರಾರ್ಥಿಸಿ. ನಮ್ಮ ಕೈಯಲ್ಲಿ ಯಾವುದೂ ಇಲ್ಲ, ಎಲ್ಲವೂ ಆ ಭಗವಂತನ ಇಚ್ಛೆ. ಪುಟ್ಟ ಕಂದಮ್ಮವೊಂದು ಮನೆಯಲ್ಲಿ ಈಕೆಯನ್ನು ಎದುರು ನೋಡುತ್ತಿದೆ. ದಯವಿಟ್ಟು ದೇವರಲ್ಲಿ ಪ್ರಾರ್ಥಿಸಿ” ಎಂದು ಡಾ. ಮೋನಿಕಾ ಬರೆದುಕೊಂಡಿದ್ದರು.
ಶುಕ್ರವಾರ ಆಕೆ ಕೋವಿಡ್ನಿಂದ ಸಾವನ್ನಪ್ಪಿದ ಕುರಿತು ಟ್ವೀಟ್ ಮಾಡಿದ್ದ ಡಾ. ಲಂಗೇ, ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದ ಆಕೆಯ ಮಗುವಿನ ಕುರಿತು ದುಃಖ ವ್ಯಕ್ತಪಡಿಸಿದ್ದರು. ಆಕೆಯ ವಿಡಿಯೋವನ್ನು ಟ್ವಿಟ್ಟರ್ನಲ್ಲಿ 1.1ಮಿಲಿಯನ್ ಜನರು ವೀಕ್ಷಿಸಿದ್ದರು. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಸಾಧ್ಯವಾದಷ್ಟು ಬೇಗ ಈ ಮಾರಣಾಂತಿಕ ಸಾಂಕ್ರಾಮಿಕ ರೋಗದಿಂದ ಎಲ್ಲರಿಗೂ ಮುಕ್ತಿ ಸಿಗುವಂತಾಗಲಿ ಎಂದು ನೆಟ್ಟಿಗರು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ